ಮರಾವತಿ[ಅ.06]: ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಸಮಾಜ ತಲೆತಗ್ಗಿಸುವಂತಹ ಘಟನೆ ಬೆಳಕಿಗೆ ಬಂದಿದೆ. ಅವಿವಾಹಿತ ತಾಯಿಯೊಬ್ಬಳು ತನ್ನ ನವಜಾತ ಶಿಶುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪರಾರಿಯಾಗಿದ್ದು, ವೈದ್ಯರು ಕೂಡಾ ದನ್ನು ದೇವಸ್ಥಾನದ ಬಳಿ ರಸ್ತೆಗೆಸೆದು ಹೋಗಿದ್ದಾರೆ. ರಸ್ತೆ ಬದಿಯಲ್ಲಿ ನರಳಾಡುತ್ತಿದ್ದ ಶಿಶುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಪ್ರಾಣ ಬಿಟ್ಟಿದೆ. ಸದ್ಯ ಪ್ರಕರಣ ದಾಖಲಾಗಿದ್ದು, ಖಾಸಗಿ ವೈದ್ಯ ಹಾಗೂ ಓರ್ವ ನರ್ಸ್ ನ್ನು ಬಂಧಿಸಲಾಗಿದೆ.

ಪ್ರಕರಣ ಸಂಬಂಧ ಮಾಹಿತಿ ನೀಡಿದ ಪೊಲೀಸರು ' ತಾಯಿಯೊಬ್ಬಳು ತನ್ನ ಶಿಶುವನ್ನು ಅಕ್ಟೋಬರ್ 1ರಂದು ಮಚಲೀಪಟ್ಟಣದ ಬಳಿ ಇರುವ ಆಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾಗಿದ್ದಳು. ಅದೇ ದಿನ ಡಾ. ಧನ್ವಂತರಿ ಶ್ರೀನಿವಾಸಾಚಾರ್ಯ ಹಾಗೂ ನರ್ಸ್ ಬೇಬಿ ರಾನಿ ನಿರ್ದೇಶನದಂತೆ ಆಸ್ಪತ್ರೆ ಸಿಬ್ಬಂದಿ ಹತ್ತಿರದ ದೇವಸ್ಥಾನದ ಬಳಿ ಎಸೆದು ಬಂದಿದ್ದರು' ಎಂದಿದ್ದಾರೆ.

ಸ್ಥಳೀಯರಿಂದ ಈ ಕುರಿತು ಮಾಹಿತಿ ಪಡೆದ ಪೊಲೀಸರು ಶಿಶುವನ್ನು ಜಿಲ್ಲಾಸ್ಪತ್ರೆಗೆ ಒಯ್ದಿದ್ದಾರೆ. ಜಿಲ್ಲಾಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ವಿಜಯವಾಡದ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪುಟ್ಟ ಕಂದ ಕೊನೆಯುಸಿರೆಳೆದಿದೆ.

ಸದ್ಯ ಮಗುವಿನ ತಾಯಿ, ಖಾಸಗಿ ವೈದ್ಯ ಹಾಗೂ ನರ್ಸ್ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. ತಾಯಿ ಹಾಗೂ ಹೆರಿಗೆ ಮಾಡಿಸಿದ ಡಾಕ್ಟರ್ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.