Asianet Suvarna News Asianet Suvarna News

ನಾ ಹೇಳಿದ್ದು ಕೇಳಿ, ಅಧಿಕಾರಕ್ಕೆ ಬರ್ತೀವಿ ಎಂದು 'ಚಾಣಕ್ಯ' ಸಲಹೆ

ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯ ಸಿದ್ಧತೆಗಳ ಬಗ್ಗೆ ಅಷ್ಟೇನೂ ತೃಪ್ತಿ ವ್ಯಕ್ತಪಡಿಸದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ನಾವು ಹೇಳಿದಂತೆ ನೀವು ಮಾಡಿದಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

Amit Shah unpleasant with BJP Leaders Permormance

ಬೆಂಗಳೂರು (ಜ.10): ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ  ಬಿಜೆಪಿಯ ಸಿದ್ಧತೆಗಳ ಬಗ್ಗೆ ಅಷ್ಟೇನೂ ತೃಪ್ತಿ ವ್ಯಕ್ತಪಡಿಸದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ನಾವು ಹೇಳಿದಂತೆ ನೀವು ಮಾಡಿದಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಅತ್ಯಂತ ಕಠಿಣ ಎಂದುಕೊಂಡಿದ್ದ ದೇಶದ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಭರ್ಜರಿ ಬಹುಮತದಿಂದ ಅಧಿಕಾರಕ್ಕೆ ತಂದಿರುವುದು ಸುಮ್ಮನೆ ಅಲ್ಲ. ಅದಕ್ಕೆ ಕೆಳಹಂತದಲ್ಲಿ ಸಾಕಷ್ಟು ಕೆಲಸ ಆಗಿತ್ತು. ಬೂತ್ ಸಮಿತಿಗಳನ್ನು ಸಶಕ್ತೀಕರಣಗೊಳಿಸಲಾಗಿತ್ತು. ಅದೇ ಮಾದರಿಯನ್ನು ಕರ್ನಾಟಕದಲ್ಲೂ ಜಾರಿಗೊಳಿಸುತ್ತಿದ್ದೇವೆ. ಪಕ್ಷದ ಎಲ್ಲ ಮುಖಂಡರೂ  ಅದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿದ್ದೇ ಆದಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ ಎಂದೂ ಅವರು ವಿಶ್ವಾಸದ ಮಾತುಗಳನ್ನು ಆಡಿದ್ದಾರೆ. ಮಂಗಳವಾರ ಸಂಜೆಯಿಂದ ತಡರಾತ್ರಿವರೆಗೂ ನಗರದ ಯಲಹಂಕ ಬಳಿಯ ರೆಸಾರ್ಟ್'ವೊಂದರಲ್ಲಿ ಪಕ್ಷದ ಸಭೆ ನಡೆಯಿತು.

ಇದರಲ್ಲಿ ರಾಜ್ಯ ಪದಾಧಿಕಾರಿಗಳು, ಚುನಾವಣಾ ಉಸ್ತುವಾರಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ, ಈಗಿರುವಂತೆ ನಿಧಾನಗತಿಯಲ್ಲಿ ಕೆಲಸ  ಮಾಡಿದರೆ ನಡೆಯುವುದಿಲ್ಲ. ಬೂತ್ ಮಟ್ಟವನ್ನು ಸಶಕ್ತೀಕರಣಗೊಳಿಸದಿದ್ದರೆ ಗೆಲುವು ಸಾಧ್ಯವಿಲ್ಲ ಎಂಬುದನ್ನು ನೆನಪಿಡಿ ಎಂದು ತೀಕ್ಷ್ಣವಾಗಿಯೇ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವೇಳೆ ಅಮಿತ್ ಶಾ ಅವರು ಪಕ್ಷದ ಮುಖಂಡರು ಮುಂದೇನು ಮಾಡಬೇಕು ಎಂಬುದನ್ನು ಹಲವು ಅಂಶಗಳ ಸಮೇತ ವಿವರವಾಗಿ ಮುಂದಿಟ್ಟರು ಎನ್ನಲಾಗಿದೆ.

ವಿಧಾನಸಭಾ ಕ್ಷೇತ್ರ ಉಸ್ತುವಾರಿಗಳು ವಾರದಲ್ಲಿ ವಾಸ್ತವ್ಯ ಸಹಿತ ಎರಡು ದಿನ ಪ್ರವಾಸ ಮಾಡಬೇಕು, ಪ್ರತಿ ಕ್ಷೇತ್ರಕ್ಕೆ ಕೋರ್ ಕಮಿಟಿ ರಚಿಸಬೇಕು, ಆದಷ್ಟು ಬೇಗ ಪೇಜ್ ಪ್ರಮುಖ್‌ರ ನೇಮಕ ಮಾಡಬೇಕು, ‘ಈ ಬಾರಿ ಬಿಜೆಪಿ ಸರ್ಕಾರ’ ಎಂದು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ  ಗೋಡೆಬರಹ ಬರೆಯಬೇಕು, ಬೂತ್ ನವಶಕ್ತಿ ಸಮಾವೇಶಗಳನ್ನು ನಡೆಸಬೇಕು, ಬೂತ್ ಮಟ್ಟದ ಅಧ್ಯಕ್ಷರ ಮನೆ ಮೇಲೆ ಬಿಜೆಪಿ ಧ್ವಜಾರೋಹಣ ಮಾಡಬೇಕು, ಕಳೆದ ಮೂರು ವಿಧಾನಸಭಾ ಚುನಾವಣೆಯನ್ನು ಎಬಿಸಿ ಎಂದು ವರ್ಗೀಕರಣ ಮಾಡಬೇಕು, ಸ್ಮಾರ್ಟ್ ಫೋನ್'ಗಳ ಬಳಕೆ ಮಾಡುವವರ ಪಟ್ಟಿ ಸಿದ್ಧಪಡಿಸಬೇಕು, ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗದ 10 ಹೊಸ ಮಂದಿಯನ್ನು ಸದಸ್ಯರನ್ನಾಗಿ ಮಾಡಬೇಕು, ಪ್ರತಿ ಮತಗಟ್ಟೆಗೆ ಶಕ್ತಿ ಕೇಂದ್ರದ ಪ್ರಮುಖರ ನೇಮಕ ಮಾಡಬೇಕು, ಪಂಚಾಯತ್ ಚುನಾವಣೆಯಲ್ಲಿ ಸೋತಿರುವವರ ಪಟ್ಟಿ ಮಾಡಬೇಕು. ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಬೇಕು, ಕಾಂಗ್ರೆಸ್, ಜೆಡಿಎಸ್ ನಾಯಕ ವಿರುದ್ಧ ಜಾರ್ಜ್‌ಶೀಟ್ ತಯಾರಿಸಬೇಕು, ಸಾಮಾಜಿಕ ಜಾಲತಾಣ ಕಾರ್ಯಾಗಾರಗಳನ್ನು ನಡೆಸಬೇಕು, ಮಂದಿರ, ಮಠ, ಸಾಧುಗಳ ಪಟ್ಟಿಯನ್ನು ಸಿದ್ಧಪಡಿಸಬೇಕು, ವಾಟ್ಸ್ ಆ್ಯಪ್ ಗ್ರೂಪ್‌ಗಳನ್ನು ರಚಿಸಬೇಕು ಎಂದು ಕಳೆದ ಆಗಸ್ಟ್‌ನಲ್ಲೇ ಸೂಚಿಸಿ ಹೋಗಿದ್ದೆ. ಆದರೆ, ಅವುಗಳನ್ನು ಸರಿಯಾಗಿ ನಿಭಾಯಿಸಿಲ್ಲ ಎಂದು ಹೇಳಿದರು ಎನ್ನಲಾಗಿದೆ.

 

Follow Us:
Download App:
  • android
  • ios