ಬೆಂಗಳೂರು[ಆ.11]: ಒಂದು ಕಡೆ ರಾಜ್ಯಾದ್ಯಂತ ಮಳೆ, ಪ್ರವಾಹದ ಅಬ್ಬರ ಮುಂದುವರಿದಿದ್ದರೆ ಇನ್ನೊಂದು ಕಡೆ ಮಧ್ಯಕರ್ನಾಟಕ ಹಾಗೂ ಉತ್ತರ ಕರ್ನಾಟಕದ 11 ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದೆ. ಈ ಜಿಲ್ಲೆಗಳಲ್ಲಿ ಕೃಷಿಗೆ ಬಿಡಿ ಕೆಲವೆಡೆ ಕುಡಿಯುವ ನೀರಿಗೂ ಪರದಾಡಬೇಕಾದ ಸ್ಥಿತಿ ಇದೆ.

ಚಿತ್ರದುರ್ಗ ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ ಸರಾಸರಿ 535 ಮಿ.ಮೀ ನಷ್ಟಿದ್ದು ಆ.8 ಕ್ಕೆ 223 ಮಿ.ಮೀ ಬೀಳಬೇಕಾಗಿತ್ತು. ಆಗಸ್ಟ್‌ 10ಕ್ಕೆ 250 ಮಿಮೀ ನಷ್ಟುಬಿದ್ದಿದೆಯಾದರೂ ಮೂರು ತಾಲೂಕುಗಳಲ್ಲಿ ಈ ಪ್ರಮಾಣ ಕಡಿಮೆ ಇದೆ. ಇನ್ನು ತುಮ​ಕೂರು ಜಿಲ್ಲೆಯಲ್ಲಿ 13 ಮಿ.ಮೀ, ರಾಮನಗರದಲ್ಲೂ ಶೇ.21ರಷ್ಟುಮಳೆ ಕೊರತೆಯಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಬರದ ಛಾಯೆ ಆವರಿಸಿದೆ. ಪ್ರಸಕ್ತ ಮುಂಗಾರು ಹಂಗಾಮಿಗೆ ಈವರೆಗೆ ಶೇ.17ರಷ್ಟುಮಳೆ ಕೊರತೆಯಾಗಿದೆ. ಸುರಿದ ಮಳೆಯೂ ಸಕಾಲಕ್ಕೆ ಬರದ ಕಾರಣ ತೇವಾಂಶ ಕೊರತೆಯಿಂದ ಈಗ ಬಿತ್ತನೆ ಮಾಡಿರುವ ಪ್ರದೇಶದಲ್ಲೂ ಬೆಳೆ ಒಣಗಲು ಆರಂಭವಾಗಿದೆ. ಬಳ್ಳಾರಿಯ ಪರಿಸ್ಥಿತಿಯೂ ಕೊಪ್ಪಳಕ್ಕಿಂತ ಭಿನ್ನವಾಗಿಲ್ಲ. ಒಂದು ರೀತಿಯಲ್ಲಿ ಈ ಜಿಲ್ಲೆಯ ಸ್ಥಿತಿ ತುಸು ಗಂಭೀರವೇ ಇದೆ. ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ರೈತರು ದೇವರಿಗೆ ಮೊರೆ ಇಡುವ ಸ್ಥಿತಿ ಇದೆ.

ಹೈದರಾಬಾದ್‌ ಕರ್ನಾಟಕದ ಜಿಲ್ಲೆಗಳಾದ ಕಲಬುರಗಿ, ಬೀದರ್‌, ರಾಯಚೂರು, ಯಾದಗಿರಿಯಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ರಾಯಚೂರಲ್ಲಿ ಶೇ.27ರಷ್ಟುಮಳೆ ಕೊರತೆಯಾಗಿದೆ. ಯಾದಗಿರಿಯಲ್ಲಿ ಶೇ.22ರಷ್ಟುಮಳೆ ಕಡಿಮೆ ಸುರಿದಿದೆ. ಒಟ್ಟಾರೆ ಈ ಜಿಲ್ಲೆಗಳಲ್ಲಿ ಸರಾಸರಿ ಶೇ.20ಕ್ಕೂ ಹೆಚ್ಚು ಮಳೆ ಕೊರತೆ ಇದೆ. ಮಹಾರಾಷ್ಟ್ರದಲ್ಲಿ ಮಳೆಯಾಗಿ ಭೀಮಾ, ಕೃಷ್ಣಾ ನದಿಯಲ್ಲಿ ಪ್ರವಾಹ ಬಂದಿರುವುದೇ ಸದ್ಯಕ್ಕೆ ಈ ಭಾಗದ ರೈತರ ಪಾಲಿಗೆ ನೆಮ್ಮದಿಯ ವಿಚಾರ.