Asianet Suvarna News Asianet Suvarna News

ದಸರಾ ದುರಂತಕ್ಕೆ 61 ಬಲಿ

ದಸರಾ ವೇಳೆ ಸಂಭವಿಸಿದ ಭಾರೀ ದುರಂತದಲ್ಲಿ 60 ಮಂದಿ ಸಾವನ್ನಪ್ಪಿದ ಭೀಕರ ಘಟನೆಯೊಂದು ಅಮೃತಸರದಲ್ಲಿ ನಡೆದಿದೆ. 

Amritsar Train Accident 60 Dead
Author
Bengaluru, First Published Oct 20, 2018, 11:44 AM IST

ಅಮೃತಸರ: ದಸರಾ ಹಬ್ಬದ ಕಡೆಯ ದಿನ ವಿಜಯದಶಮಿಯಂದು ನಡೆಯುವ ರಾವಣ ದಹನ ಕಾರ್ಯಕ್ರಮ ವೀಕಿಸುತ್ತಿದ್ದವರ ಮೇಲೆ ರೈಲು ಹರಿದ ಪರಿಣಾಮ 60ಕ್ಕೂ ಹೆಚ್ಚು ಸಾವನ್ನಪ್ಪಿ, 100ಕ್ಕೂ ಹೆಚ್ಚು ಜನ ಗಾಯಗೊಂಡ ಭೀಕರ ಘಟನೆ ಶುಕ್ರವಾರ ಸಂಜೆ ಇಲ್ಲಿ ಸಮೀಪಿಸಿದೆ. ಗಾಯಾಳುಗಳ ಪೈಕಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟುಹೆಚ್ಚುವ ಭೀತಿ ಇದೆ.

ಘಟನೆ ಬಗ್ಗೆ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಪಂಜಾಬ್‌ ಸಿಎಂ ಅಮರೀಂದರ್‌ ಸಿಂಗ್‌ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮೃತರ ಕುಟುಂಬಗಳಿಗೆ ಪಂಜಾಬ್‌ ಸರ್ಕಾರ ತಲಾ 5 ಲಕ್ಷ ರು. ಪರಿಹಾರ ಘೋಷಿಸಿದೆ. ಅಲ್ಲದೆ ಎಲ್ಲಾ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಘೋಷಣೆ ಮಾಡಿದೆ. ಮತ್ತೊಂದೆ ರಾಜ್ಯಕ್ಕೆ ಎಲ್ಲಾ ನೆರವಿನ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಮತ್ತು ರೈಲ್ವೆ ಸಚಿವ ಪಿಯೂಷ್‌ ಗೋಯೆಲ್‌ ನೀಡಿದ್ದಾರೆ. ಘಟನೆಯ ಕುರಿತು ರೈಲ್ವೆ ಸಚಿವಾಲಯ ತನಿಖೆಗೆ ಆದೇಶಿಸಿದೆ. ಜೊತೆಗೆ ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ರವಾನಿಸಿದೆ.

ಏನಾಯ್ತು?:

ಅಮೃತಸರ ಸಮೀಪದ ಜೋಡಾ ಫಾಟಕ್‌ ಎಂಬಲ್ಲಿ ರಾವಣ ದಹನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಂಗ್ರೆಸ್‌ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟಿಗ, ಪಂಜಾಬ್‌ ಸಚಿವ ನವಜೋತ್‌ಸಿಂಗ್‌ ಸಿಧು ಅವರ ಪತ್ನಿ ನವಜೋತ್‌ಕೌರ್‌ ಮುಖ್ಯ ಅತಿಥಿಯಾಗಿದ್ದರು. ರೈಲ್ವೆ ಹಳಿಯ ಸಮೀಪದಲ್ಲೇ ನಡೆಯುವ ಕಾರ್ಯಕ್ರಮ ವೀಕ್ಷಣೆಗೆ ಸಾವಿರಾರು ಜನ ಸೇರಿದ್ದರು. ಈ ಪೈಕಿ ಒಂದಷ್ಟುಜನ ರಾವಣ ದಹನ ಸ್ಥಳದಲ್ಲಿ, ಇನ್ನಷ್ಟುಜನ ದೂರದಲ್ಲಿ, ಮತ್ತಷ್ಟುಜನ ಈ ಎರಡೂ ಸ್ಥಳಗಳ ನಡುವೆ ಬರುವ ರೈಲ್ವೆ ಹಳಿಯ ಮೇಲೆ ನಿಂತಿದ್ದರು. ರಾತ್ರಿ 8 ಗಂಟೆ ವೇಳೆಗೆ ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚುತ್ತಲೇ, ಅದು ಮುಗಿಲೆತ್ತರಕ್ಕೆ ಅಗ್ನಿಜ್ವಾಲೆಯನ್ನು ಹಬ್ಬಿಸಿತ್ತು. ಈ ನಡುವೆ ಅದರೊಳಗೆ ಇಡಲಾಗಿದ್ದ ಪಟಾಕಿಗಳು ಭಾರೀ ಸದ್ದಿನೊಂದಿಗೆ ಸ್ಫೋಟಿಸಲು ಆರಂಭವಾಯಿತು. ಈ ವೇಳೆ ದೂರದಲ್ಲಿದ್ದ ನಿಂತಿದ್ದ ಜನರು ಸಮೀಪದಿಂದ ಘಟನೆ ವೀಕ್ಷಿಸುವ ಸಲುವಾಗಿ ರೈಲ್ವೆ ಹಳಿಯತ್ತ ಧಾವಿಸಿದರು.

ಇದೇ ಸಮಯದಲ್ಲಿ ಜಲಂಧರ್‌ನಿಂದ ಅಮೃತಸರಕ್ಕೆ ಮತ್ತು ಅಮೃತಸರದಿಂದ ಜಲಂಧರಕ್ಕೆ ತೆರಳುವ ಎರಡು ರೈಲುಗಳು ಏಕಾಕಾಲದಲ್ಲಿ ಅದೇ ಸ್ಥಳದತ್ತ ಧಾವಿಸಿದರು. ಆದರೆ ಪಟಾಕಿ ಸದ್ದಿನಲ್ಲಿ, ರೈಲು ಆಗಮಿಸಿದ ಸುಳಿವು ಜನರಿಗೆ ಗೊತ್ತಾಗಲಿಲ್ಲ. ಹೀಗಾಗಿ ಏನಾಗುತ್ತಿದೆ ಎಂದು ಗೊತ್ತಾಗುವುದರೊಳಗೆ ನೂರಾರು ಜನರ ಮೇಲೆ ರೈಲು ಹರಿದು ಹೋಯ್ತು. ಎರಡೂ ದಿಕ್ಕಿನಿಂದ ರೈಲು ಆಗಮಿಸಿದ ಕಾರಣ ಜನರಿಗೆ ತಪ್ಪಿಸಿಕೊಳ್ಳಲೂ ಅವಕಾಶ ಸಿಗಲಿಲ್ಲ. ಪರಿಣಾಮ ಕ್ಷಣಾರ್ಧದಲ್ಲಿ 50ಕ್ಕೂ ಹೆಚ್ಚು ಜನ ಸಾವನ್ನಪ್ಪಿದರು.

ಭೀಕರ ಚಿತ್ರಣ

ಅಪಘಾತ ನಡೆದ ಸ್ಥಳದಲ್ಲಿ ಎಲ್ಲೆಂದರಲ್ಲಿ ಗಾಯಾಳುಗಳು, ಮೃತ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕೆಲವರ ಕೈ, ಇನ್ನು ಕೆಲವರ ಕಾಲು ತುಂಡಾಗಿ ಬಿದ್ದಿದ್ದವು. ರಾತ್ರಿ ವೇಳೆ ಘಟನೆ ನಡೆದ ಕಾರಣ, ತಕ್ಷಣಕ್ಕೆ ಪರಿಹಾರ ಕಾರ್ಯ ಕೈಗೊಳ್ಳುವುದೂ ಸಾಧ್ಯವಾಗಲಿಲ್ಲ.

Follow Us:
Download App:
  • android
  • ios