ಜಲಾಶಯದ ಗಿಡಗಂಟಿಗಳಲ್ಲಿ ಸಿಕ್ಕಿಕೊಂಡಿದ್ದ ಅನಿಲ್ ಮೃತ ದೇಹವನ್ನು ಇಂದು ಬೆಳಗ್ಗೆ 5:55ರ ಮುಂಜಾವಿನಲ್ಲಿ ಹೊರತೆಗೆಯಲಾಯಿತು.

ಬೆಂಗಳೂರು(ನ. 10): ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ನಟ ರಾಘವ ಉದಯ್ ಬಳಿಕ ಈಗ ಮತ್ತೊಬ್ಬ ಮೃತ ನಟ ಅನಿಲ್ ಶವವೂ ಸಿಕ್ಕಿದೆ. 72 ಗಂಟೆಗಳ ಕಾರ್ಯಾಚರಣೆ ಬಳಿಕ ಅನಿಲ್ ಶವ ಪತ್ತೆಯಾಗಿದೆ. ಜಲಾಶಯದ ಗಿಡಗಂಟಿಗಳಲ್ಲಿ ಸಿಕ್ಕಿಕೊಂಡಿದ್ದ ಅನಿಲ್ ಮೃತ ದೇಹವನ್ನು ಇಂದು ಬೆಳಗ್ಗೆ 5:55ರ ಮುಂಜಾವಿನಲ್ಲಿ ಹೊರತೆಗೆಯಲಾಯಿತು. ಪಣಂಬೂರಿನ ನುರಿತ ಮುಳುಗು ತಜ್ಞರ ತಂಡ, ಎನ್'ಡಿಆರ್'ಎಫ್, ಎಸ್'ಡಿಆರ್'ಎಫ್, ಅಗ್ನಿಶಾಮಕ ಸಿಬ್ಬಂದಿ ಅನಿಲ್ ಮೃತದೇಹದ ಶೋಧಕ್ಕಾಗಿ ಜಂಟಿ ಕಾರ್ಯಾಚರಣೆ ನಡೆಸಿದ್ದವು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿನ್ನೆ ಮಧ್ಯಾಹ್ನ 3 ಗಂಟೆಗೆ ನಟ ರಾಘವ್ ಉದಯ್ ಅವರ ಮೃತದೇಹ ಪತ್ತೆಯಾಗಿತ್ತು. ತಿಪ್ಪಗೊಂಡನಹಳ್ಳಿ ಬಳಿಯೇ ವೈದ್ಯರ ತಂಡ ಆಗಮಿಸಿ ಪೋಸ್ಟ್ ಮಾರ್ಟಮ್ ನಡೆಸಿತ್ತು. ಇಂದು ಬೆಳಗ್ಗೆ ಉದಯ್ ಅಂತ್ಯಸಂಸ್ಕಾರ ನೆರವೇರಲಿದೆ.

ನವೆಂಬರ್ 7ರ ಮಧ್ಯಾಹ್ನದಂದು ಮಾಸ್ತಿಗುಡಿ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣ ವೇಳೆ ಹೆಲಿಕಾಪ್ಟರ್'ನಿಂದ ನೀರಿಗೆ ಹಾರುವ ಸ್ಟಂಟ್ ಮಾಡುವ ವೇಳೆ ರಾಘವ ಉದಯ್ ಮತ್ತು ಅನಿಲ್ ಕುಮಾರ್ ಸಾವನ್ನಪ್ಪಿದ್ದರು. ಅವರ ಜೊತೆ ನೀರಿಗೆ ಹಾರಿದ್ದ ನಾಯಕನಟ ದುನಿಯಾ ವಿಜಯ್ ಅದೃಷ್ಟವಶಾತ್ ಬಚಾವ್ ಆಗಿದ್ದರು. ಚಿತ್ರೀಕರಣಕ್ಕೆ ಬೇಕಾದ ಮುಂಜಾಗ್ರತಾ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿತ್ತು. ಅಲ್ಲದೇ, ಪೊಲೀಸ್ ಹಾಗೂ ಬಿಡಬ್ಲ್ಯೂಎಸ್'ಎಸ್'ಬಿ ಅನುಮತಿ ಇಲ್ಲದೆಯೇ ಚಿತ್ರೀಕರಣ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಸಾಹಸ ನಿರ್ದೇಶಕ ರವಿ ವರ್ಮಾ, ನಿರ್ಮಾಪಕ ಸುಂದರ್, ನಿರ್ದೇಶಕ ನಾಗಶೇಖರ್ ಹಾಗೂ ನಾಯಕ ನಟ ದುನಿಯಾ ವಿಜಯ್ ವಿರುದ್ಧ ದೂರು ದಾಖಲಾಗಿದೆ.