ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದಿನಿಂದ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಮೂರು ದಿನಗಳ ಕರ್ನಾಟಕ ಪ್ರವಾಸ ಹಮ್ಮಿಕೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎರಡು ಮಾಸ್ಟರ್ ಪ್ಲಾನ್ ಗಳನ್ನು ಜೊತೆಯಲ್ಲಿ ಇಟ್ಟುಕೊಂಡೇ ಬರುತ್ತಿದ್ದಾರೆ.
ಬೆಂಗಳೂರು(ಆ.11): ಎರಡು ರಾಷ್ಟ್ರೀಯ ಪಕ್ಷಗಳ ಅಗ್ರ ನಾಯಕರು ಏಕಕಾಲದಲ್ಲಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮೂರು ಪ್ರವಾಸ ಹಮ್ಮಿಕೊಂಡಿದ್ದರೆ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಯಚೂರಿನಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಇಬ್ಬರ ಭೇಟಿ ಯಶಸ್ಸಿಗಾಗಿ ಎರಡೂ ಪಕ್ಷಗಳ ರಾಜ್ಯ ನಾಯಕತ್ವ ಫುಲ್ ಬ್ಯುಸಿಯಾಗಿದೆ.
ಚುನಾವಣಾ ವರ್ಷವಾಗಿರುವ ಕಾರಣದಿಂದ ಈಗ ಕರ್ನಾಟಕದತ್ತ ರಾಷ್ಟ್ರೀಯ ಪಕ್ಷಗಳ ಗಮನ ಕೇಂದ್ರೀಕೃತವಾಗತೊಡಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದಿನಿಂದ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಮೂರು ದಿನಗಳ ಕರ್ನಾಟಕ ಪ್ರವಾಸ ಹಮ್ಮಿಕೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎರಡು ಮಾಸ್ಟರ್ ಪ್ಲಾನ್ ಗಳನ್ನು ಜೊತೆಯಲ್ಲಿ ಇಟ್ಟುಕೊಂಡೇ ಬರುತ್ತಿದ್ದಾರೆ.
2018ರ ವಿಧಾನಸಭಾ ಚುನಾವಣೆ ಮತ್ತು 2019ರ ಲೋಕಸಭಾ ಚುನಾವಣೆ ಎರಡಕ್ಕೂ ಏಕಕಾಲದಲ್ಲಿ ಮೂರು ದಿನಗಳ ಪ್ರವಾಸದ ವೇಳೆ ನೀಲ ನಕ್ಷೆ ರೆಡಿಯಾಗಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೈತಪ್ಪಿ ಹೋಗಿರುವ ಕ್ಷೇತ್ರಗಳ ಅಭ್ಯರ್ಥಿಗಳ ಸಭೆ ನಡೆಯಲಿದ್ದು, ಸದ್ಯದ ಮಟ್ಟಿಗೆ ರಾಜ್ಯದಲ್ಲಿ ಬಿಜೆಪಿಗೆ ಹಿನ್ನಡೆ ಎಂದು ಭಾವಿಸಲ್ಪಡುತ್ತಿರುವ ಲಿಂಗಾಯತ ಧರ್ಮದ ಡ್ಯಾಮೇಜ್ ಕಂಟ್ರೋಲ್ ಗೆ ಕೂಡಾ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸೂತ್ರ ಸಿದ್ಧವಾಗಲಿದೆ.
ಇನ್ನು ಇದೇ ವೇಳೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡಾ ಆಗಸ್ಟ್ 12ರಂದು ರಾಯಚೂರಿಗೆ ಭೇಟಿ ನೀಡುತ್ತಿದ್ದಾರೆ. ಮುಂದಿನ ಚುನಾವಣೆಗೆ ಹೈದ್ರಾಬಾದ್ ಕರ್ನಾಟಕದ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಮಹತ್ವದ ಸಮಾವೇಶ ಆಯೋಜಿಸಲಾಗಿದ್ದು , ಹೈ.ಕ. ಭಾಗಕ್ಕೆ ಪ್ರತ್ಯೇಕ 371 ಜೆ ಅನುಷ್ಠಾನದ ಮೂಲಕ ಈ ಭಾಗದ ಅಭಿವೃದ್ಧಿಗೆ ಕಾಂಗ್ರೆಸ್ ಕಾರಣವಾಗಿದೆ ಅನ್ನೋ ಸಂದೇಶ ರವಾನಿಸುವುದು ರಾಹುಲ್ ಭೇಟಿಯ ಹಿಂದಿನ ಅಜೆಂಡಾ.
ಇದಲ್ಲದೇ ಇದೇ ತಿಂಗಳ 16 ರಂದು ಬೆಂಗಳೂರಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಕೂಡಾ ರಾಹುಲ್ ಗಾಂಧಿ ಭಾಗಿಯಾಗಲಿದ್ದು, ಅಮಿತ್ ಶಾ ರಾಜ್ಯಕ್ಕೆ ಬಂದರು ಅನ್ನೋ ಸಮಯದಲ್ಲೇ ಕಾಂಗ್ರೆಸ್ ಕೂಡಾ ರಾಹುಲ್ ನೇತೃತ್ವದಲ್ಲಿ ಸಮಾವೇಶ ಆಯೋಜಿಸಿದೆ. ಅಮಿತ್ ಶಾ ಬಂದು ಹೋದ ಬಳಿಕ ಮತ್ತೊಂದು ಸಮಾವೇಶ ನಡೆಸುವ ಮೂಲಕ ಬಿಜೆಪಿಗೆ ಸೆಡ್ಡು ಹೊಡೆಯುವ ತಂತ್ರವನ್ನು ಕಾಂಗ್ರೆಸ್ ರೂಪಿಸಿದೆ.
- ಕಿರಣ್ ಹನಿಯಡ್ಕ ಮತ್ತು ಶ್ರೀನಿವಾಸ ಹಳಕಟ್ಟಿ, ಸುವರ್ಣ ನ್ಯೂಸ್.
