ಶ್ರೀನಗರ[ಅ.06]: ಜಮ್ಮು ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬರ ಅಭಿಪ್ರಾಯ ಭಿನ್ನವಾಗಿರುತ್ತದೆ. ಆದರೆ ಇದು ಭಾರತದ ಅವಿಭಾಜ್ಯ ಅಂಗ ಎನ್ನುವುದು ಸತ್ಯ. ಆರ್ಟಿಕಲ್ 370 ರದ್ದುಗೊಳಿಸಿದ ಬಳಿಕ ಕಣಿವೆ ನಾಡಿನಲ್ಲೇನಾಗುತ್ತದೆ ಎಂಬ ಕುರಿತಾಗಿ ಹಲವು ಅಂತೆ ಕಂತೆಗಳು ಹರಿದಾಡುತ್ತಿವೆ. ಇಂಟರ್ನೆಟ್ ಹಾಗೂ ಮೊಬೈಲ್ ಸೇವೆ ಕೂಡಾ ಲಭ್ಯವಿಲ್ಲ. ಹೀಗಿರುವಾಗ ಮನೆಯಿಂದ ದೂರ ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರು ಹಾಗೂ ಜನ ಸಾಮಾನ್ಯರಿಗೆ ತಮ್ಮ ಆತ್ಮೀಯರು ಹೇಗಿದ್ದಾರೆಂಬ ಮಾಹಿತಿಯೂ ಸಿಗುತ್ತಿಲ್ಲ. ಟೆಲಿಫೋನ್ ಬೂತ್ ಗಳ ಹೊರಗೆ ಜನರು ಸರತಿ ಸಾಲಿನಲ್ಲಿ ನಿಂತಿರುತ್ತಾರೆ. ಹೀಗಿರುವಾಗ ಸೋಶಿಯಲ್ ಮೀಡಿಯಾಗಳಲ್ಲಿ 'ಪ್ರತಿದಿನ ATMಲೈನ್ ನಲ್ಲಿ ನಿಂತು 100 ರೂ. ಡ್ರಾ ಮಾಡುತ್ತಾರೆ' ಎಂಬ ಯೋಧರಿಗೆ ಸಂಬಂಧಿಸಿದ ಪೋಸ್ಟ್ ಒಂದು ಭಾರೀ ವೈರಲ್ ಆಗುತ್ತಿದೆ. 

ವೈರಲ್ ಆದ ಪೋಸ್ಟ್ ನಲ್ಲಿ ಬರೆದ ಘಟನೆ ನಿಜವೋ ಎಂಬುವುದು ತಿಳಿದಿಲ್ಲ. ಆದರೆ ಈ ಬರಹ ವಿಭಿನ್ನ ಫೋಟೋಗಳೊಂದಿಗೆ ಶೇರ್ ಮಾಡಲಾಗುತ್ತಿದೆ. ಕಾಶ್ಮೀರದ ಬುರಾಮುಲ್ಲಾದಲ್ಲಿ ಪೋಸ್ಟಿಂಗ್ ನಲ್ಲಿರುವ ಯೋಧನೊಬ್ಬ ಪ್ರತಿದಿನ ಖ್ವಾಜಾಬಾದ್ ಪ್ರದೇಶದಲ್ಲಿರುವ ATMನಿಂದ 100ರೂ ಡ್ರಾ ಮಾಡುತ್ತಾರೆ. ಬಳಿಕ ಅದನ್ನು ಬಹಳ ಪ್ರೀತಿಯಿಂದ ತನ್ನ ಪರ್ಸ್ ನಲ್ಲಿಡುತ್ತಾರೆ ಹಾಗೂ ಮೌನವಾಗ ಅಲ್ಲಿಂದ ತೆರಳುತ್ತಾರೆ. ಮರುದಿನ ಮತ್ತೆ 100 ರೂ ಡ್ರಾ ಮಾಡಲು ಬರುತ್ತಾರೆ. ಇದನ್ನು ಗಮನಿಸಿದ ಸೆಕ್ಯುರಿಟಿ ಗಾರ್ಡ್ ಒಂದು ದಿನ ಧೈರ್ಯ ಮಾಡಿ ಯೋಧನ ಬಳಿ ಈ ಕುರಿತು ಪ್ರಶ್ನಿಸುತ್ತಾರೆ. ಆದರೆ ಇದಕ್ಕೆ ಯೋಧ ನೀಡಿದ ಉತ್ತರ ಅವರನ್ನು ಭಾವುಕರನ್ನಾಗಿಸಿದೆ. 

ಹೌದು ಯೋಧನ ಬಳಿ ಸೆಕ್ಯೂರಿಟಿ ಗಾರ್ಡ್ 'ಸಾಹಬ್ ನೀವು ಪ್ರತಿದಿನ ATMನಿಂದ 100 ರೂ. ಯಾಕೆ ಡ್ರಾ ಮಾಡ್ತೀರಿ? ಪ್ರತಿದಿನ ಅಲ್ಲಿಂದ ಇಲ್ಲಿಗೆ ಬರುವ ಬದಲು ಒಂದೇ ಬಾರಿ ಹಣ ಡ್ರಾ ಮಾಡಬಹುದಲ್ವೇ?' ಎಂದು ಪ್ರಶ್ನಿಸ್ತಾರೆ. ಇದಕ್ಕೆ ಉತ್ತರಿಸಿದ ಯೋಧ ತನ್ನ ಹಣೆ ಒರಸಿಕೊಳ್ಳುತ್ತಾ 'ಈ ಬ್ಯಾಂಕ್ ಅಕೌಂಟ್ಗೆ ಲಿಂಕ್ ಆದ ಫೋನ್ ನಂಬರ್ ನನ್ನ ಪತ್ನಿಯದ್ದು. ಆಕೆ ಈಗ ಮನೆಯಲ್ಲಿದ್ದಾಳೆ. ನಾನು ATMನಿಂದ ಹಣ ಡ್ರಾ ಮಾಡಿದರೆ ಆಕೆಗೆ ಮೆಸೇಜ್ ಸಿಗುತ್ತದೆ. ಈ ಮೂಲಕ ನಾನು ಬದುಕಿದ್ದೇನೆ, ಕ್ಷೇಮವಾಗಿದ್ದೇನೆಂದು ಆಕೆಗೆ ತಿಳಿಯುತ್ತದೆ' ಎಂದಿದ್ದಾರೆ.

ಈ ಪೋಸ್ಟ್ ನ ಕೊನೆಯಲ್ಲಿ 'ನಿಜವಾದ ಪ್ರೀತಿ ಇಂತಹ ಸಾಹಸ ಹಾಗೂ ಬಲಿದಾನದಿಂದ ಮತ್ತಷ್ಟು ಹೆಚ್ಚುತ್ತದೆ' ಎಂದು ಬರೆಯಲಾಗಿದೆ. ಇದು ನೈಜ ಘಟನೆಯೋ ಅಥವಾ ಕಾಲ್ಪನಿಕ ಕತೆಯೋ ತಿಳಿಯದು. ಆದರೆ Indian Army Fans ಎಂಬ ಫೇಸ್ ಬುಕ್ ಪೇಜ್ ನಿಂದ ಇದನ್ನು ಪೋಸ್ಟ್ ಮಾಡಲಾಗಿದ್ದು, ಭಾರೀ ವೈರಲ್ ಆಗುತ್ತಿದೆ.