ಅಂದಿನ ಕುಮಾರಣ್ಣ..ಇಂದಿನ ಕುಮಾರಸ್ವಾಮಿ.. ಸಿಎಂಗೆ ಬಹಿರಂಗ ಪತ್ರ!

First Published 18, Nov 2018, 10:05 PM IST
An Open Letter to Karnataka CM HD KUmaraswamy by Journalist
Highlights

ಸಿಎಂ ಕುಮಾರಸ್ವಾಮಿ ರೈತರ ಬಗ್ಗೆ ನೀಡಿದ್ದ ಹೇಳಿಕೆ ರಾಜಕಾರಣ ಮಾತ್ರ ಅಲ್ಲ.. ಮಾಧ್ಯಮ ವಲಯದಲ್ಲಿಯೂ ಸಂಚಲನ  ಮೂಡಿಸಿದೆ. ನೊಂದ ಪತ್ರಕರ್ತನೊಬ್ಬ ಬರೆದ ಪತ್ರ ನಿಜಕ್ಕೂ ಕುಮಾರಸ್ವಾಮಿ ಅವರ ಅಂದಿನ ಮತ್ತು ಇಂದಿನ  ನಡವಳಿಕೆಯನ್ನು ಸಾರಿ ಹೇಳುವಂತಿದೆ.

ಸಿಎಂ ಕುಮಾರಸ್ವಾಮಿಗೆ ನೊಂದ ಪತ್ರಕರ್ತನೊಬ್ಬ ಬರೆದ ಪತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕುಮಾರಸ್ವಾಮಿ ರೈತರ ಬಗ್ಗೆ ನೀಡಿದ್ದ ಹೇಳಿಕೆ ಆಧರಿಸಿ ಈ ಪತ್ರ ಬರೆಯಲಾಗಿದೆ. ಪತ್ರದ ಪೂರ್ಣ ಪಾಠ ಇಲ್ಲಿದೆ.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೊಂದು ಬಹಿರಂಗ ಪತ್ರ
ಮಾನ್ಯ ಮುಖ್ಯಮಂತ್ರಿಗಳೇ...,
ಪ್ರತಿ ಬಾರಿ ನೀವು ಮಾಧ್ಯಮವನ್ನ, ಪತ್ರಕರ್ತರನ್ನ ನಿಂದಿಸಿದಾಗೆಲ್ಲ ಇಂತಹುದೊಂದು ಪತ್ರ ಬರೆಯಬೇಕು ಎಂದುಕೊಳ್ಳುತ್ತಿದ್ದೆ. ಆದ್ರೆ, ಮತ್ತೆ ಓ ಬಿಡು ಅತ್ಲಾಗೆ ಅಂದುಕೊಳ್ಳುತ್ತಿದ್ದೆ. ಕಾರಣ, ನಾನು ಕೂಡ ಒಂದು ಕಾಲದಲ್ಲಿ ನಿಮ್ಮ ಅಭಿಮಾನಿ. ನೀವು ಮತ್ತೊಮ್ಮೆ ಸಿಎಂ ಆಗಬೇಕು ಎಂದು ಬಯಸಿದ್ದವನು. ಆದರೆ, ಇವತ್ತು ನೀವು ರೈತರ ಕುರಿತು ಆಡಿದ ಮಾತು ಒಬ್ಬ ರೈತನ ಮಗನಾದ ನನಗೆ ತುಂಬಾ ಘಾಸಿ ಉಂಟು ಮಾಡಿತು...ಛೇ... ಇಂತಹ ವ್ಯಕ್ತಿಯನ್ನು ಮತ್ತೊಮ್ಮೆ ಸಿಎಂ ಆಗಬೇಕು ಎಂದು ಬಯಸಿದ್ದೆವಾ ಅಂತ ನನ್ನ ಮೇಲೆ ನನಗೆ ಅಸಹ್ಯವಾಯಿತು.

ಅತ್ತ ರೈತರ ಆಕ್ರೋಶ ಕೊತ ಕೊತ ಕುದಿತ್ತಿದ್ರೆ, ಇತ್ತ ದೇವೇಗೌಡ ಕುಟುಂಬದ ಆಕ್ರೋಶ ಕಟ್ಟೆ ಒಡೆಯಿತು..!


ನೀವು ಮೊದಲ ಬಾರಿ ಸಿಎಂ ಆದಾಗ ಪತ್ರಕರ್ತನಾಗಿ 17 ಗ್ರಾಮ ವಾಸ್ತವ್ಯ ವರದಿಗಾರಿಕೆ ಮಾಡಿದ್ದೇನೆ. ಆ ಸಂದರ್ಭಗಳಲ್ಲಿ ನಿಮ್ಮ ವರ್ತನೆ ನನ್ನ ಆಕರ್ಷಿಸಿತ್ತು. ವಿರೋಧ ಪಕ್ಷದಲ್ಲಿದ್ದುಕೊಂಡು ಬಿ.ಎಸ್ ಯಡಿಯೂರಪ್ಪ ಸರ್ಕಾರದ ಒಂದೊಂದೆ ಹಗರಣ ಬಯಲಿಗೆಳೆವಾಗ ವ್ಹಾ... ಎಂತಹ ಚಾಣಾಕ್ಷ ತನಿಖಾ ಪತ್ರಕರ್ತ ಎನಿಸಿಬಿಡುತಿತ್ತು.
ಆದರೆ, ಈ ಬಾರಿ ಸಿಎಂ ಆದ ಮೇಲೆ ನೀವು ತೋರುತ್ತಿರುವ ದೌಲತ್ತು... ಈ ಪದ ಬಳಸಲೇಬೇಕಾಗಿದೆ. ಹೊಳೆ ದಾಟಿದ ಮೇಲೆ ಅಂಬಿಗನ ಹಂಗು ಇನ್ಯಾಕೋ ಎಂಬಂತೆ ವರ್ತಿಸುತ್ತಿದ್ದೀರಿ. ಪ್ರತಿ ಪತ್ರಕರ್ತನೂ ನಿಮ್ಮ  ಒಡೆತನದ ವಾಹಿನಿಯ ಕಾರ್ಯಕರ್ತನಂತೆ ವರ್ತಿಸಬೇಕು ಎಂದು ಬಯಸತೊಡಗಿದ್ದೀರಿ. ಒಂದು ನೆನಪಿಡಿ ಪತ್ರಕರ್ತ ಯಾವತ್ತಿಗೂ ಕಾಯಂ ವಿರೋಧ ಪಕ್ಷವೇ... ಕೆಲವೊಂದು ಮಾಧ್ಯಮಗಳು ನಿಮ್ಮಂತಹ ರಾಜಕಾರಣಿಗಳ ಹಿಡಿತದಲ್ಲಿದ್ದರು ಪತ್ರಕರ್ತನ ರಕ್ತ ತನ್ನ ವಿರೋಧ ಪಕ್ಷದ ಕೆಲಸವನ್ನು ಹಾಗೋ...ಹೀಗೋ ಮಾಡುತ್ತಲೇ ಇರುತ್ತಾರೆ. ವಿರೋಧ ಪಕ್ಷದಲ್ಲಿದ್ದು ಮಾಧ್ಯಮಗಳನ್ನು ಬಳಸಿಕೊಂಡ ತಮಗೆ ಇದರ ಅರಿವು ಇರಬೇಕಿತ್ತು.

ಆ ರೈತ ಕುಟುಂಬದ ಹೆಣ್ಣು ಮಗಳನ್ನು ಎಲ್ಲಿ ಮಲಗಿದ್ದಳು ಎಂದು ಕೇಳಿದ್ದೀರಿ...? ನಿಮ್ಮ ಅಭ್ಯಾಸ... ಸಂಸ್ಕಾರದ ಅನಾವರಣ ಮಾಡಿಕೊಂಡಿದ್ದೀರಿ. ಮಣ್ಣಿನ ಮಗ ಎಂಬ ಬಿರುದು ಪಡೆದುಕೊಂಡಿರೋ ನಿಮ್ಮ ತಂದೆಯವರಾದರೂ ನಿಮ್ಮನ್ನು ತಿದ್ದುವರು ಎಂದುಕೊಂಡಿದ್ದೆವು.. ಅವರಿಗೋ ಧೃತರಾಷ್ಟ್ರ ಪ್ರೇಮ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಒಬ್ಬ ಮುಖ್ಯಮಂತ್ರಿಯಾಗಿ ರೈತರನ್ನು ಈ ರೀತಿ ನಿಂದಿಸಿ, ರೈತರನ್ನು ಕಳ್ಳರ ಸಾಲಿನಲ್ಲಿ, ದರೋಡೆಕೋರರ ಸಾಲಿನಲ್ಲಿ ನಿಲ್ಲಿಸಿ ನಿತ್ಯ ಕೊಲ್ಲುವುದಕ್ಕಿಂತ ಒಮ್ಮೆಗೆ ಗುಂಡಿಕ್ಕಿ ಕೊಂದುಬಿಡಿ.

ನಾಲ್ಕು ವರ್ಷಗಳಿಂದ ಆ ರೈತರು ಕೇಳುತ್ತಲೇ ಇದ್ದಾರೆ. ಅದೇ ರೈತರನ್ನು ಬಳಸಿಕೊಂಡು ನೀವು ಸಾಕಷ್ಟು ಬಾರಿ ಭಾಷಣ ಬಿಗಿದಿದ್ದು ಮರೆತು ಹೋಯಿತೇ...? ನಮ್ ಸಿಎಂ ಬಂದ್ರು ಅನ್ಕೋಂಡ್ರೆ.. ನೀವೋ ಬೆಂಗಳೂರು, ಮೈಸೂರು, ಮಂಡ್ಯ ಬಿಟ್ಟು ಬೇರೆ ಜಿಲ್ಲೆ ಇದೆ ಎಂಬುದನ್ನೇ ಮರೆತಂತೆ ಇದ್ದೀರಿ.

ನಿಮ್ಮ ದಿನಚರಿ ಶುರುವಾಗುವುದೇ ಮಧ್ಯಾಹ್ನಕ್ಕೆ. ಅನಾರೋಗ್ಯದ ಸಮಸ್ಯೆ ಹೇಳುತ್ತೀರಿ.. ಆರೋಗ್ಯ ನೋಡಿಕೊಳ್ಳಿ... ತಕರಾರಿಲ್ಲ. ರಾಜ್ಯದ ಆರೋಗ್ಯ ಏಕೆ ಕಡಿಸುತ್ತೀರಿ. ನಿಮ್ಮ ಹಾಗೂ ನಿಮ್ಮ ಕುಟುಂಬದ ಆಸೆ ತೀರಿಸೋಕೆ ರಾಜ್ಯದ ಆರೋಗ್ಯ ಕೆಡಬೇಕೇ...? ರೈತರು ಸಾಯಬೇಕೆ...? ನಿಮ್ಮ ಪಕ್ಷದಲ್ಲೇ ಯಾರಿಗಾದರೂ ಆರೋಗ್ಯವಂತರಿಗೆ ಸಿಎಂ ಪಟ್ಟ ಕೊಟ್ಟು ಒಳ್ಳೇ ಆಡಳಿತಕ್ಕೆ ಮಾರ್ಗದರ್ಶನ ನೀಡ. ಸಾಂದರ್ಬಿಕ ಶಿಶು ಎಂಬ ಬೂಟಾಟಿಕೆ ಪದ ಬಳಸಿಕೊಂಡು, ಕಣ್ಣೀರು ಹಾಕಿಕೊಂಡು ನಾಟಕ ಆಡುತ್ತಿದ್ದೀರಿ ಎನಿಸತೊಡಗಿದೆ. 


ತುಂಬಾ ಬೇಸರದಿಂದಲೇ ಈ ಪದಗಳನ್ನು ಬರೆಯುತ್ತಿದ್ದೇನೆ. ನಿಮ್ಮ ತಂದೆಯವರ ಬಗ್ಗೆ ನನಗೆ ಅಪಾರ ಗೌರವ.. ಬಟ್... ಚಿನ್ನದ ಕತ್ತಿ ಅಂತ ಕತ್ತು ಕುಯ್ಯ್ದುಕೊಳ್ಳುವುದೇ...? ಗೊತ್ತಿಲ್ಲ. ಮಾಧ್ಯಮದವರನ್ನು ಕಳ್ಳರ ಸಾಲಿನಲ್ಲಿ ನಿಲ್ಲಿಸಿ ಆಯ್ತು.. ಈಗ ರೈತರನ್ನ ದರೋಡೆಕೋರರ ಸಾಲಿನಲ್ಲಿ ನಿಲ್ಲಿಸಿ ಆಯ್ತು.. ನಿಮ್ಮ ಅಧಿಕಾರದ ಲಾಲಸೆಗೆ ಇನ್ನು ಯಾರು ಯಾರಿಗೆ ಏನು ಪಟ್ಟ ಕೊಡಿವಿರೋ...? ನಿಮ್ಮ ಆರೋಗ್ಯ ನೋಡಿಕೊಳ್ಳಲು ನಿಮ್ಮ ಕುಟುಂಬವಿದೆ... ನಿಮ್ಮ ಅಂಧಾಭಿಮಾನಿಗಳು ಇದ್ದಾರೆ. ಈ ರಾಜ್ಯದ ಆರೋಗ್ಯ ನೋಡಿಕೊಳ್ಳಲು ಯಾರನ್ನಾದರು ನೇಮಿಸಿ ನೀವು ನಿರ್ಗಮಿಸಿ..... ತುಂಬಾ ನೋವಿನಿಂದ ನಾನು ಈ ಪತ್ರ ಮುಗಿಸುತ್ತಿದ್ದೇನೆ. ನನ್ನ ಹೆಸರು ಬರೆದುಕೊಳ್ಳುವ ತಾಕತ್ತು ಇಲ್ಲ.. ಕಾರಣ, ನಾನೊಬ್ಬ ಬಡ ಪತ್ರಕರ್ತ. ಸಂಬಳದ ವಿನಃ ಬೇರೆನನ್ನೂ ಸಂಪಾದಿಸಿಲ್ಲ. ನಿಮ್ಮನ್ನು ಎದುರಿಸುವ ಸಾಮರ್ಥ್ಯವೂ ಇಲ್ಲ. ಹೇಳಬೇಕಾದದ್ದನ್ನು ಹೇಳಿದ್ದೇನೆ. ನಾನು ಕಾರ್ಯಕರ್ತನಲ್ಲ... ಪತ್ರಕರ್ತ.
 

 

loader