ಸಂಸತ್ತಿನಲ್ಲಿ ಒಬಿಸಿ ವಿಧೇಯಕಕ್ಕೆ ಒಪ್ಪಿಗೆ ಪಡೆದೇ ತೀರುತ್ತೇವೆ : ಶಾ

news | Wednesday, April 4th, 2018
Suvarna Web Desk
Highlights

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಮಂಗಳವಾರ ಹಾವೇರಿ ಹಾಗೂ ಬಾಗಲಕೋಟೆಯಲ್ಲಿ ಪ್ರವಾಸ ನಡೆಸಿ ಹಿಂದುಳಿದ ವರ್ಗಗಳು ಹಾಗೂ ವೀರಶೈವರ ಲಿಂಗಾಯತ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದರು.

ಹಾವೇರಿ/ಬಾಗಲಕೋಟೆ : ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಮಂಗಳವಾರ ಹಾವೇರಿ ಹಾಗೂ ಬಾಗಲಕೋಟೆಯಲ್ಲಿ ಪ್ರವಾಸ ನಡೆಸಿ ಹಿಂದುಳಿದ ವರ್ಗಗಳು ಹಾಗೂ ವೀರಶೈವರ ಲಿಂಗಾಯತ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದರು. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ಸಂಜೆ ನಡೆದ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮಾತನಾಡಿದ ಶಾ ಅವರು, ಹಿಂದುಳಿದ ವರ್ಗಗಳಿಗೆ ಬಿಜೆಪಿ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸಂದೇಶ ರವಾನಿಸಿದರು.

ಇದರ ಬೆನ್ನಲ್ಲೇ ಬಾಗಲಕೋಟೆಯ ಶಿವಯೋಗಿ ಮಂದಿರಕ್ಕೆ ತೆರಳಿ ವೀರಶೈವ ಲಿಂಗಾಯತ ಧರ್ಮದ ಸ್ವಾಮೀಜಿಗಳ ಜತೆಗೆ ಸಭೆ ನಡೆಸಿ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಆತಂಕಬೇಡ ಎಂಬ ಅಭಯ ನೀಡಿದರು.

ಕಾಗಿನೆಲೆಯಲ್ಲಿ ಸಿಎಂ ವಿರುದ್ಧ ವಾಗ್ದಾಳಿ:

ಕಾಗಿನೆಲೆಯ ಸಮಾವೇಶದಲ್ಲಿ ಮಾತನಾಡಿದ ಅಮಿತ್‌ ಶಾ, ‘ಅಹಿಂದ’ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಬಗ್ಗೆಯಷ್ಟೇ ಕಾಳಜಿ ತೋರುತ್ತಿದ್ದಾರೆ. ‘ಹಿಂದ’ವನ್ನು ಕಡೆಗಣಿಸಿದ್ದಾರೆ. ಆದರೆ, ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎಲ್ಲ ವರ್ಗಗಳ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗಲಿದೆ. ಕಾಂಗ್ರೆಸ್‌ನವರು ಎಷ್ಟೇ ವಿರೋಧಿಸಿದರೂ ಹಿಂದುಳಿದ ವರ್ಗಗಳ ಜನ ಗೌರವಯುತವಾಗಿ ಬದುಕುವಂತೆ ಅವಕಾಶ ಕಲ್ಪಿಸುವ ಒಬಿಸಿ ಮಸೂದೆಯನ್ನು ದೇಶದಲ್ಲಿ ಜಾರಿಗೊಳಿಸಿಯೇ ತೀರುತ್ತೇವೆ ಎಂದು ಶಾ ಹೇಳಿದರು.

ಹಿಂದುಳಿದ ವರ್ಗದವರಿಗೆ ಸಂವಿಧಾನ ಬದ್ಧ ಹಕ್ಕುಗಳನ್ನು ಕೊಡುವ ವಿಧೇಯಕಕ್ಕೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಒಪ್ಪಿಗೆ ನೀಡಿದ್ದರೂ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನವರು ಅದು ಸೋಲುವಂತೆ ಮಾಡಿದರು. ಸಮಿತಿಯಲ್ಲಿ ಇಬ್ಬರು ಅಲ್ಪಸಂಖ್ಯಾತರ ಸದಸ್ಯರು ಇರಬೇಕೆಂದು ಪಟ್ಟು ಹಿಡಿದು ವಿಧೇಯಕ ಅಂಗೀಕಾರಕ್ಕೆ ತಡೆಯೊಡ್ಡಿದರು. ಅಹಿಂದ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರು ಈ ಬಗ್ಗೆ ಉತ್ತರ ಕೊಡಬೇಕು ಎಂದರು.

ಯಾರು ಬೇಕು ನಿರ್ಧರಿಸಿ: ಅಹಿಂದ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಬಗ್ಗೆ ಮಾತ್ರವೇ ಕಾಳಜಿ ತೋರುತ್ತಿದ್ದಾರೆ. ಶೇ. 22ರಷ್ಟುಹಿಂದುಳಿದ ಜನರಿದ್ದರೂ ಶೇ.12ರಷ್ಟುಜನಸಂಖ್ಯೆಯಿರುವ ಅಲ್ಪಸಂಖ್ಯಾತರಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಒಂದೇ ವರ್ಗದ ಓಲೈಕೆಯಲ್ಲಿ ಸಿದ್ದರಾಮಯ್ಯ ತೊಡಗಿದ್ದಾರೆ. ಆದರಿಂದ ಮುಂದಿನ 5 ವರ್ಷ ಕಾಲ ಯಾವ ಪಕ್ಷ ಅಧಿಕಾರ ನಡೆಸಬೇಕು ಎಂದು ನಿರ್ಧರಿಸುವ ಕಾಲ ಬಂದಿದೆ. ಯಡಿಯೂರಪ್ಪ ಸಿಎಂ ಆಗಬೇಕೋ ಅಥವಾ ಸಿದ್ದರಾಮಯ್ಯ ಆಗಬೇಕೋ ಎಂಬ ತೀರ್ಮಾನ ಆಗಬೇಕಿದೆ ಎಂದು ತಿಳಿಸಿದರು.

ಕನಕಗುರುಪೀಠಕ್ಕೆ ಭೇಟಿ

ಹಿಂದುಳಿದ ಸಮಾವೇಶದ ಹಿನ್ನೆಲೆಯಲ್ಲಿ ಮಧ್ಯಾಹ್ನ 4 ಗಂಟೆಗೆ ಕನಕದಾಸರ ಜನ್ಮಭೂಮಿಯಾದ ಕಾಗಿನೆಲೆಯ ಕನಕಗುರುಪೀಠಕ್ಕೆ ತೆರಳಿದ ಅಮಿತ್‌ ಶಾ ಅವರು ಸ್ವಾಮೀಜಿಗಳ ಜತೆಗೆ ಕೆಲಕಾಲ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಶಾ ಅವರು ತಿಂಥಣಿ ಶಾಖಾ ಮಠದ ಸಿದ್ಧರಾಮಾನಂದಪುರಿ ಸ್ವಾಮೀಜಿ, ಹೊಸದುರ್ಗದ ಈಶ್ವರಾನಂದಪುರಿ ಶ್ರೀ, ಕಾಗಿನೆಲೆ ಕಿರಿಯ ಶ್ರೀ ಅಮೋಘಸಿದ್ದೇಶ್ವರ ಸ್ವಾಮೀಜಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಠಕ್ಕೆ ನೀಡಿದ ಕೊಡುಗೆಗಳ ಕುರಿತು ಮಾಹಿತಿ ಪಡೆದುಕೊಂಡರು. ನಂತರ ಹಿಂದುಳಿದ ಸಮಾವೇಶದಲ್ಲಿ ಪಾಲ್ಗೊಂಡು 6.10ಕ್ಕೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಶಿವಯೋಗ ಮಂದಿರಕ್ಕೆ ತಲುಪಿದರು. ಅಲ್ಲಿ ಪಂಚಾಚಾರ್ಯರು ಹಾನಗಲ್‌ ಕುಮಾರಸ್ವಾಮಿಗಳ ಗದ್ದುಗೆ ದರ್ಶನ ಪಡೆದ ಬಳಿಕ ಶಾ ಅವರು ಪಂಚಾಚಾರ್ಯಯೊಂದಿಗೆ ಸಭೆ ನಡೆಸಿದರು. ಶಿವಯೋಗಿ ಮಂದಿರದ ಸಂಗನಬಸವ ಶ್ರೀಗಳು ಮತ್ತು 250ಕ್ಕೂ ಸ್ವಾಮೀಜಿಗಳು ಈ ವೇಳೆ ಉಪಸ್ಥಿತರಿದ್ದರು.

ಶಾ ಕಾಗಿನೆಲೆಗೆ ಬಂದಾಗ

ಶ್ರೀಗಳು ರಾಹುಲ್‌ ಬಳಿ

ಹಾವೇರಿ: ಸಿದ್ದರಾಮಯ್ಯ ಪರ ಬಹಿರಂಗವಾಗಿಯೇ ಬೆಂಬಲ ವ್ಯಕ್ತಪಡಿಸುತ್ತ ಬಂದಿರುವ ಕಾಗಿನೆಲೆ ಸ್ವಾಮೀಜಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಕಾಗಿನೆಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಠದಲ್ಲಿ ಇರದ್ದು ಚರ್ಚೆಗೆ ಗ್ರಾಸವಾಗಿದೆ. ಶಾ ಭೇಟಿ ಸಮಯದಲ್ಲೇ ಹರಿಹರದ ಬೆಳ್ಳೂಡಿ ಶಾಖಾ ಮಠಕ್ಕೆ ರಾಹುಲ್‌ ಗಾಂಧಿ, ಸಿಎಂ ಸಿದ್ದರಾಮಯ್ಯ ಭೇಟಿ ನೀಡುವ ಕಾರ್ಯಕ್ರಮ ಇದ್ದುದರಿಂದ ಶ್ರೀಗಳು ಅಲ್ಲಿಗೆ ಹೋಗಿದ್ದರು. ಹೀಗಾಗಿ ಕಾಗಿನೆಲೆ ಕಿರಿಯ ಶ್ರೀ ಅಮೋಘಸಿದ್ದೇಶ್ವರ ಸ್ವಾಮೀಜಿ ಅಮಿತ್‌ ಶಾ ಅವರನ್ನು ಮಠಕ್ಕೆ ಬರಮಾಡಿಕೊಂಡರು.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk