ಬೆಂಗಳೂರು :  ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಅಂಡಮಾನ್‌ ನಿಕೋಬಾರ್‌ ಮೂಲದ ಯುವತಿ ಪುಷ್ಪಾ ಅರ್ಚನಾ ಲಾಲ್‌ (26) ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಇಬ್ಬರು ವಕೀಲರು ತನಗೆ ನೀಡಿದ್ದಾರೆ ಎನ್ನಲಾದ ಲೈಂಗಿಕ ಕಿರುಕುಳ ಬಗ್ಗೆ ಸುಪ್ರೀಂಕೋರ್ಟ್‌ ಹಾಗೂ ರಾಜ್ಯ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ, ಕೇಂದ್ರ ಗೃಹ ಸಚಿವರು ಸೇರಿದಂತೆ ಸಾಂವಿಧಾನಿಕ ಸ್ಥಾನಮಾನ ಹೊಂದಿದ 14 ಮಂದಿಗೆ ದೂರು ನೀಡಿದ್ದ ಕುತೂಹಲಕಾರಿ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೋಗಾಯ್‌, ಹಿರಿಯ ನ್ಯಾಯಮೂರ್ತಿಗಳಾದ ಮದನ್‌ ಲೋಕೂರ್‌, ಡಿ.ವೈ.ಚಂದ್ರಚೂಡ್‌, ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ, ಕೇಂದ್ರ ಸಚಿವ ರಾಜನಾಥ ಸಿಂಗ್‌, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಮೇನಕಾ ಗಾಂಧಿ, ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌, ರಾಷ್ಟ್ರೀಯ ಮಹಿಳಾ ಆಯೋಗ ಅಧ್ಯಕ್ಷೆ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಭಾರತೀಯ ವಕೀಲರ ಪರಿಷತ್‌ ಅಧ್ಯಕ್ಷ, ಕರ್ನಾಟಕ ಅಡ್ವೋಕೇಟ್‌ ಜನರಲ್‌, ಕರ್ನಾಟಕ ವಕೀಲ ಪರಿಷತ್‌ ಕಾರ್ಯದರ್ಶಿ, ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಮತ್ತು ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ಮೃತ ವಕೀಲೆ ಪುಷ್ಪಾ ಅರ್ಚನಾ ಇ-ಮೇಲ್‌ ಮೂಲಕ ಪತ್ರ ಬರೆದಿದ್ದರು.

ಮಲ್ಲೇಶ್ವರದ ಪೇಯಿಂಗ್‌ ಗೆಸ್ಟ್‌ನಲ್ಲಿ ವಾಸವಿದ್ದ ಯುವತಿ ಆತ್ಮಹತ್ಯೆ ಮಾಡಿಕೊಳ್ಳುವ (ನ.24 ರಂದು) 20 ದಿನಗಳ ಮುನ್ನ ಇಬ್ಬರು ವಕೀಲರ ಕಿರುಕುಳದ ಬಗ್ಗೆ ತನ್ನ ಆತ್ಮೀಯ ಸ್ನೇಹಿತರು ಹಾಗೂ ಪರಿಚಯಸ್ಥರೊಂದಿಗೆ ಮೊಬೈಲ್‌ನಲ್ಲಿ ನಿತ್ಯ ಸಂಭಾಷಣೆ ನಡೆಸಿದ್ದರು. ಮೇಲಾಗಿ ಪೊಲೀಸರಿಗೆ ದೂರು ಸಲ್ಲಿಸುವ ಮುನ್ನವೇ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೇರಿ ಹಲವರಿಗೆ ಇ-ಮೇಲ್‌ ಕಳುಹಿಸಿದ್ದರು. ಆಕೆಯ ಲ್ಯಾಪ್‌ಟಾಪ್‌ ಪರಿಶೀಲನೆ ಇ-ಮೇಲ್‌ ಕಳುಹಿಸಿರುವ ಸಂಗತಿ ವೈಯಾಲಿಕಾವಲ್‌ ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ. ಆಕೆಯ ಇ-ಮೇಲ್‌ ದೂರಿನ ಪ್ರತಿ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೇರಿದಂತೆ 14 ಮಂದಿ ಪೈಕಿ ಯಾರೊಬ್ಬರಿಗಾದರೂ ಇ-ಮೇಲ್‌ಅನ್ನು ಪರಿಗಣಿಸಿದ್ದರೆ ಪುಷ್ಪಾ ಅರ್ಚನಾ ಆತ್ಮಹತ್ಯೆ ದಾರಿ ಹಿಡಿಯುತ್ತಿರಲಿಲ್ಲವೇನೋ? ಎಂಬ ಮಾತುಗಳು ಇದೀಗ ನ್ಯಾಯಾಂಗ ಹಾಗೂ ಪೊಲೀಸ್‌ ಇಲಾಖೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸಲಹೆ ಮೇಲೆ ದೂರು:  ವಕೀಲರು ನೀಡುತ್ತಿದ್ದ ಲೈಂಗಿಕ ಕಿರುಕುಳದ ಬಗ್ಗೆ ಪುಷ್ಪಾ ಅರ್ಚನಾ ತನ್ನ ಸ್ನೇಹಿತ ಸಿದ್ದು ಬಳಿ ಹೇಳಿಕೊಂಡಿದ್ದರು. ಮಹಿಳಾ ಸಂಘಟನೆಯೊಂದರ ಮುಖ್ಯಸ್ಥರನ್ನು ಸಹ ಸಂಪರ್ಕಿಸಿ ಅಳಲು ತೋಡಿಕೊಂಡಿದಲ್ಲದೆ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ದೂರು ನೀಡಿರುವುದಾಗಿ ಹೇಳಿದ್ದರು. ಆದರೆ, ಪೊಲೀಸರಿಗೆ ದೂರು ನೀಡುವಂತೆ ಆ ಮಹಿಳೆ ಸಲಹೆ ನೀಡಿದ್ದರು. ಬಳಿಕವಷ್ಟೇ ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆಗೆ ನ.20ರಂದು ವಕೀಲರ ವಿರುದ್ಧ ಯುವತಿ ದೂರು ನೀಡಿದ್ದರು ಎಂದು ಹಿರಿಯ ತನಿಖಾಧಿಕಾರಿ ತಿಳಿಸಿದ್ದಾರೆ.

ಯುವತಿ ಸಾವಿಗೂ ಮುನ್ನ ಸುಪ್ರೀಂ ಕೋರ್ಟ್‌ ಹಾಗೂ ಕೇಂದ್ರ ಸಚಿವರು ಸೇರಿದಂತೆ ಹಲವರಿಗೆ ಇ-ಮೇಲ್‌ ಮೂಲಕ ದೂರು ನೀಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಆರೋಪಿತ ವಕೀಲರಿಗೆ ನೋಟಿಸ್‌ ನೀಡಿ ವಿಚಾರಣೆ ನಡೆಸಲಾಗುವುದು. ಯುವತಿ ಹೇಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ತಿಳಿದು ಬಂದಿಲ್ಲ. ವಿಧಿವಿಜ್ಞಾನ ಪ್ರಯೋಗಾಲಯ ವರದಿ ಬಂದ ಈ ವಿಷಯ ಸ್ಪಷ್ಟವಾಗಲಿದೆ.

-ಡಿ.ದೇವರಾಜ್‌, ಕೇಂದ್ರ ವಿಭಾಗದ ಡಿಸಿಪಿ.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ಹಾಗೂ ಕೇಂದ್ರ ಸಚಿವರಿಂದ ಸ್ಪಂದನೆ ದೊರೆತಿದ್ದರೆ ಪುಷ್ಪಾ ಅರ್ಚನಾ ಬದುಕಿ ಉಳಿಯುತ್ತಿದ್ದಳು. ದೂರಿಗೆ ಸ್ಪಂದನೆ ಸಿಗದ ಕಾರಣ ಹತಾಶಳಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು. ಇದು ನೋವಿನ ಸಂಗತಿ.

-ಪ್ರಮೀಳಾ ನೇಸರ್ಗಿ, ಹಿರಿಯ ವಕೀಲೆ.

ಆಟೋದಿಂದ ದೂಡಿದ್ದರು!

2017 ಫೆ.1ರಂದು ಇನ್ಫೆಂಟ್ರಿ ರಸ್ತೆಯಲ್ಲಿರುವ ವಕೀಲರೊಬ್ಬರ ಬಳಿ ಕಿರಿಯ ವಕೀಲೆಯಾಗಿ ಸೇರಿದ್ದೆ. ಈ ವೇಳೆ ನನ್ನ ಹಿರಿಯ ವಕೀಲ ಹಾಗೂ ಆತನ ವಕೀಲ ಸ್ನೇಹಿತ ನನ್ನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು. 2018ರ ಮಾ.28ರಂದು ಇಂದಿರಾನಗರದ ಪಬ್‌ಗೆ ತೆರಳಿದ್ದೆವು. ಅಲ್ಲಿಂದ ಓಲಾ ಆಟೋದಲ್ಲಿ ಹೈಕೋರ್ಟ್‌ಗೆ ಹಿಂದಿರುವಾಗ ನನ್ನ ಹಿರಿಯ ವಕೀಲ ನನಗೆ ಬಲವಂತವಾಗಿ ಚುಂಬಿಸಿದ್ದನ್ನು ಕಂಡ ಆಟೋ ಚಾಲಕ ದಾರಿ ಮಧ್ಯೆ ಇಬ್ಬರನ್ನು ಇಳಿಸಿದ್ದ.

ಬಳಿಕ ಮತ್ತೊಂದು ಆಟೋದಲ್ಲಿ ಹೈಕೋರ್ಟ್‌ ಬಳಿ ಕರೆ ತಂದು ಕಾರಿನಲ್ಲಿ ಪಿ.ಜಿಗೆ ಬಿಡುವುದಾಗಿ ಹೇಳಿದ್ದರು. ರಾತ್ರಿಯಾದ ಕಾರಣ ಅದಕ್ಕೆ ಒಪ್ಪಿದೆ. ಹಿರಿಯ ವಕೀಲ ಕಾರು ನಿಲ್ಲಿಸಿದ್ದ ಜಾಗಕ್ಕೆ ಹೋಗುತ್ತಿದ್ದಂತೆ ನನ್ನ ತಬ್ಬಿ, ಮುತ್ತು ಕೊಟ್ಟು ದೇಹದ ಖಾಸಗಿ ಭಾಗಗಳನ್ನು ಮುಟ್ಟಿಅಸಭ್ಯವಾಗಿ ವರ್ತಿಸಿದರು. ಬಳಿಕ ಏನಾಯಿತು ಎಂಬುದು ನನಗೆ ಅರಿವಿಲ್ಲ. ನಂತರ ನನ್ನನ್ನು ವಕೀಲ ಪಿ.ಜಿ ಬಳಿ ಬಿಟ್ಟು ಹೋಗಿದ್ದರು. ನಾವು ಹೇಳಿದಂತೆ ಕೇಳಿದಿದ್ದರೆ ತೊಂದರೆ ಕೊಡುವುದಾಗಿ ಜೀವ ಬೆದರಿಕೆ ಹಾಕಿದ್ದರು ಎಂದು 2017ರ ಫೆ.1ರಿಂದ 2018ರ ನವೆಂಬರ್‌ 3ರವರಗೆ ತನಗೆ ಇಬ್ಬರು ವಕೀಲರು ನೀಡಿದ್ದ ಕಿರುಕುಳವನ್ನು ಯುವತಿ ಇ-ಮೇಲ್‌ ದೂರಿನಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು.


ವರದಿ :  ಎನ್‌.ಲಕ್ಷ್ಮಣ್‌