ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಕೇವಲ ಮೂರ್ನಾಲ್ಕು ತಿಂಗಳ ಪ್ರಚಾರ ಕಾರಣವಲ್ಲ. ಮೂರ್ನಾಲ್ಕು ವರ್ಷದಿಂದ ಅಮಿತ್‌ ಶಾ ನಡೆಸಿದ ತಂತ್ರಗಾರಿಕೆ ಇದರ ಹಿಂದಿದೆ. ಅದರಿಂದಾಗಿಯೇ ಹಿಂದೆಂದೂ ಗೆಲ್ಲದ ಸ್ಥಳಗಳಲ್ಲಿ ಕೂಡ ಬಿಜೆಪಿ ಸಾಕಷ್ಟು ಸ್ಥಾನಗಳನ್ನು ಗೆದ್ದಿದೆ.

ಸಾಮಾನ್ಯವಾಗಿ ಚುನಾವಣೆಯ ಸೋಲು ಗೆಲುವಿನ ಆಧಾರದ ಮೇಲೆ ಪ್ರಮುಖ ರಾಜಕೀಯ ಪಕ್ಷವೊಂದರ ಕಾರ‍್ಯತಂತ್ರಗಳನ್ನು ವಿಶ್ಲೇಷಿಸಲಾಗುತ್ತದೆ. ರಾಜಕೀಯ ಪಕ್ಷಗಳು ಕೂಡ ತಮ್ಮನ್ನು ಎಲೆಕ್ಷನ್‌ ಮಶೀನ್‌ ಎಂದೇ ಗ್ರಹಿಸುತ್ತವೆ. ಹೀಗಾಗಿ ಬೇರೆ ಅಂಶಗಳೆಡೆಗೆ ಗಮನ ಹರಿಸುವುದಿಲ್ಲ.

ಆದರೆ ಬಿಜೆಪಿಯ ವಿಷಯಕ್ಕೆ ಬಂದರೆ ಅಮಿತ್‌ ಶಾ ಯೋಚಿಸುವ ರೀತಿಯೇ ಬೇರೆ. ಅವರು ಸ್ವತಃ ಓಡಾಡಿ ವಿಶಿಷ್ಟರೀತಿಯಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುತ್ತಾರೆ. ಅದಕ್ಕಾಗಿ ಸ್ಥಳೀಯ ವಿದ್ಯಮಾನಕ್ಕೆ ಅನುಗುಣವಾಗಿ ಬೇರೆ ಬೇರೆ ರೀತಿಯ ಚಾಣಾಕ್ಷ ತಂತ್ರಗಳನ್ನು ಹೆಣೆಯುತ್ತಾರೆ. ಇಂತಹುದೇ ತಂತ್ರಗಳು 2019ರ ಚುನಾವಣೆಯ ದಿಕ್ಕನ್ನೇ ಬದಲಾಯಿಸಿದವು.

ಶಾಗೆ ಸಿಕ್ಕ ಗೋಲ್ಡನ್‌ ಪೀರಿಯಡ್‌

ಬಿಜೆಪಿಯ ವ್ಯಾಪ್ತಿ ವಿಸ್ತರಿಸಲು ಈ ಚುನಾವಣೆಯು ಶಾಗೆ ಸಿಕ್ಕ ಗೋಲ್ಡನ್‌ ಪೀರಿಯಡ್‌ ಆಗಿತ್ತು. ಅವರು ತಮ್ಮ ಪ್ರಚಾರದಲ್ಲಿ 30 ಅಂಶಗಳಿಗೆ ಪ್ರಾಧಾನ್ಯತೆ ನೀಡಬೇಕೆಂದು ಮೊದಲೇ ಪಟ್ಟಿ ಮಾಡಿಕೊಂಡಿದ್ದರು. ಸಾಂಪ್ರದಾಯಿಕ ವಿಧಾನಗಳ ಬದಲಿಗೆ ಸಮಕಾಲೀನ ವಿದ್ಯಮಾನಗಳನ್ನು ಪಕ್ಷಕ್ಕೆ ಲಾಭವಾಗುವ ರೀತಿಯಲ್ಲಿ ಬಳಸಿಕೊಂಡರು. ಪಕ್ಷದ ಕಾರ‍್ಯಕ್ರಮಗಳು ವ್ಯವಸ್ಥಿತವಾಗಿಯೂ, ನಿಖರವಾಗಿಯೂ ಇರುವಂತೆ ನೋಡಿಕೊಂಡರು.

ಜನಸಮುದಾಯದೊಂದಿಗೆ ಸಂವಾದ, ಅಧಿಕಾರಿಗಳೊಂದಿಗಿನ ಸಭೆಯ ಮಾಹಿತಿ, ಪಕ್ಷದ ರಾಷ್ಟ್ರೀಯ ಕಾರ‍್ಯದರ್ಶಿಗಳು ದೇಶದಾದ್ಯಂತ ಕೈಗೊಂಡ ನಿರಂತರ ಪ್ರವಾಸದ ಮಾಹಿತಿ, ರಾಜ್ಯದಲ್ಲಿರುವ ಪಕ್ಷದ ಕಾರ್ಯಾಲಯಗಳ ಸೂಕ್ಷ್ಮ ಕಾರ್ಯವಿಧಾನಗಳ ವಿವರಣೆ ಪಡೆದು ಅವುಗಳ ಕಾರ‍್ಯ ಚಟುವಟಿಕೆಯನ್ನು ಅವಲೋಕಿಸಿದ್ದರು.

ಬೂತ್‌ ಘಟಕಗಳಿಗಾಗಿ 6 ಕಾರ‍್ಯಕ್ರಮಗಳನ್ನು ಸಿದ್ಧಪಡಿಸಿದ್ದರು. ಜಿಲ್ಲೆಗಳಲ್ಲಿನ ಪಕ್ಷದ ಕಾರ್ಯಾಲಯ ನಿರ್ಮಾಣ ಪ್ರಗತಿ ಕುರಿತು ನಿರಂತರ ಮೇಲ್ವಿಚಾರಣೆ ನಡೆಸಿದರು. ಬಿಜೆಪಿಯ ನಿಧಿ ಸಂಗ್ರಹಣೆ ಯೋಜನೆಯಾದ ‘ಆಜೀವನ್‌ ಸಹಯೋಗ್‌’ ಕುರಿತು ಆಗಾಗ ಸಭೆ ನಡೆಸುತ್ತಿದ್ದರು. ದಿ ನಮೋ ಆ್ಯಪ್‌, ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ವಿಸ್ತಾರಕ್‌ ಯೋಜನೆಯನ್ನು ಪ್ರಾರಂಭಿಸಿ ಜನರನ್ನು ತಲುಪಿದರು.

ಚುನಾವಣೆ ಗೆಲ್ಲುವುದೊಂದೇ ಉದ್ದೇಶ ಅಲ್ಲ

ಶಾ ಅವರ ಕಾರ್ಯತಂತ್ರಗಳ ಹಿಂದಿನ ಉದ್ದೇಶ ಚುನಾವಣೆಯಲ್ಲಿ ಗೆಲ್ಲುವುದೊಂದೇ ಆಗಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಬಿಜೆಪಿಗೆ ಬಹುಮುಖಿ ಸಾಂಸ್ಥಿಕ ನೆಲೆ ಕಲ್ಪಿಸುವುದಾಗಿತ್ತು. ಅವರು ದೇಶಾದ್ಯಂತ ಪ್ರವಾಸ ಮಾಡಿದ್ದು ಇದೇ ಕಾರಣಕ್ಕೆ.

ದೀನದಯಾಳ್‌ ಉಪಾಧ್ಯಾಯ ಅವರ ಶತಮಾನೋತ್ಸವ ಕಾರ‍್ಯಕ್ರಮವನ್ನು ಅದ್ಧೂರಿಯಾಗಿ ನಡೆಸಿ ಪಕ್ಷದ ನೆಲೆ ವಿಸ್ತರಣೆಗೆ ಭೂಮಿಕೆಯನ್ನಾಗಿ ಅವರು ಬಳಸಿಕೊಂಡರು. ಉಪಾಧ್ಯಾಯರ ಎಲ್ಲ ಕೃತಿಗಳನ್ನು ಜನವರಿಯಲ್ಲಿ ಪ್ರಕಟಿಸಿ ಜನರಿಗೆ ತಲುಪುವಂತೆ ಮಾಡಿದರು.

ಶಾ ಸ್ವತಃ ‘ವಿಸ್ತಾರಕ್‌’ ಆದರು

ಶಾ ಆರಂಭಿಸಿದ ವಿಸ್ತಾರಕ್‌ ಯೋಜನೆಯಡಿಯಲ್ಲಿ 15 ದಿನ, 6 ತಿಂಗಳು ಮತ್ತು ಒಂದು ವರ್ಷ ಪಕ್ಷದ ಕಾರ‍್ಯಕರ್ತರು ಮತ್ತು ವಿಸ್ತಾರಕರಿಗೆ ಬೂತ್‌ ಮಟ್ಟದಲ್ಲಿ ತರಬೇತಿ ನೀಡಲಾಯಿತು. ರಾಷ್ಟ್ರಾದ್ಯಂತ ಪ್ರವಾಸ ಮಾಡುವ ಸಂದರ್ಭದಲ್ಲಿ ಸ್ವತಃ ಶಾ ಕೂಡ ಒಬ್ಬ ವಿಸ್ತಾರಕರಾಗಿದ್ದರು.

ಪಶ್ಚಿಮ ಬಂಗಾಳ, ತೆಲಂಗಾಣ, ಒಡಿಶಾ, ಲಕ್ಷದ್ವೀಪ ಮತ್ತು ಗುಜರಾತ್‌ ಈ 5 ರಾಜ್ಯಗಳಿಗೆ 15 ದಿನ ಭೇಟಿದ ಅಮಿತ್‌ ಶಾ ಸ್ವತಃ ವಿಸ್ತಾರಕರಾಗಿ ಮನೆಮನೆಗೆ ಭೇಟಿ ನೀಡಿದರು. ವಿಸ್ತಾರಕರೊಂದಿಗೆ ಪಕ್ಷದ ಸಂಘಟನೆ ಮತ್ತು ಬೂತ್‌ ಮಟ್ಟದಲ್ಲಿ ಜನರನ್ನು ತಲುಪುವುದು ಹೇಗೆ ಎಂಬ ಬಗ್ಗೆ ಸಂವಾದ ನಡೆಸಿ, ಉಳಿದವರಿಗೂ ತರಬೇತಿ ನೀಡುವ ಜವಾಬ್ದಾರಿ ವಹಿಸಿದರು.

2017ರ ಮೇನಲ್ಲಿ ವಿಸ್ತಾರಕ್‌ ಕಾರ‍್ಯಕ್ರಮದ ಭಾಗವಾಗಿ ಬಿಜೆಪಿ ಕಾಶ್ಮೀರಿ ಕಣಿವೆಯ 30 ಮುಸ್ಲಿಂ ಯುವ ವಿಸ್ತಾರಕರಿಗೆ ತರಬೇತಿ ನೀಡಿತ್ತು. ಈ ವಿಸ್ತಾರಕರು ಉತ್ಸಾಹದಿಂದ ಪ್ರಾದೇಶಿಕವಾಗಿ ಪಕ್ಷದ ಬಲವರ್ಧನೆಗೆ ಶ್ರಮಿಸುವ ನಿರ್ಧಾರ ಕೈಗೊಂಡರು. ಇದು ಕಾಶ್ಮೀರದಲ್ಲಿ ಬಿಜೆಪಿಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದವರಿಗೆ ಆಘಾತವನ್ನುಂಟು ಮಾಡಿತ್ತು.

ನಕ್ಸಲ್‌ ಬಾರಿಯನ್ನೇ ಆಯ್ದುಕೊಂಡಿದ್ದೇಕೆ?

ವಿಸ್ತಾರಕ್‌ ಯೋಜನೆಯನ್ನು ಅಮಿತ್‌ ಶಾ ಆರಂಭಿಸಿದ್ದು 2017ರ ಏಪ್ರಿಲ್‌ನಲ್ಲಿ ಪಶ್ಚಿಮ ಬಂಗಾಳದ ನಕ್ಸಲ್‌ಬಾರಿಯ ಬೂತ್‌ ನಂ.93ರಲ್ಲಿ. ಈ ಪ್ರದೇಶ ನಕ್ಸಲಿಸಂನ ಕೇಂದ್ರ. ಇಲ್ಲಿಗೆ ತಾನೊಬ್ಬ ರಾಷ್ಟ್ರೀಯ ಅಧ್ಯಕ್ಷನಾಗಿ ಅಲ್ಲದೆ ಸಾಮಾನ್ಯ ವಿಸ್ತಾರಕನಾಗಿ ಕಾಲಿಡಬೇಕು ಎನ್ನುವುದನ್ನು ಶಾ ಮೊದಲೇ ಅರಿತಿದ್ದರು. ಅದರಂತೆ ಅವರು ಹಾಗೂ 3,50,000 ಬಿಜೆಪಿ ಕಾರ‍್ಯಕರ್ತರು ಈ ಪ್ರದೇಶದಲ್ಲಿ ಬಡವರ ಮನೆಮನೆಗೆ ಭೇಟಿ ನೀಡಿದರು. ಈ ಮೂಲಕ 7 ಲಕ್ಷ ಜನರೊಂದಿಗೆ ಸಂಪರ್ಕ ಸಾಧ್ಯವಾಯಿತು.

ಶಾ ವಿಸ್ತಾರಕ್‌ ಯೋಜನೆ ಅನುಷ್ಠಾನಗೊಳಿಸಲು ಪಶ್ಚಿಮ ಬಂಗಾಳವನ್ನು ಆಯ್ಕೆ ಮಾಡಿಕೊಂಡಿದ್ದೇನೋ ಸರಿ. ಆದರೆ ನಕ್ಸಲ್‌ಬಾರಿಯನ್ನು ಆಯ್ಕೆ ಮಾಡಿಕೊಂಡಿದ್ದೇಕೆ? ಈ ಬಗ್ಗೆ ಪಕ್ಷದ ಪ್ರಧಾನ ಕಾರ‍್ಯದರ್ಶಿ ಕೈಲಾಶ್‌ ವಿಜಯ್‌ವರ್ಗೀಯ ಹೇಳಿದ್ದು ಹೀಗೆ- ‘ಯಾವ ಪ್ರದೇಶ ಬಿಜೆಪಿಗೆ ಅತ್ಯಂತ ಕಷ್ಟಕರವಾಗಿದೆಯೋ ಅಲ್ಲಿಂದಲೇ ಪ್ರಾರಂಭಿಸೋಣ ಎಂದು ಶಾ ಹೇಳಿದ್ದರು.’ ನಕ್ಸಲ್‌ಬಾರಿಯಲ್ಲಿ ಶಾ ವಿಸ್ತಾರಕ್‌ ಯೋಜನೆ ಆರಂಭಿಸಿದಾಗ ಲೋಕಸಭೆ ಚುನಾವಣೆ ಘೋಷಣೆಯಾಗಿರಲಿಲ್ಲ ಎಂಬುದು ಗಮನಾರ್ಹ.

ವಾಸ್ತವಾಗಿ ಶಾ ತಮ್ಮ ರಾಜಕೀಯ ಪ್ರಾರಂಭಿಸಿದ್ದು 1980ರ ದಶಕದಲ್ಲಿ ಅಹಮದಾಬಾದಿನ 263ನೇ ವಾರ್ಡ್‌ನ ಬೂತ್‌ ಸಂಚಾಲಕರಾಗಿ. ಅಲ್ಲಿಂದ ಹಂತಹಂತವಾಗಿ ಬೆಳೆದು ಪಕ್ಷದ ರಾಷ್ಟ್ರಾಧ್ಯಕ್ಷರಾಗಿ 2017ರಲ್ಲಿ ವಿಸ್ತಾರಕ್‌ ಯೋಜನೆ ಆರಂಭಿಸಿದಾಗ ಅವರು ತಾನೂ ಕೂಡ ಒಬ್ಬ ಕಾರ‍್ಯಕರ್ತನಾಗಿ ಬಂದಿದ್ದೇನೆಯೇ ಹೊರತು, ರಾಷ್ಟ್ರೀಯ ಅಧ್ಯಕ್ಷನಾಗಿ ಬಂದಿಲ್ಲ ಎಂದು ತಮ್ಮ ಸುತ್ತ ನೆರೆದ ಕಾರ‍್ಯಕರ್ತರಿಗೆ ಮನದಟ್ಟು ಮಾಡಿಕೊಟ್ಟರು.

ಶಾ ಕಾರಾರ‍ಯಚರಣೆಯ ಸ್ಯಾಂಪಲ್‌

ವಿಸ್ತಾರಕ್‌ ಯೋಜನೆ ಉದ್ಘಾಟಿಸಲು ಏ.25 ರಂದು ಬೆಳಿಗ್ಗೆ 8.15ಕ್ಕೆ ಶಾ ದೆಹಲಿಯಿಂದ ಬಾಗ್ದೋಗ್ರಾಗೆ ಕಮರ್ಷಿಯಲ್‌ ವಿಮಾನದಲ್ಲಿ ಹೊರಟರು. ಬೂತ್‌ ನಂ.93 ನ್ನು ಮಧ್ಯಾಹ್ನ 1 ಗಂಟೆಗೆ ತಲುಪಿದರು. ಬೂತ್‌ ನಂ.93 ರಲ್ಲಿ ಬರುವ ಬಹುತೇಕ ಕುಟುಂಬಕ್ಕೂ ಭೇಟಿ ನೀಡಿ ಮಾತನಾಡಿಸಿದರು.

ಎಲ್ಲ ಸಭೆಗಳಿಗೆ ಮತ್ತು ಕಾರ‍್ಯಕ್ರಮಗಳಿಗೆ ಸ್ವತಃ ಹೋಗಿ ಹಾಜರಿದ್ದು, ಮಧ್ಯರಾತ್ರಿ ಕೊಲ್ಕತ್ತಾ ಬಿಟ್ಟರು. ಅಂದರೆ, ತಳಮಟ್ಟದಲ್ಲಿ ಪಕ್ಷದ ಸಂಘಟನೆ ಆರಂಭಿಸಬೇಕು ಎಂಬುದು ಅವರ ತಂತ್ರಗಳಲ್ಲೊಂದು.

ಆ ಭೇಟಿಯಲ್ಲಿ ಶಾ ಮೂರು ದಿನ ಪಶ್ಚಿಮ ಬಂಗಾಳದಲ್ಲಿದ್ದರು. ಅಷ್ಟೇ ಅವಧಿಯಲ್ಲಿ 22 ಕಾರ‍್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಬೂತ್‌ ನಂ.93ರ ನಕ್ಸಲ್‌ಬಾರಿ ಪ್ರದೇಶದಲ್ಲಿ ಮನೆಮನೆಗೆ ತರಳಿ ಪ್ರಚಾರ ಮಾಡಿದ್ದರು. ಬೂತ್‌ ನಂ.231 ಮತ್ತು 269ಕ್ಕೆ ಭೇಟಿ ನೀಡಿದ್ದರು.

ಪಕ್ಷದ ರಾಜ್ಯ ಘಟಕದ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಬುದ್ಧಿ ಜೀವಿಗಳು, ಪತ್ರಕರ್ತರೊಂದಿಗೆ ಸಂವಾದ ನಡೆಸಿದ್ದರು. ಜೊತೆಗೆ ಜನಸಂಘದ ಸಂಸ್ಥಾಪಕ ಶ್ಯಾಮ ಪ್ರಸಾದ್‌ ಮುಖರ್ಜಿ ಅವರ ಐತಿಹಾಸಿಕ ಮನೆಗೂ ಭೇಟಿ ನೀಡಿದ್ದರು. ಹೀಗೆ ಅಮಿತ್‌ ಶಾ ಅವರ ರಾಷ್ಟ್ರವ್ಯಾಪಿ ಪ್ರವಾಸವು ಪಶ್ಚಿಮ ಬಂಗಾಳದಿಂದ ಆರಂಭಗೊಂಡು ಪಕ್ಷ ಸಂಘಟನೆಗೆ ಅಡಿಗಲ್ಲಾಯಿತು.