ಅದು 1994. ವಿವಾದಿತ ಹುಬ್ಬಳ್ಳಿಯ ಈದ್ಗಾ ಮೈದಾನಕ್ಕೆ ಪೊಲೀಸರೇ ಮುತ್ತಿಗೆ ಹಾಕಿದ ರೀತಿಯಲ್ಲಿ ಬಿಗಿ ಭದ್ರತೆ. ಮೇಲಾಗಿ ನಿಷೇಧಾಜ್ಞೆ. ಪೊಲೀಸರ ಕಾವಲು ಭೇದಿಸಿ ಮೈದಾನದೊಳಕ್ಕೆ ನುಗ್ಗಿ ರಾಷ್ಟ್ರಧ್ವಜ ಹಿಡಿದು ಜನಗಣ ಮನ ಹೇಳಿ ದಿಢೀರಾಗಿ ರಾಷ್ಟ್ರ ಮಟ್ಟದ ಗಮನ ಸೆಳೆದವರು ಇದೇ ಅನಂತಕುಮಾರ್ ಹೆಗಡೆ. ಅಂದೇ ಉತ್ತರ ಕನ್ನಡದ ಉಗ್ರ ಹಿಂದುತ್ವ ಪ್ರತಿಪಾದಕನ ಉದಯವೂ ಆಗಿತ್ತು. ಈಗ ಅವರಿಗೆ ಕೇಂದ್ರದ ಸಚಿವ ಸ್ಥಾನ ಒಲಿದು ಬಂದಿದೆ.

ಹುಬ್ಬಳ್ಳಿ(ಸೆ.04): ಅದು 1994. ವಿವಾದಿತ ಹುಬ್ಬಳ್ಳಿಯ ಈದ್ಗಾ ಮೈದಾನಕ್ಕೆ ಪೊಲೀಸರೇ ಮುತ್ತಿಗೆ ಹಾಕಿದ ರೀತಿಯಲ್ಲಿ ಬಿಗಿ ಭದ್ರತೆ. ಮೇಲಾಗಿ ನಿಷೇಧಾಜ್ಞೆ. ಪೊಲೀಸರ ಕಾವಲು ಭೇದಿಸಿ ಮೈದಾನದೊಳಕ್ಕೆ ನುಗ್ಗಿ ರಾಷ್ಟ್ರಧ್ವಜ ಹಿಡಿದು ಜನಗಣ ಮನ ಹೇಳಿ ದಿಢೀರಾಗಿ ರಾಷ್ಟ್ರ ಮಟ್ಟದ ಗಮನ ಸೆಳೆದವರು ಇದೇ ಅನಂತಕುಮಾರ್ ಹೆಗಡೆ. ಅಂದೇ ಉತ್ತರ ಕನ್ನಡದ ಉಗ್ರ ಹಿಂದುತ್ವ ಪ್ರತಿಪಾದಕನ ಉದಯವೂ ಆಗಿತ್ತು. ಈಗ ಅವರಿಗೆ ಕೇಂದ್ರದ ಸಚಿವ ಸ್ಥಾನ ಒಲಿದು ಬಂದಿದೆ.

ಅನಂತಕುಮಾರ್ ಹೆಗಡೆ ಬೆಳಕಿಗೆ ಬಂದಿದ್ದೇ ಉಗ್ರ ಹಿಂದುತ್ವ ಪ್ರತಿಪಾದನೆಯಿಂದ. ಇಂದಿಗೂ ಅದೇ ಅಸ್ತ್ರವೇ ಅವರನ್ನು ಮುನ್ನಡೆಸುತ್ತಿದೆ. ಹುಬ್ಬಳ್ಳಿ ಈದ್ಗಾ ಮೈದಾನ ಹೋರಾಟದಲ್ಲಿ ಮೈದಳೆದ ಹಿಂದುತ್ವವಾದಿ ಇವರು. ಈದ್ಗಾ ವಿವಾದವನ್ನೇ ರಾಜಕೀಯ ಮೆಟ್ಟಿಲನ್ನಾಗಿಟ್ಟುಕೊಂಡ ಅನಂತ ಕುಮಾರ್ ಹೆಗಡೆ ಅದಾದ ಎರಡೇ ವರ್ಷದಲ್ಲಿ 1996ರಲ್ಲಿ ನಡೆದ ಚುನಾವಣೆಯಲ್ಲಿ ಅಂದಿನ ಕೆನರಾ (ಇಂದಿನ) ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಿಂದ ಜಯಭೇರಿ ಬಾರಿಸಿದರು. ಅದಾದ ಮೇಲೆ, 1998, 2004, 2009, 2014ರಲ್ಲಿ ಗೆದ್ದು ಬಂದರು. ಈ ನಡುವೆ ಒಮ್ಮೆ ಮಾತ್ರ ಮಾರ್ಗರೆಟ್ ಆಳ್ವ ಎದುರು ಪರಾಭವಗೊಂಡರು.

ಎಲ್ಲೇ ಹಿಂದುಗಳ ಹತ್ಯೆಯಾಗಲಿ, ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆಯಾಗಲಿ ಅನಂತಕುಮಾರ್ ಹೆಗಡೆ ಅಲ್ಲಿ ಹಾಜರ್. ಅವರನ್ನು ಯುವಕರ ಪಡೆ ಸದಾ ಸುತ್ತುವರಿದಿರುವುದು ಮಾಮೂಲಿ. ಯಾವ ಬೆದರಿಕೆಗೂ ಮಣಿಯದೆ ನಿರ್ಭೀತಿಯಿಂದ ಮಾತಿನ ಚಾಟಿ ಬೀಸುತ್ತಾರೆ.

ಮುಸ್ಲಿಂ ಮತ ಧಿಕ್ಕರಿಸಿದರು:

ಅಚ್ಚರಿ ಎಂದರೆ ‘ದೇಶದ ಒಳಗೆ ಇದ್ದು ದೇಶಕ್ಕೆ ಕೃತಘ್ನರಾಗಿರುವ ಮುಸ್ಲಿಮರ ಮತಗಳು ನನಗೆ ಬೇಡ’ ಎಂದು ಚುನಾವಣೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಚುನಾವಣೆ ಗೆಲ್ಲಲಿಕ್ಕಾಗಿ ನಾನು ಯಾರನ್ನೂ ಓಲೈಸುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ ಉದಾಹರಣೆಗಳಿವೆ. ಉತ್ತರ ಕನ್ನಡದಲ್ಲಿ ಸಂಘ ಪರಿವಾರ ಆಯೋಜಿಸುವ ಬಹುತೇಕ ಯಾತ್ರೆ, ಮೇಳ, ಸಮ್ಮೇಳನಗಳಲ್ಲಿ ಹೆಗಡೆ ಮುಂಚೂಣಿಯಲ್ಲಿ ರುತ್ತಾರೆ. ಅನಂತಕುಮಾರ್ ಹೆಗಡೆ ಎಂದಿಗೂ ಹಣದ ರಾಜಕಾರಣ ಮಾಡಿದವರಲ್ಲ. ನಾನೊಬ್ಬ ದೇಶಪ್ರೇಮಿ. ನಿಮಗೆ ಬೇಕಾದರೆ ನನ್ನನ್ನು ಗೆಲ್ಲಿಸಿ ಎಂದು ಹೇಳುತ್ತಿದ್ದರು. ಜನರೇ ಇವರ ಸಭೆ ಸಮಾರಂಭಗಳಿಗೆ ಹಣ ನೀಡುತ್ತಿದ್ದರು. ಬೈಕ್ ರ್ಯಾಲಿ ನಡೆಸಿದರೆ ಜನರೇ ತಮ್ಮ ಕಿಸೆಯಿಂದ ಹಣ ಕೊಟ್ಟು ಪೆಟ್ರೋಲ್ ತುಂಬಿಸಿಕೊಳ್ಳುತ್ತಿದ್ದರು.

ಕರಾಟೆ ಪಟು:

ಅನಂತಕುಮಾರ್ ಹೆಗಡೆ ಉತ್ತಮ ಕರಾಟೆ ಪಟು. ಈಗಲೂ ಬೆಳಗ್ಗೆ ಕರಾಟೆ ಪ್ರ್ಯಾಕ್ಟೀಸ್ ಮಾಡುತ್ತಾರೆ. ರಾಜಕೀಯದ ಪಟ್ಟು ಉಪಯೋಗಕ್ಕೆ ಬಾರದೆ ಇರುವಾಗ ಕರಾಟೆ ಪಂಚ್ ಉಪಯೋಗಿಸಿದ ಆರೋಪಗಳೂ ಇವರ ಮೇಲಿದೆ.

2016ರಲ್ಲಿ ಶಿರಸಿಯ ಆಸ್ಪತ್ರೆಯ ವೈದ್ಯರ ಮೇಲೆ ಹಲ್ಲೆ ನಡೆಸಿದ ಆರೋಪ ಇದೆ. ಕಾರವಾರದಲ್ಲಿ ಬಿಜೆಪಿ ಪದಾಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪವೂ ಕೇಳಿಬಂದಿತ್ತು. ಭಟ್ಕಳ ಗದ್ದಲದ ಸಮಯದಲ್ಲೂ ಇವರ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಇವರ ಮೇಲೆ ದಾಖಲಾದ ಪ್ರಕ ರಣಗಳು ಗಟ್ಟಿಯಾಗಿ ನಿಲ್ಲದೆ ಇರುವುದು ವಿಶೇಷ.

ಸರ್ಕಾರೇತರ ಸಂಸ್ಥೆಯಾದ ಕದಂಬ ಫೌಂಡೇಶನ್‌'ನ ಸಂಸ್ಥಾಪಕ ಅಧ್ಯಕ್ಷರಾದ ಅನಂತಕುಮಾರ್ ಹೆಗಡೆ ಈ ಸಂಸ್ಥೆ ಮೂಲಕ ಗ್ರಾಮೀಣ ರೈತರ, ತೋಟಗಾರರ ಬಡಜನರ ಅಭಿವೃದ್ಧಿಗೆ ಸಾಕಷ್ಟು ಯೋಜನೆ ಅನುಷ್ಠಾನ ಮಾಡಿದ್ದರು. ರಾಷ್ಟ್ರೀಯ ತೋಟಗಾರಿಕಾ ಮಿಶನ್, ಕೃಷಿ ಮಿಶನ್, ಸಾಂಬಾರ ಮಂಡಳಿಯಿಂದ ಹೊಸ ಯೋಜನೆ ತರಲು ಶ್ರಮಿಸಿದವರು. ಅರಗು ಬೆಳೆ ಸೇರಿದಂತೆ ಹೊಸ ಬೆಳೆಯನ್ನು ಉತ್ತೇಜಿಸಿದವರು.