ನವದೆಹಲಿ[ಆ.06]: ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ತೀವ್ರ ವಿರೋಧದ ಹೊರತಾಗಿಯೂ, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸೌಲಭ್ಯ ಕಲ್ಪಿಸುವ ಸಂವಿಧಾನದ 370ನೇ ವಿಧಿ ಹಾಗೂ ಕಾಶ್ಮೀರದಲ್ಲಿ ದೇಶದ ಇತರೆ ಭಾಗದವರಿಗೆ ಆಸ್ತಿ ಖರೀದಿ ಹಕ್ಕು ನಿರಾಕರಿಸುವ 35(ಎ) ಪರಿಚ್ಛೇದ ನಿಷ್ಷಕ್ರಿಯಗೊಳಿಸುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಘೋಷಣೆ ಮಾಡಿದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಜೋಡಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ವಶಕ್ಕೆ ಪಡೆಯುವ ರಣತಂತ್ರ ರೂಪಿಸಿದ್ದಾರೆಯೇ ಎಂಬ ವಿಶ್ಲೇಷಣೆಗಳು ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿವೆ.

ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ ಹೊಂದುವ ಹಾಗೂ ಸ್ವಾಯತ್ತತೆ ನೀಡುವ ಸಂವಿಧಾನದ 370ನೇ ವಿಧಿ ನಿಷ್ಕಿ್ರಯದಿಂದಾಗಿ ಜಮ್ಮು-ಕಾಶ್ಮೀರವೂ ಇದೀಗ ಭಾರತದ ಸಂವಿಧಾನದ ಆಡಳಿತಕ್ಕೆ ಒಳಪಡಲಿದೆ. ಅಲ್ಲದೆ, 35(ಎ) ಪರಿಚ್ಛೇದದ ರದ್ದಿಂದ ಕಾಶ್ಮೀರದ ಹೊರಗಿನವರೂ ಸಹ ಕಾಶ್ಮೀರದಲ್ಲಿ ಆಸ್ತಿ ಖರೀದಿ, ಉದ್ಯಮ ಸ್ಥಾಪನೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲಿದೆ.

ಆದಾಗ್ಯೂ, ಕಾಶ್ಮೀರದ ಕೆಲ ಭಾಗವು ಪಾಕಿಸ್ತಾನಕ್ಕೆ ಹಂಚಿಹೋಗಿದೆ. ಇದನ್ನು ಸಹ ಸೇನಾ ಕಾರ್ಯಾಚರಣೆ ಮೂಲಕ ಅಥವಾ ಇನ್ನಾವುದೇ ರಣತಂತ್ರದ ಮೂಲಕ ಭಾರತದ ವಶಕ್ಕೆ ಪಡೆದು, ಅಖಂಡ ಕಾಶ್ಮೀರ ಮಾಡುವ ಗುರಿಯನ್ನು ಮೋದಿ-ಶಾ ಜೋಡಿ ಹೊಂದಿದೆ. ಇದಕ್ಕಾಗಿಯೇ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌ ನೇತೃತ್ವದಲ್ಲಿ ಕಾರ್ಯತಂತ್ರ ರೂಪಿಸಲಾಗಿದೆ ಎನ್ನಲಾಗಿದೆ. ಅಲ್ಲದೆ, ಇದಕ್ಕಾಗಿಯೇ ಜಮ್ಮು-ಕಾಶ್ಮೀರದಲ್ಲಿ ಭಾರೀ ಪ್ರಮಾಣದ ಸೇನಾ ಜಮಾವಣೆ ಮಾಡಲಾಗಿದೆ ಎಂದೂ ಹೇಳಲಾಗುತ್ತಿದೆ.

ಪಿಒಕೆ ಅಂದರೇನು?

ಇಂದಿನ ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಸ್ವಾತಂತ್ರ್ಯ ಪೂರ್ವದಲ್ಲಿ ಜಮ್ಮು-ಕಾಶ್ಮೀರ ರಾಜರ ಆಳ್ವಿಕೆಯಲ್ಲಿತ್ತು. 1947ರಲ್ಲಿ ಭಾರತ ಸ್ವತಂತ್ರಗೊಂಡ ಬಳಿಕ ಪಾಕಿಸ್ತಾನ-ಭಾರತ ವಿಭಜನೆಯಾದಾಗ, ಜಮ್ಮು-ಕಾಶ್ಮೀರದ ಮಹಾರಾಜ ಹರಿಸಿಂಗ್‌ ಅವರು ಭಾರತದ ಒಕ್ಕೂಟ ಸೇರುವ ಒಪ್ಪಂದಕ್ಕೆ ಸಹಿ ಹಾಕುತ್ತಾರೆ. ಈ ಪ್ರಕಾರ, ಸ್ವಾಭಾವಿಕ ಪಾಕಿಸ್ತಾನದ ಆಕ್ರಮಿತ ಕಾಶ್ಮೀರ ಸ್ವಾಭಾವಿಕವಾಗಿ ಭಾರತದ ಭಾಗವಾಗಬೇಕಿತ್ತು. ಆದರೆ, ಕಾಶ್ಮೀರದ ಕೆಲವೊಂದು ಪ್ರದೇಶಗಳು ಪಾಕಿಸ್ತಾನದ ವಶಕ್ಕೆ ಹೋದವು. ಅದನ್ನು ಪಾಕ್‌ ಆಕ್ರಮಿತ ಕಾಶ್ಮೀರ ಎಂದೇ ಕರೆಯಲಾಗುತ್ತದೆ. ಈ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಆಡಳಿತಾತ್ಮಕ ದೃಷ್ಟಿಯಿಂದ ಪಾಕಿಸ್ತಾನ ಆಜಾದ್‌ ಕಾಶ್ಮೀರ, ಗಿಲ್ಗಿಟ್‌-ಬಾಲ್ಟಿಸ್ತಾನ ಎಂದು ವಿಭಜಿಸಿದೆ.

1974ರಲ್ಲಿ ರೂಪುಗೊಂಡ ಆಜಾದ್‌ ಕಾಶೀರ ಮಧ್ಯಂತರ ಸಂವಿಧಾನ ಕಾಯ್ದೆಯಡಿಯೇ ಆಜಾದ್‌ ಕಾಶ್ಮೀರದಲ್ಲಿ ಆಳ್ವಿಕೆ ನಡೆಯುತ್ತಿದೆ. ಅಲ್ಲದೆ, ಪ್ರಧಾನಿ, ಅಧ್ಯಕ್ಷ, ಸಚಿವರಿದ್ದರೂ ಆಡಳಿತ ಮಾತ್ರ ಇವರ ಕೈಯಲಿಲ್ಲ. ಆಜಾದ್‌ ಕಾಶ್ಮೀರದ ಆಡಳಿತವನ್ನು ಪಾಕಿಸ್ತಾನವೇ ನಿರ್ವಹಿಸುತ್ತದೆ. ಇನ್ನು ಕರಾಚಿ ಒಪ್ಪಂದದ ಪ್ರಕಾರ ಗಿಲ್ಗಿಟ್‌-ಬಾಲ್ಟಿಸ್ತಾನದ ಆಡಳಿತ ನಡೆಯುತ್ತದೆ.