ಕಣ್ಣೂರು :  ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು ಜಾರಿ ವಿರುದ್ಧ ಪ್ರತಿಭಟಿಸುತ್ತಿರುವ ಭಕ್ತಾದಿಗಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಹಿಂದು ಧರ್ಮ, ಸಂಸ್ಕೃತಿಯನ್ನು ನಾಶಪಡಿಸಲು ಕೇರಳದ ಎಡಪಂಥೀಯ ಸರ್ಕಾರ ಯತ್ನಿಸುತ್ತಿದೆ. 

ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದು ಗುಡುಗಿದ್ದಾರೆ. ಲೋಕಸಭಾ ಚುನಾವಣಾ ಹೊಸ್ತಿಲಲ್ಲೇ ಬಿಜೆಪಿ ಅಧ್ಯಕ್ಷರ ಈ ‘ಕಹಳೆ’ ಮೊಳಗಿದೆ. ಇದರೊಂದಿಗೆ, ಹಿಂದೆ ಅಯೋಧ್ಯೆ ರಾಮಮಂದಿರ ವಿವಾದವು ಬಿಜೆಪಿಗೆ ಉತ್ತರ ಭಾರತವೂ ಸೇರಿದಂತೆ ವಿವಿಧೆಡೆ ರಾಜಕೀಯವಾಗಿ ಬಲ ನೀಡಿದಂತೆ, ಇದೀಗ ಶಬರಿಮಲೆ ಮಹಿಳಾ ಪ್ರವೇಶ ವಿವಾದವು ದಕ್ಷಿಣ ಭಾರತದಲ್ಲಿ ಬಿಜೆಪಿಯ ರಂಗಪ್ರವೇಶಕ್ಕೆ ಅನುಕೂಲ ಮಾಡಿಕೊಡುವುದೇ ಎಂಬ ಕುತೂಹಲಕ್ಕೆ ಕಾರಣವಾಗಿದೆ.

ಸರ್ಕಾರಕ್ಕೆ ಸಡ್ಡು: ಕೋಮುಸೂಕ್ಷ್ಮ ಕಣ್ಣೂರು ಜಿಲ್ಲೆಯಲ್ಲಿ ಶನಿವಾರ ಬಿಜೆಪಿ ಕಚೇರಿಯನ್ನು ಉದ್ಘಾಟಿಸಿದ ಬಳಿಕ ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಮಂತ್ರ ಪಠಿಸುವ ಮೂಲಕವೇ ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡಿದ ಅಮಿತ್‌ ಶಾ, ಅಯ್ಯಪ್ಪ ಭಕ್ತಾದಿಗಳ ಪ್ರತಿಭಟನೆಗೆ ಪೊಲೀಸ್‌ ಶಕ್ತಿಯ ಮೂಲಕ ಕೇರಳ ಸರ್ಕಾರ ಸವಾಲು ಒಡ್ಡಿದೆ. ಆರ್‌ಎಸ್‌ಎಸ್‌ ಹಾಗೂ ಸಂಘಪರಿವಾರ ಕಾರ್ಯಕರ್ತರೂ ಸೇರಿದಂತೆ 2 ಸಾವಿರ ಮಂದಿ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಇದನ್ನು ಖಂಡಿಸುತ್ತೇನೆ ಎಂದು ಹೇಳಿದರು.

ಶಬರಿಮಲೆ ಅಯ್ಯಪ್ಪ ದೇಗುಲವನ್ನು ಹಾಗೂ ಹಿಂದು ಸಂಸ್ಕೃತಿಯನ್ನು ನಾಶಪಡಿಸಲು ಕೇರಳದ ಎಡಪಂಥೀಯ ಸರ್ಕಾರ ಯತ್ನಿಸುತ್ತಿದೆ. ಹಿಂದು ಧರ್ಮದ ಜತೆ ಜೂಜು ಆಡಲು ನಾವು ಬಿಡುವುದಿಲ್ಲ. ಬೆಂಕಿಯ ಜೊತೆ ಆಟ ಬೇಡ. ಭಕ್ತಾದಿಗಳ ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸಿದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಎಚ್ಚರಿಕೆ ನೀಡುತ್ತೇನೆ. ಸುಪ್ರೀಂಕೋರ್ಟ್‌ ತೀರ್ಪು ಜಾರಿ ಹೆಸರಿನಲ್ಲಿ ಕ್ರೂರತನ ನಡೆಸುವುದನ್ನು ಅವರು ನಿಲ್ಲಿಸಬೇಕು. ತೀರ್ಪು ಜಾರಿಗೆ ಕೇರಳ ಮಹಿಳೆಯರದ್ದೂ ವಿರೋಧವಿದೆ ಎಂದು ಅಬ್ಬರಿಸಿದ್ದಾರೆ.

ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶಿಸುವುದಕ್ಕೆ ಯಾವುದೇ ನಿರ್ಬಂಧ ಇಲ್ಲ. ಆದರೆ ಶಬರಿಮಲೆ ದೇಗುಲದ ವಿಶಿಷ್ಟತೆಯನ್ನು ಸಂರಕ್ಷಿಸಬೇಕು. ಕಮ್ಯುನಿಸ್ಟ್‌ ಸರ್ಕಾರ ಹಿಂದು ದೇಗುಲಗಳ ವಿರುದ್ಧ ಸಂಚು ರೂಪಿಸುತ್ತಿದೆ. ಕೇರಳದಲ್ಲಿ ತುರ್ತು ಪರಿಸ್ಥಿತಿಯಂತಹ ಸನ್ನಿವೇಶ ಸೃಷ್ಟಿಸಿದೆ. ಜಲ್ಲಿಕಟ್ಟು ನಿಷೇಧ, ಮಸೀದಿಗಳಲ್ಲಿ ಧ್ವನಿವರ್ಧಕಕ್ಕೆ ನಿಷೇಧ ಹೇರಿದ ನ್ಯಾಯಾಲಯ ನೀಡಿದ ಹಲವಾರು ಆದೇಶಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸಿಲ್ಲ. ಹೀಗಾಗಿ ಭಕ್ತಾದಿಗಳ ಭಾವನೆಗಳನ್ನು ಗೌರವಿಸಿ ಸುಪ್ರೀಂಕೋರ್ಟ್‌ ತೀರ್ಪು ಜಾರಿ ಮಾಡಬೇಕು ಎಂದರು.

ಹಿಂದೂ ಧರ್ಮ ಎಂದೆಂದಿಗೂ ಮಹಿಳೆಯರನ್ನು ಗೌರವಿಸುತ್ತಾ ಬಂದಿದೆಯಲ್ಲದೆ ಅವರನ್ನು ಪೂಜನೀಯ ಭಾವನೆಯಿಂದ ನೋಡುತ್ತದೆ. ಮಹಿಳೆಯರಿಗೆ ಕೇವಲ ದೇಗುಲಗಳಲ್ಲಿ ಪ್ರಾರ್ಥನೆಗೆ ಅವಕಾಶ ನೀಡುವ ಮೂಲಕ ಲಿಂಗ ಸಮಾನತೆ ಸಾಧಿಸಲಾಗದು. ಹಿಂದೂ ಧರ್ಮ ಹಿಂದಿನಿಂದಲೂ ಸಾಮಾಜಿಕ ಬದಲಾವಣೆಯ ಪರವೇ ನಿಂತಿದೆ. ಆದರೆ ಇದೀಗ ಸಾಮಾಜಿಕ ಪಿಡುಗಿನ ಹೆಸರಲ್ಲಿ ಹಿಂದೂ ಧರ್ಮದ ನಂಬಿಕೆ, ಆಚರಣೆಯಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಲು ಯತ್ನಿಸಿದರೆ, ದೇಶಾದ್ಯಂತ ಇರುವ ಹಿಂದೂಗಳು ಅಯ್ಯಪ್ಪ ಭಕ್ತರ ಹಿಂದೆ ಬಂಡೆಗಲ್ಲಿನಂತೆ ನಿಲ್ಲಲಿದ್ದಾರೆ. ಜೊತೆಗೆ ನಮ್ಮ ಕಾರ್ಯಕರ್ತರು ಕೇರಳ ಸರ್ಕಾರವನ್ನು ಉರುಳಿಸಲೂ ಹಿಂದು ಮುಂದು ನೋಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಅಂತಿಮವಾಗಿ ಕಾರ್ಯಕರ್ತರಿಂದ ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಮಂತ್ರ ಹೇಳಿಸಿದ ಬಳಿಕ ಭಾಷಣ ಮುಗಿಸಿದರು.

ಸಿಎಂ ತಿರುಗೇಟು:

ಈ ನಡುವೆ ಅಮಿತ್‌ ಶಾ ಭಾಷಣಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕೇರಳ ಸಿಎಂ ಪಿಣರಾಯಿ ವಿಜಯನ್‌, ನಮ್ಮ ಸರ್ಕಾರ ಬಿಜೆಪಿ ಕೃಪೆಯಲ್ಲಿ ಇಲ್ಲ. ಜನಾಶೀರ್ವಾದಿಂದ ನಮ್ಮ ಸರ್ಕಾರ ರಚನೆಯಾಗಿದೆ. ಜೊತೆಗೆ ಅಮಿತ್‌ ಶಾ ಅವರ ಹೇಳಿಕೆ ರಾಜ್ಯ ಸರ್ಕಾರವನ್ನು ವಿರೋಧಿಸುವುದಕ್ಕಿಂತ ಹೆಚ್ಚಾಗಿ ಸುಪ್ರೀಂಕೋರ್ಟ್‌ನ ತೀರ್ಪು ಮತ್ತು ಸಂವಿಧಾನವನ್ನು ವಿರೋಧಿಸುವಂತಿದೆ. ಜನಾಭಿಪ್ರಾಯವನ್ನೇ ನಾಶಗೊಳಿಸುವ ಇಂಥ ಮಾತುಗಳ ಬಗ್ಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರೆಲ್ಲಾ ವಿರೋಧಿಸಬೇಕು ಎಂದು ಹೇಳಿದರು.

ಕೇರಳ ಸರ್ಕಾರ, ಬಿಜೆಪಿಯ ದಯೆಯಲ್ಲಿ ಇಲ್ಲ. ಈ ಸರ್ಕಾರ ಜನರಿಂದ ಚುನಾಯಿತವಾಗಿದೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾರ ಭಾಷಣ ಜನಾದೇಶವನ್ನು ನಾಶಗೊಳಿಸುವ ಸಂದೇಶ ರವಾನಿಸುತ್ತಿದೆ. ಇದು ಸಂವಿಧಾನ ವಿರೋಧಿ ಹೇಳಿಕೆ. ಇಂಥ ಹೇಳಿಕೆಗಳ ವಿರುದ್ಧ ಪ್ರಜಾಪ್ರಭುತ್ವ ಪರ ನಿಲುವು ಹೊಂದಿರುವ ಪಕ್ಷಗಳು ಧ್ವನಿ ಎತ್ತಬೇಕು.

- ಪಿಣರಾಯಿ ವಿಜಯನ್‌, ಕೇರಳ ಮುಖ್ಯಮಂತ್ರಿ