ಬಿಜೆಪಿ ನಾಯಕರು ನಿನ್ನೆ  ಎಷ್ಟು  ಸಂತೋಷವಾಗಿದ್ದರೋ, ಅಷ್ಟೇ ದುಃಖಿತರಾಗಿದ್ದರು. ಇದಕ್ಕೆ ಕಾರಣ  ಅಮಿತ್ ಶಾ ಕ್ಲಾಸ್. ರಾಜ್ಯ ಬಿಜೆಪಿ ನಾಯಕರಿಗೆ ಶಾ ನಿನ್ನೆ  ಸರಿಯಾಗೆ ಬಿಸಿ ಮುಟ್ಟಿಸಿದ್ದಾರೆ. ಅದರ ಇನ್'ಸೈಡ್ ಡಿಟೈಲ್ ಇಲ್ಲಿದೆ ನೋಡಿ .  

ಬೆಂಗಳೂರು(ಆ.13): ಮೂರು ದಿನಗಳ ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಿನ್ನೆ ರಾಜ್ಯ ಬಿಜೆಪಿ ನಾಯಕರಿಗೆ ಸರಿಯಾಗೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಖಾಸಗಿ ಹೋಟೆಲ್'ನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಭಾಗಿಯಾಗಿದ್ದ ರಾಜ್ಯ ನಾಯಕರಿಗೆ ಪ್ರಶ್ನೆಗಳ ಸುರಿಮಳೆಗೈಯುತ್ತ ಚಾಟಿ ಬೀಸಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಐಟಿ ದಾಳಿ ನಡೆದಾಗ ರಾಜ್ಯದಲ್ಲಿ ಇದ್ದು ನೀವು ಏನು ಮಾಡಿದ್ರಿ ಎಂದು ಪ್ರಶ್ನಿಸಿದ್ದಾರೆ .

ಸಚಿವ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿ ನಡೆದಾಗ ಏನ್ ಮಾಡಿದ್ದೀರಿ? ಕೂಡಲೇ ರಾಜೀನಾಮೆಗೆ ಏಕೆ ಆಗ್ರಹಿಸಿಲ್ಲ. ಸಮುದಾಯಕ್ಕೆ ಹೆದರಿ ಹೇಳಿಕೆ ನೀಡಲಿಲ್ವಾ? ಇಲ್ಲ ಸಚಿವ ಡಿಕೆಶಿ ನಿಮಗೆಲ್ಲಾ ಅಷ್ಟು ಆಪ್ತರಾಗಿದ್ದಾರಾ? ಸಿಕ್ಕ ಅವಕಾಶ ಸದ್ಭಳಕೆ ಮಾಡಿಕೊಳ್ಳಲಿಲ್ಲ ಅಂದ್ರೆ ಮುಂದೇನು ಮಾಡುತ್ತೀರಿ? ರಸ್ತೆಗಿಳಿದು ಪ್ರತಿಭಟನೆ ಮಾಡುವುದು ಬಿಟ್ಟು ಸುಮ್ಮನಾಗಿದ್ದೇಕೆ? ಈಗ ಡಿಕೆಶಿ ರಾಜೀನಾಮೆ ಕೇಳಲು ಆಗುತ್ತಾ? ಇನ್ಮುಂದೆ ಪಕ್ಷದಲ್ಲಿ ಇಂತಹ ಅಶಿಸ್ತು ಸಹಿಸಲ್ಲ. ಒಂದು ವೇಳೆ ಕೇಸ್ ಇಡಿ ಗೆ ವರ್ಗಾಯಿಸದಿದ್ದರೆ ಏನು ಮಾಡುತ್ತೀರಾ? ಎಂದು ಸುಮಾರು 45 ನಿಮಿಷಗಳ ಕಾಲ ಕ್ಲಾಸ್ ತೆಗೆದುಕೊಂಡಿದ್ದಾರೆ .

ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳುತ್ತಾ ನಿರ್ಲಕ್ಷ್ಯ ತೋರಿದ ನಾಯಕರನ್ನು ತರಾಟೆಗೆ ತೆಗೆದುಕೊಂಡಿ ದ್ದಾರೆ. ಇನ್ನು ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಏಕೆ ಹೋರಾಟ ರೂಪಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅಮಿತ್ ಶಾ, ಹಿರಿಯ ಮತ್ತು ಕಿರಿಯ ಮುಖಂಡರಿಗೆ ಬುದ್ದಿ ಮಾತನ್ನು ಹೇಳುತ್ತಾ ಕಿವಿ ಹಿಂಡಿದ್ದಾರೆ. ಮುಂಬರುವ ದಿನದಲ್ಲಾದರೂ ತೀವ್ರ ಹೋರಾಟ ರೂಪಿಸಿ ಅಂತಾ ಸೂಚಿಸಿದ್ದಾರೆ.

ಒಟ್ಟಿನಲ್ಲಿ ಗರ ಬಡಿದವರಂತೆ ಆರಾಮಾಗಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಶಾ ಸರಿಯಾಗೇ ಬಿಸಿ ಮುಟ್ಟಿಸಿದ್ದಾರೆ. ಮಂಕಾಗಿದ್ದ ರಾಜ್ಯ ಬಿಜೆಪಿಗೆ ಅಮಿತ್ ಶಾ ಚಳಿ ಬಿಡಿಸಿದ್ದು , ಮುಂದಿನ ದಿನಗಳಲ್ಲಿ ಅಮಿತ್ ಶಾ ಪಾಠ ಹೇಗೆ ಕೆಲಸ ಮಾಡುತ್ತೆ ಅಂತಾ ಕಾದು ನೋಡಬೇಕಿದೆ.