ಬೆಂಗಳೂರು (ಮೇ. 21): ರಾಜ್ಯ ಸರ್ಕಾರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ತರಗತಿ ಪ್ರಾರಂಭಿಸುವ ಆದೇಶ ರದ್ದುಗೊಳಿಸಿ ಅಂಗನವಾಡಿಗಳಲ್ಲೇ ಎಲ್‌ಕೆಜಿ-ಯುಕೆಜಿ ತರಗತಿ ಪ್ರಾರಂಭಿಸಲು ಆದೇಶಿಸಬೇಕು ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್‌.ವರಲಕ್ಷ್ಮಿ ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ಹೊರಡಿಸಿರುವ ಅದೇಶ ಅವೈಜ್ಞಾನಿಕವಾಗಿದ್ದು, ಅಂಗನವಾಡಿ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಒಂದು ಇಲಾಖೆಯನ್ನು ಬಲಪಡಿಸಲು ಮತ್ತೊಂದು ಇಲಾಖೆಯ ಯೋಜನೆಯನ್ನು ದುರ್ಬಲಗೊಳಿಸಿದಂತಾಗುತ್ತದೆ.

ಒಂದು ವೇಳೆ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ತರಗತಿ ಪ್ರಾರಂಭಿಸಿದರೆ ಕಾಲಕ್ರಮೇಣ ಅಂಗನವಾಡಿಗಳು ಮುಚ್ಚುವುದು ನಿಶ್ಚಿತ. ಹಾಗಾಗಿ ಸರ್ಕಾರ ಕೂಡಲೇ ಈ ಆದೇಶ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ 65911 ಅಂಗನವಾಡಿ ಕೇಂದ್ರಗಳಿವೆ. ಈ ಪೈಕಿ 3331 ಮಿನಿ ಅಂಗನವಾಡಿಗಳಿವೆ. ಪ್ರಸ್ತುತ ರಾಜ್ಯದಲ್ಲಿ 3ರಿಂದ 6 ವರ್ಷದೊಳಗಿನ 16 ಲಕ್ಷ ಮಕ್ಕಳು ಅಂಗನವಾಡಿಗಳಿಗೆ ಬರುತ್ತಿದ್ದಾರೆ. ಸರ್ಕಾರದ ಆದೇಶದಂತೆ ಪ್ರಾಥಮಿಕ ಶಾಲೆಗಳ ಎಲ್‌ಕೆಜಿ-ಯುಕೆಜಿ ತರಗತಿಗಳಿಗೆ ದಾಖಲಾದರೆ ಅಂಗನವಾಡಿಗಳ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ.

ಅಲ್ಲದೆ, ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಾಗಾಗಿ ಅಂಗನವಾಡಿ ಕೇಂದ್ರಗಳನ್ನೇ ಶಿಶುಪಾಲನಾ ಕೇಂದ್ರಗಳಾಗಿ ಪರಿವರ್ತಿಸಿ, ಎಲ್‌ಕೆಜಿ-ಯುಕೆಜಿ ಪ್ರಾರಂಭಿಸಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಕ್ತ ವೇತನ ಹಾಗೂ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.