ಚಂಡೀಗಢ[ಜೂ.07]: ಲೋಕಸಭಾ ಚುನಾವಣೆ ವೇಳೆ ಪಂಜಾಬ್‌ ಸಿಎಂ ಅಮರೀಂದರ್‌ಸಿಂಗ್‌ ಮತ್ತು ಸಚಿವ ನವಜೋತ್‌ಸಿಂಗ್‌ ಸಿಧು ನಡುವೆ ಬಹಿರಂಗವಾಗಿಯೇ ನಡೆಸಿದ್ದ ವಾಕ್ಸಮರ ಇದೀಗ ಮತ್ತೊಂದು ಹಂತ ತಲುಪಿದೆ.

ಲೋಕಸಭಾ ಚುನಾವಣೆಯಲ್ಲಿ ಕೆಲ ಸ್ಥಾನಗಳಲ್ಲಿ ಕಾಂಗ್ರೆಸ್‌ ಸೋಲಿಗೆ ಸಚಿವ ಸಿಧು ಅವರು ಪೌರಾಡಳಿತ ಖಾತೆಯನ್ನು ಸೂಕ್ತವಾಗಿ ನಿರ್ವಹಿಸದೇ ಇದ್ದಿದ್ದೇ ಕಾರಣ ಎಂದು ಟೀಕಿಸಿರುವ ಸಿಎಂ ಅಮರೀಂದರ್‌, ಸಿಧುಗೆ ನೀಡಿದ್ದ ಪೌರಾಡಳಿತ ಖಾತೆಯನ್ನು ಹಿಂದಕ್ಕೆ ಪಡೆದು, ಅವರಿಗೆ ಇಂಧನ ಖಾತೆ ನೀಡಿದ್ದಾರೆ.

ಈ ನಡುವೆ ಸಿಎಂ ಕ್ರಮದ ವಿರುದ್ಧ ಸಿಡಿದೆದ್ದಿರುವ ಸಿಧು, ಗುರುವಾರ ನಡೆದ ಸಚಿವ ಸಂಪುಟ ಸಭೆಗೆ ಗೈರಾಗುವ ಮೂಲಕ ಅಮರೀಂದರ್‌ಗೆ ಸಡ್ಡು ಹೊಡೆದಿದ್ದಾರೆ. ಅಲ್ಲದೆ ಸಂಪುಟ ಸಭೆಯ ವೇಳೆಯೇ ಪತ್ರಿಕಾಗೋಷ್ಠಿ ನಡೆಸಿದ ಸಿಧು, ತಮ್ಮ ಸಾಧನೆಯ ಬಗ್ಗೆ ವಿವರಣೆ ನೀಡಿದ್ದಾರೆ.

‘ಚುನಾವಣೆಯ ವೇಳೆ ನಗರ ಪ್ರದೇಶಗಳಲ್ಲಿ ಕಾಂಗ್ರೆಸ್‌ ಸಾಧನೆ ನನ್ನ ಪ್ರದರ್ಶನಕ್ಕೆ ಸಾಕ್ಷಿ. ನನಗೆ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಎರಡು ಜಿಲ್ಲೆಗಳ ಉಸ್ತುವಾರಿಯನ್ನು ವಹಿಸಿದ್ದರು. ನಾವು ಎರಡೂ ಜಿಲ್ಲೆಗಳಲ್ಲಿ ಭಾರೀ ದೊಡ್ಡ ಅಂತರದಿಂದ ಗೆಲುವು ಸಾಧಿಸಿದ್ದೇವೆ. ಕ್ರಿಕೆಟ್‌ ಹಾಗೂ ರಾಜಕೀಯ ಎರಡರಲ್ಲೂ ನಾನು ಉತ್ತಮ ಪ್ರದರ್ಶನ ನೀಡಿದ್ದೇನೆ. ನನ್ನನ್ನು ಲಘುವಾಗಿ ಪರಿಗಣಿಸಬಾರದು’ ಎಂದು ಕಿಡಿಕಾರಿದ್ದಾರೆ.