ಸಚಿವ ಸಮಿತಿ ಪುನರ್ ರಚನೆ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಡೆಗಣನೆ| ಸಂಪುಟದಿಂದ ಹೊರ ನಡೆಯಲು ನಿರ್ಧರಿಸಿದರಾ ಅಸಮಾಧಾನಿತ ರಾಜನಾಥ್?| ಕೇವಲ 2 ಸಮಿತಿಗಳಲ್ಲಿ ರಾಜನಾಥ್ ಸಿಂಗ್‌ಗೆ ಸ್ಥಾನ| ಪರಿಷ್ಕೃತ ಪಟ್ಟಿಯಲ್ಲಿ 6 ಸಮಿತಿಗಳಲ್ಲಿ ರಕ್ಷಣಾ ಸಚಿವರಿಗೆ ಸ್ಥಾನ| ರಾಜನಾಥ್ ಮುನಿಸು ಬಗೆಹರಿಸಿದ ಪ್ರಧಾನಿ ಮೋದಿ| ರಾಜನಾಥ್ ರಾಜೀನಾಮೆ ಕೇವಲ ವದಂತಿ ಎಂದ ರಕ್ಷಣಾ ಸಚಿವಾಲಯ|
ನವದೆಹಲಿ(ಜೂ.07): ಸಚಿವ ಸಮಿತಿ ಪುನರ್ ರಚನೆ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಕಡೆಗಣಿಸಿದ ವಿವಾದ ಇದೀಗ ಸುಖಾಂತ್ಯ ಕಂಡಿದೆ. ರಾಜನಾಥ್ ಅವರಿಗೆ ಪ್ರಮುಖ ಸಮಿತಿಗಳಲ್ಲಿ ಸ್ಥಾನ ನೀಡಿ ವಿವಾದಕ್ಕೆ ಇತ್ರಿಶ್ರೀ ಹಾಡಲಾಗಿದೆ.
ಸಚಿವ ಸಮಿತಿ ಪುನರ್ ರಚನೆ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಕಡೆಗಣಿಸಿದ ನಡೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. 8 ಸಚಿವ ಸಂಪುಟ ಸಮಿತಿ ಪೈಕಿ ಕೇವಲ 2 ಸಮಿತಿಗಳಲ್ಲಿ ರಾಜನಾಥ್ ಸಿಂಗ್ ಅವರಿಗೆ ಸ್ಥಾನ ನೀಡಲಾಗಿತ್ತು.
ಇದೀಗ 6 ಸಂಪುಟ ಸಮಿತಿಗಳಲ್ಲಿ ರಾಜನಾಥ್ ಅವರಿಗೆ ಸ್ಥಾನ ನೀಡಲಾಗಿದ್ದು, ಪ್ರಧಾನಿ ಮೋದಿ ಅವರ ತುರ್ತು ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಕೇವಲ 2 ಸಂಪುಟ ಸಮಿತಿಗಳಲ್ಲಿ ಸ್ಥಾನ ನೀಡಿದ್ದಕ್ಕೆ ರಾಜನಾಥ್ ಕೋಪಗೊಂಡಿದ್ದು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಕೇಂದ್ರ ಸರ್ಕಾರ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿದ ಬಳಿಕ ವಿವಾದ ತಣ್ಣಗಾಗಿದೆ.
ಸಾರ್ವಜನಿಕ ಮಾಹಿತಿ ವಿಭಾಗ(ಪಿಐಬಿ) ಮೊದಲ ಪಟ್ಟಿ ಬಿಡುಗಡೆ ಮಾಡಿದಾಗ ಭದ್ರತೆ ಮತ್ತು ಆರ್ಥಿಕ ವ್ಯವಹಾರಗಳ ಸಮಿತಿಯಲ್ಲಿ ಮಾತ್ರ ರಾಜನಾಥ್ ಹೆಸರು ಇತ್ತು. ಇದೀಗ ಪರಿಷ್ಕೃತ ಪಟ್ಟಿಯಲ್ಲಿ ಸಂಸದೀಯ ವ್ಯವಹಾರ, ರಾಜಕೀಯ ವ್ಯವಹಾರ, ಹೂಡಿಕೆ ಮತ್ತು ಬೆಳವಣಿಗೆ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಸಮಿತಿಗಳಲ್ಲೂ ರಾಜನಾಥ್ ಅವರಿಗೆ ಸ್ಥಾನ ನೀಡಲಾಗಿದೆ.
ಇನ್ನು ಎಲ್ಲಾ ಎಂಟು ಸಮಿತಿಗಳಲ್ಲಿ ಗೃಹ ಸಚಿವ ಅಮಿತ್ ಶಾ ಮಾತ್ರ ಸ್ಥಾನ ಪಡೆದಿರುವುದು ವಿಶೇಷ.
