ರಾಹುಲ್ ಟೆಂಪಲ್ ರನ್’ಗೆ ಟಾಂಗ್ ನೀಡಲು ಅಮಿತ್ ಶಾ ಸಜ್ಜು

Amith Shah Visit Karnataka
Highlights

ಮುಂಬರುವ ವಿಧಾನಸಭಾ ಚುನಾವಣೆಯ ಕಾವು ಏರುತ್ತಿದ್ದು, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಮೂರು ದಿನಗಳ ರಾಜ್ಯ ಪ್ರವಾಸಕ್ಕೆ ಕ್ಷಣಗಣನೆ ಆರಂಭವಾದ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಮೂರು ದಿನಗಳ ರಾಜ್ಯ ಪ್ರವಾಸಕ್ಕೂ ಮುಹೂರ್ತ ನಿಗದಿಯಾಗಿದೆ.

ಮಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಯ ಕಾವು ಏರುತ್ತಿದ್ದು, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಮೂರು ದಿನಗಳ ರಾಜ್ಯ ಪ್ರವಾಸಕ್ಕೆ ಕ್ಷಣಗಣನೆ ಆರಂಭವಾದ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಮೂರು ದಿನಗಳ ರಾಜ್ಯ ಪ್ರವಾಸಕ್ಕೂ ಮುಹೂರ್ತ ನಿಗದಿಯಾಗಿದೆ.

ಇದೇ ತಿಂಗಳ 18ರಿಂದ 20ರವರೆಗೆ ಮೂರು ದಿನಗಳ ಕಾಲ ಕರಾವಳಿಯ ಮೂರು ಜಿಲ್ಲೆಗಳಿಗೆ ಭೇಟಿ ನೀಡಲಿರುವ ಅಮಿತ್‌ ಶಾ ಅವರು ಇತ್ತೀಚೆಗೆ ಹತ್ಯೆಗೊಳಗಾಗಿದ್ದ ಪಕ್ಷದ ಕಾರ್ಯಕರ್ತರ ನಿವಾಸಕ್ಕೆ ಭೇಟಿ ನೀಡುವುದರ ಜತೆಗೆ ಪ್ರಮುಖ ಧಾರ್ಮಿಕ ಕೇಂದ್ರಗಳ ದರ್ಶನ ಪಡೆಯಲಿದ್ದಾರೆ.

ಹಿಂದೊಮ್ಮೆ ಬಿಜೆಪಿಯ ಭದ್ರಕೋಟೆಯಾಗಿದ್ದ ಕರಾವಳಿಯಲ್ಲಿ ಹೆಚ್ಚು ಸ್ಥಾನ ಗಳಿಸಬೇಕು ಎಂಬ ನಿಲುವಿಗೆ ಬಂದಿರುವ ಅಮಿತ್‌ ಶಾ, ಹಿಂದುತ್ವದ ಕಾರ್ಡ್‌ ಬಳಸುವ ಮೂಲಕ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಹುರಿದುಂಬಿಸಲು ತೀರ್ಮಾನಿಸಿದ್ದಾರೆ. ಮೂರು ಜಿಲ್ಲೆಗಳಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ಅಸೆಂಬ್ಲಿ ಚುನಾವಣೆಯನ್ನು ಗೆಲ್ಲುವ ಉದ್ದೇಶದಿಂದ ತಂತ್ರಗಾರಿಕೆಯಲ್ಲಿ ನಿಪುಣರಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸ್ವತಃ ಕರ್ನಾಟಕವನ್ನು ಸುತ್ತಿ ಚುನಾವಣಾ ರಣನೀತಿಯನ್ನು ಸಿದ್ಧಪಡಿಸಲಿದ್ದು, ಇದರ ಭಾಗವೇ ಅವರ ಕರಾವಳಿ ಜಿಲ್ಲೆಯ ಭೇಟಿ ಎನ್ನಲಾಗುತ್ತಿದೆ. ಗುಜರಾತ್‌ನಲ್ಲಿ ಆಗಿರುವ ಕೆಲವೊಂದು ತಪ್ಪು ನಿರ್ಧಾರಗಳನ್ನು ಸರಿಪಡಿಸಿಕೊಂಡು ಇಲ್ಲಿ ಮುನ್ನಡೆಯಲಿದ್ದಾರೆ ಎಂದೂ ಹೇಳಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯ, ಉಡುಪಿಯ ಶ್ರೀಕೃಷ್ಣ ಮಠ ಹಾಗೂ ಶಿರಸಿಯ ಮಾರಿಕಾಂಬ ದೇವಾಲಯಗಳಿಗೆ ಭೇಟಿ ನೀಡುವುದರ ಮೂಲಕ ಕಾಂಗ್ರೆಸ್ಸಿನ ರಾಹುಲ್‌ ಗಾಂಧಿ ಅವರ ‘ಟೆಂಪಲ್‌ ರನ್‌’ಗೆ ಟಾಂಗ್‌ ನೀಡುವ ಉದ್ದೇಶವನ್ನೂ ಅಮಿತ್‌ ಶಾ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಎಲ್ಲೆಲ್ಲಿಗೆ ಭೇಟಿ?

ಫೆ.18ರಂದು ಸಂಜೆ 5 ಗಂಟೆಗೆ ದೆಹಲಿ ವಿಮಾನ ನಿಲ್ದಾಣದಿಂದ ಹೊರಡುವ ಅಮಿತ್‌ ಶಾ ರಾತ್ರಿ 7.45ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ. ಬಳಿಕ 8 ಗಂಟೆಗೆ 10 ನಿಮಿಷ ವಿಮಾನ ನಿಲ್ದಾಣದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲಿಂದ 8.15ಕ್ಕೆ ಹೊರಟು 10.30ಕ್ಕೆ ಕುಕ್ಕೆ ಸುಬ್ರಹ್ಮಣ್ಯ ತಲುಪುವರು.

ಫೆ.19ರಂದು ಬೆಳಗ್ಗೆ 8.15ಕ್ಕೆ ಉಪಾಹಾರ ಮುಗಿಸಿ 8.30ಕ್ಕೆ ದೇವರ ದರ್ಶನ, 9 ಗಂಟೆಗೆ ಕಾರ್ಯಕರ್ತರೊಂದಿಗೆ ಬಹಿರಂಗ ಸಭೆ ನಡೆಸುವರು. 10.15ಕ್ಕೆ ಪುತ್ತೂರಿನ ವಿವೇಕಾನಂದ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸುವರು. 11.40ಕ್ಕೆ ಪುತ್ತೂರಿನಿಂದ ಹೊರಟು 12.30ಕ್ಕೆ ಬಂಟ್ವಾಳ ಮೈದಾನದಲ್ಲಿ ನವಶಕ್ತಿ ಸಮಾವೇಶದಲ್ಲಿ ಪಾಲ್ಗೊಳ್ಳುವರು. 3 ಗಂಟೆಗೆ ಕಾಟಿಪಳ್ಳದಲ್ಲಿ ಮೃತ ದೀಪಕ್‌ ರಾವ್‌ ಕುಟುಂಬವನ್ನು ಭೇಟಿ ಮಾಡುವರು. 3.30ಕ್ಕೆ ಸುರತ್ಕಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸುವರು. 5 ಗಂಟೆಗೆ ಮಲ್ಪೆಯಲ್ಲಿ ಮೀನುಗಾರರ ಸಮಾವೇಶದಲ್ಲಿ ಭಾಗವಹಿಸುವರು. ರಾತ್ರಿ 7 ಗಂಟೆಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ವಿಶ್ರಾಂತಿ ಪಡೆಯುವರು.

ಫೆ.20ರಂದು ಬೆಳಗ್ಗೆ 10 ಗಂಟೆಗೆ ಉಡುಪಿಯಲ್ಲಿ ಸಾಮಾಜಿಕ ಜಾಲತಾಣಿಗರ ಸಮಾವೇಶದಲ್ಲಿ ಭಾಗವಹಿಸುವರು. 11.30ಕ್ಕೆ ಶಕ್ತಿ ಕೇಂದ್ರದ ಸಮಾವೇಶದಲ್ಲಿ ಪಾಲ್ಗೊಂಡು, ಮಧ್ಯಾಹ್ನ 1.30ಕ್ಕೆ ಹೆಲಿಕಾಪ್ಟರ್‌ನಲ್ಲಿ ಹೊನ್ನಾವರಕ್ಕೆ ತೆರಳುವರು. 2.15ಕ್ಕೆ ಮೃತ ಪರೇಶ್‌ ಮೇಸ್ತ ಮನೆಗೆ ಭೇಟಿ ನೀಡುವರು. 2.45ಕ್ಕೆ ಕುಮಟಾದಲ್ಲಿ ನವಶಕ್ತಿ ಸಮಾವೇಶದಲ್ಲಿ ಪಾಲ್ಗೊಳ್ಳುವರು. 4 ಗಂಟೆಗೆ ಕುಮಟಾದಿಂದ ಶಿರಸಿಗೆ ತೆರಳುವರು. ಸಂಜೆ 5 ಗಂಟೆಗೆ ಶಿರಸಿ ಮಾರಿಕಾಂಬ ದೇವಸ್ಥಾನಕ್ಕೆ ಭೇಟಿ ನೀಡುವರು. 6.15ಕ್ಕೆ ಹುಬ್ಬಳ್ಳಿಗೆ ತೆರಳಿ ಅಲ್ಲಿಂದ ವಿಮಾನದ ಮೂಲಕ ದೆಹಲಿಗೆ ನಿರ್ಗಮಿಸುವರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಯಾತ್ರೆ ನಡೆಸಿ  ಸಂಸದರಿಗೆ ತಾಕೀತು : ಬೆಂಗಳೂರು: ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಮೈಸೂರು-ಕೊಡಗು ಲೋಕಸಭಾ ಸದಸ್ಯರು ಬಿಜೆಪಿಯವರೇ ಆಗಿದ್ದು, ಚುನಾವಣಾ ಕಹಳೆ ತೀವ್ರಗೊಳಿಸಲು ತಿಂಗಳಾಂತ್ಯದ ವೇಳೆಗೆ ಪಕ್ಷದ ಸಂಸದರು ಪಾದಯಾತ್ರೆ ಅಥವಾ ಬೈಕ್‌ ರಾರ‍ಯಲಿಗಳನ್ನು ನಡೆಸುವಂತೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸೂಚನೆ ನೀಡಿದ್ದಾರೆ.

loader