ನವದೆಹಲಿ: ದೇಶದ ಅವಿಭಾಜ್ಯ ಅಂಗವಾಗಿದ್ದರೂ, ವಿಶೇಷ ಕಾನೂನಿನ ಬಲ, ಪ್ರತ್ಯೇಕತಾವಾದಿಗಳ ದೇಶವಿರೋಧಿ ಚಟುವಟಿಕೆ, ನೆರೆಯ ಪಾಕಿಸ್ತಾನದ ಕುಮ್ಮಕ್ಕಿನಿಂದಾಗಿ ದೇಶದ ಭಾಗವಲ್ಲವೆಂಬಂತೆ ಆಗಿರುವ ಜಮ್ಮು ಮತ್ತು ಕಾಶ್ಮೀರವನ್ನು ಗೆಲ್ಲಲು ಕೇಂದ್ರದ ನೂತನ ಗೃಹ ಸಚಿವ, ಬಿಜೆಪಿ ಕಂಡ ಅತ್ಯಂತ ಯಶಸ್ವಿ ಚುನಾವಣಾ ರಣತಂತ್ರಗಾರ ಅಮಿತ್‌ ಶಾ ಇದೀಗ ಹೊಸ ಮಾಸ್ಟರ್‌ಪ್ಲಾನ್‌ ಸಿದ್ಧಪಡಿಸಿದ್ದಾರೆ. ಎಲ್ಲವೂ ಯೋಜಿತ ರೀತಿಯಲ್ಲೇ ನಡೆದಿದ್ದೇ ಆದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸದಾಗಿ ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆ ನಡೆಯಲಿದ್ದು, ಕಣಿವೆ ರಾಜ್ಯ ಮೊದಲ ಬಾರಿಗೆ ಹಿಂದೂ ಮುಖ್ಯಮಂತ್ರಿಯೊಬ್ಬರನ್ನು ಕಂಡರೂ ಅಚ್ಚರಿ ಇಲ್ಲ.

ಕೇಂದ್ರ ಸರ್ಕಾರ ರೂಪಿಸಿರುವ ಈ ಮಾಸ್ಟರ್‌ ಪ್ಲಾನ್‌ ಸಹಜವಾಗಿಯೇ, ಜಮ್ಮು ಭಾಗಕ್ಕೆ ದಶಕಗಳಿಂದ ಅನ್ಯಾಯವೆಸಗುವ ಮೂಲಕ ಇಡೀ ರಾಜ್ಯವನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದ ಕೆಲ ಸ್ಥಳೀಯ ರಾಜಕೀಯ ಪಕ್ಷಗಳು, ಪ್ರತ್ಯೇಕತಾವಾದಿ ನಾಯಕರು ಮತ್ತು ಪಾಕ್‌ ಬೆಂಬಲಿತ ಉಗ್ರ ಸಂಘಟನೆಗಳಿಗೆ ಬಿಸಿ ಮುಟ್ಟಿಸುವುದು ಖಚಿತವೆನ್ನಲಾಗಿದೆ.

ಕ್ಷೇತ್ರ ಮರುವಿಂಗಡಣೆ:

ಜಮ್ಮು ಮತ್ತು ಕಾಶ್ಮೀರ ರಾಜ್ಯವು ಜಮ್ಮು, ಕಾಶ್ಮೀರ ಮತ್ತು ಲಡಾಖ್‌ ಪ್ರಾಂತ್ಯಗಳನ್ನು ಒಳಗೊಂಡಿದೆ. ಭೂಭಾಗದ ವಿಸ್ತೀರ್ಣದಲ್ಲಿ ನೋಡುವುದಾದರೆ ಜಮ್ಮು ಪಾಲು ಶೇ.25.93 (26,293 ಚ.ಕೀ), ಕಾಶ್ಮೀರದ ಪಾಲು ಶೇ.15.73 (15,948 ಚ.ಕೀ.), ಲಡಾಖ್‌ ಪಾಲು ಶೇ.58.33 (59,146 ಚ.ಕೀ) ಇದೆ. ಆದರೆ ರಾಜ್ಯ ವಿಧಾನಸಭೆಯಲ್ಲಿ ಮೂರೂ ಪ್ರಾಂತ್ಯಗಳು ತಮ್ಮ ಜನಸಂಖ್ಯೆ ಆಧಾರದಲ್ಲಿ ಪ್ರಾತಿನಿಧ್ಯ ಪಡೆದುಕೊಂಡಿಲ್ಲ. ಜಮ್ಮು ಜನಸಂಖ್ಯೆ 2011ರ ಜನಗಣತಿಯಂತೆ 6,907,622 ಇದೆ, ಕಾಶ್ಮೀರದ ಜನಸಂಖ್ಯೆ 5,350,811 ಮತ್ತು ಲಡಾಖ್‌ ಜನಸಂಖ್ಯೆ 290,492 ಇದೆ.

ಆದರೆ 87 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಕಡಿಮೆ ಜನಸಂಖ್ಯೆ ಹೊಂದಿರುವ ಕಾಶ್ಮೀರಕ್ಕೆ 46 ಸ್ಥಾನ, ಹೆಚ್ಚಿನ ಜನಸಂಖ್ಯೆ ಹೊಂದಿರುವ ಜಮ್ಮುಗೆ 37 ಸ್ಥಾನ ಕಲ್ಪಿಸಲಾಗಿದೆ. ಇನ್ನು ಲಡಾಖ್‌ಗೆ 4 ಸ್ಥಾನ ನೀಡಲಾಗಿದೆ. ಹೀಗಾಗಿ ಮೊದಲಿನಿಂದಲೂ ಕಾಶ್ಮೀರಿ ಪ್ರದೇಶದ ಜನರು ಒಲವು ತೋರಿಸಿದ ಪಕ್ಷಗಳೇ ಅಧಿಕಾರಕ್ಕೆ ಬರುತ್ತಿವೆ. ದಶಕಗಳಿಂದ ಜಮ್ಮುವಿಗೆ ಅನ್ಯಾಯವಾಗಿದ್ದರೂ ಅದನ್ನು ಸರಿಪಡಿಸಲಾಗಿರಲಿಲ್ಲ.

ಹೀಗಾಗಿ ಇದೀಗ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಕ್ಷೇತ್ರ ಮರುವಿಂಗಡಣೆ ನಡೆಸಲು ಕೇಂದ್ರ ಗೃಹ ಸಚಿವಾಲಯ ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ. ಹೀಗಾದಲ್ಲಿ ಜನಸಂಖ್ಯೆ ಆಧಾರದಲ್ಲಿ ಕಾಶ್ಮೀರ ಪ್ರಾಂತ್ಯದ ಸ್ಥಾನಗಳು ಕುಂಠಿತಗೊಳ್ಳಲಿವೆ ಅಥವಾ ಜಮ್ಮು ಪ್ರಾಂತ್ಯಕ್ಕೆ ಹೆಚ್ಚಿನ ಸ್ಥಾನ ಲಭ್ಯವಾಗಲಿದೆ. ಜಮ್ಮು ಪ್ರಾಂತ್ಯದಲ್ಲಿ ಬಿಜೆಪಿ ಹೆಚ್ಚು ಶಕ್ತಿಯುತವಾಗಿದ್ದು, ಹೆಚ್ಚಿನ ಸ್ಥಾನ ಗೆಲ್ಲುವ ಮೂಲಕ ರಾಜ್ಯದಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದು, ಮೊದಲ ಬಾರಿಗೆ ರಾಜ್ಯವನ್ನು ಹಿಂದೂ ಮುಖ್ಯಮಂತ್ರಿಯೊಬ್ಬರು ಆಳಬಹುದಾಗಿದೆ.

ಇದಲ್ಲದೇ ರಾಜ್ಯದಲ್ಲಿ ಎಸ್‌ಟಿ ಸಮುದಾಯಕ್ಕೆ ಮೀಸಲು ಕಲ್ಪಿಸಿದ್ದರೂ, ಅದನ್ನು ಹಿಂದಿನ ಸರ್ಕಾರಗಳು ನಾನಾ ಕಾಯ್ದೆಯ ಮೂಲಕ ರದ್ದುಪಡಿಸಿವೆ. ಹೀಗಾಗಿ ಹೊಸ ಕ್ಷೇತ್ರ ಮರುವಿಂಗಡಣೆ ವೇಳೆ ರಾಜ್ಯದಲ್ಲಿನ ಗುಜ್ಜರ್‌, ಬಕೇರ್‌ವಾಲ್ಸ್‌ ಮತ್ತು ಗಡ್ಡೀಸ್‌ ಸಮುದಾಯಕ್ಕೆ ಎಸ್‌ಟಿ ಮೀಸಲು ನೀಡುವ ಬಗ್ಗೆಯೂ ಪ್ರಸ್ತಾಪ ಮಾಡಲಾಗುವುದು. ಹೀಗೆ ಮಾಡಿದಲ್ಲಿ ಕಾಶ್ಮೀರ ಪ್ರಾಂತ್ಯದಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌, ಪಿಡಿಪಿ ಅಧಿಪತ್ಯಕ್ಕೆ ಧಕ್ಕೆ ಬೀಳಲಿದೆ.

ಇದೇ ಹಿನ್ನೆಲೆಯಲ್ಲಿ ಅಮಿತ್‌ ಶಾ ಗೃಹ ಸಚಿವರಾಗುತ್ತಲೇ, ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರು ದೆಹಲಿಗೆ ಆಗಮಿಸಿ, ರಾಜ್ಯದ ಸದ್ಯದ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಗುಪ್ತಚರ ಇಲಾಖೆ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌ ಅವರಿಂದಲೂ ಅಮಿತ್‌ ಶಾ ಮಾಹಿತಿ ಪಡೆದುಕೊಂಡಿದ್ದಾರೆ. ಕಳೆದ 3-4 ದಿನಗಳಿಂದ ಅಮಿತ್‌ ಶಾ ನಡೆಸುತ್ತಿರುವ ಸರಣಿ ಸಭೆಗಳು, ಶೀಘ್ರವೇ ಕ್ಷೇತ್ರ ಮರುವಿಂಗಡಣೆಯ ಸೂಚಕ ಎಂದು ಮೂಲಗಳು ತಿಳಿಸಿವೆ.

ಆದರೆ ಕೇಂದ್ರ ಸರ್ಕಾರದ ಇಂಥ ಯಾವುದೇ ಕ್ರಮಕ್ಕೆ ಸ್ಥಳೀಯ ರಾಜಕೀಯ ಪಕ್ಷಗಳಾದ ಪಿಡಿಪಿ, ನ್ಯಾಷನಲ್‌ ಕಾನ್ಫರೆನ್ಸ್‌ ಸೇರಿದಂತೆ ಕೆಲ ಪಕ್ಷಗಳು, ಪ್ರತ್ಯೇಕವಾದಿ ಸಂಘಟನೆಗಳು, ಸ್ಥಳೀಯ ಉಗ್ರ ಸಂಘಟನೆಗಳು ಒಂದಲ್ಲಾ ಒಂದು ರೀತಿಯಲ್ಲಿ ಅಡ್ಡಿ ಮಾಡುವುದು ಖಚಿತ. ಹೀಗಾಗಿ ಸರ್ಕಾರ ಯಾವ ರೀತಿಯಲ್ಲಿ ಪ್ರಕರಣ ನಿರ್ವಹಿಸಲಿದೆ ಎಂಬ ಕುತೂಹಲ ಇದೆ.