ಮಕ್ಕಳ ಮೇಲೇ ಕುಸಿಯಿತು ಅಂಗನವಾಡಿ ಚಾವಣಿ | 5 ಮಕ್ಕಳಿಗೆ ಗಾಯ | ಒಬ್ಬಳ ತಲೆಗೆ ಏಟು, ಇನ್ನೊಬ್ಬಳ ಕಾಲು ಮುರಿತ | ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರು ಎಂಬಲ್ಲಿ ಘಟನೆ
ಲಕ್ಷ್ಮೇಶ್ವರ (ಫೆ. 22): ಕಳಪೆ ಕಾಮಗಾರಿಯಿಂದಾಗಿ ಅಂಗನವಾಡಿ ಚಾವಣಿಯ ಕೆಳ ಪದರ (ಪ್ಲಾಸ್ಟರಿಂಗ್) ಕುಸಿದು ಐವರು ಪುಟಾಣಿ ಮಕ್ಕಳು ಗಾಯಗೊಂಡಿರುವ ದುರ್ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರು ಗ್ರಾಮದಲ್ಲಿ ನಡೆದಿದೆ. ಅದರಲ್ಲಿ ಒಬ್ಬ ಪುಟಾಣಿಗೆ ಕಾಲು ಮುರಿದಿದ್ದರೆ, ಮತ್ತೊಬ್ಬಳು ಪುಟಾಣಿಗೆ ತಲೆಗೆ ಗಂಭೀರ ಗಾಯವಾಗಿದೆ.
"
ಬಾಲೆಹೊಸೂರಿನ ವಾರ್ಡ್ ನಂ.2 ದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಈ ಸಂದರ್ಭದಲ್ಲಿ 18 ಚಿಕ್ಕ ಮಕ್ಕಳು ಅಂಗನವಾಡಿಯಲ್ಲಿದ್ದರು. ಅದರಲ್ಲಿ ವಿಜಯಲಕ್ಷ್ಮೇ ಗುಡ್ಡಪ್ಪ ಪುಟ್ಟಮ್ಮನವರ(4), ಕಾವ್ಯಾ ಹೊನಕೇರಪ್ಪ ಪುಟ್ಟಮ್ಮನವರ(3), ದೀಪಾ ಮೌನೇಶ ಹುಲ್ಲೂರು(4), ಸಂಗೀತ ಡಿಳ್ಳೆಪ್ಪ ಪುಟ್ಟಮ್ಮನವರ(4), ಸುಶ್ಮಿತಾ ದೇವಪ್ಪ ಮತ್ತೂರ(4) ಗಾಯಗೊಂಡಿದ್ದಾರೆ.
ಇವರಲ್ಲಿ ವಿಜಯಲಕ್ಷ್ಮೇ ಎಂಬ ಪುಟಾಣಿ ಬಾಲಕಿಯ ಕಾಲು ಮುರಿದಿದೆ. ದೀಪಾ ಹುಲ್ಲೂರ ಎಂಬ ಪುಟಾಣಿಯ ಬಾಲಕಿಯ ತಲೆಗೆ ತೀವ್ರ ಪಟ್ಟಾಗಿದೆ. ಈ ಹಿನ್ನೆಲೆಯಲ್ಲಿ ಈ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಉಳಿದ ಮೂವರು ಮಕ್ಕಳನ್ನು ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಂಜೆಯ ಹೊತ್ತಿಗೆ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
2000ನೇ ಇಸ್ವಿಯಲ್ಲಿ ಈ ಅಂಗನವಾಡಿ ಕಟ್ಟಡ ನಿರ್ಮಿಸಲಾಗಿದೆ. ಈ ಸಂದರ್ಭದಲ್ಲಿ ಕಾಮಗಾರಿ ಕಳಪೆಯಾಗಿದೆ ಎಂದು ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದಿದ್ದರು ಎನ್ನಲಾಗಿದೆ. ಕಳೆದ 2 ವರ್ಷದ ಹಿಂದೆ ಒಮ್ಮೆ ಇದೇ ಕಟ್ಟಡದ ಇನ್ನೊಂದು ಪಾಶ್ರ್ವದಲ್ಲಿ ಚಾವಣಿಯ ಕೆಳ ಪದರ ಕುಸಿದಿತ್ತು. ಆಗ ಮಕ್ಕಳನ್ನು ರೂಮ್‌ನ ಇನ್ನೊಂದು ಭಾಗಕ್ಕೆ ಸ್ಥಳಾಂತರಿಸಲಾಗಿತ್ತು.
ಈ ಸಂದರ್ಭದಲ್ಲಿ ಕಟ್ಟಡ ದುರಸ್ತಿ ಅಥವಾ ಬೇರೆ ಕಟ್ಟಡ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಆದರೂ, ಅಧಿಕಾರಿಗಳು ಈ ವಿಷಯದಲ್ಲಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಚಾವಣಿ ಕುಸಿದಿರುವ ಸ್ಥಳಕ್ಕೆ ಗ್ರಾಮಸ್ಥರು ಸಿಡಿಪಿಒ ಅವಿನಾಶ ಗೋಟಖಿಂಡಿ ಅವರನ್ನು ಕರೆಯಿಸಿಕೊಂಡು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 22, 2019, 3:43 PM IST