ಬೆಂಗಳೂರು[ಆ.08]: ರಾಜ್ಯದಲ್ಲಿ 2018-19ನೇ ಸಾಲಿನಲ್ಲಿ ರಾಜ್ಯಾದ್ಯಂತ ಮಳೆ ಅಭಾವದಿಂದ ಮುಂಗಾರು ಹಾಗೂ ಹಿಂಗಾರಿನಲ್ಲಿ ಬರಪೀಡಿತ ತಾಲೂಕುಗಳಾಗಿ ಘೋಷಿಸಲಾಗಿದ್ದ 162 ತಾಲೂಕುಗಳಲ್ಲಿ ಸುಮಾರು 30 ತಾಲೂಕುಗಳಲ್ಲಿ ಪ್ರಸ್ತುತ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹೀಗಿದ್ದರೂ, ಸುಮಾರು 125 ತಾಲೂಕುಗಳಲ್ಲಿ ಈಗಲೂ ಮಳೆ ಅಭಾವ ಮುಂದುವರೆದಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 100 ತಾಲೂಕು ಹಾಗೂ ಹಿಂಗಾರು ಹಂಗಾಮಿನಲ್ಲಿ 156 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಹಿಂಗಾರು ಹಾಗೂ ಮುಂಗಾರು ಸೇರಿದಂತೆ ಒಟ್ಟು 162 ತಾಲೂಕುಗಳು ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ತೀವ್ರ ಬರ ಪರಿಸ್ಥಿತಿ ಎದುರಿಸಿದ್ದವು.

ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಬರಪೀಡಿತ ಎಂದು ಘೋಷಿಸಲ್ಪಟ್ಟ156 ತಾಲೂಕುಗಳ ಪೈಕಿ ಪ್ರಸ್ತುತ ಪ್ರವಾಹಕ್ಕೆ ತುತ್ತಾಗಿರುವ ಜಿಲ್ಲೆಗಳಾದ ಬೆಳಗಾವಿಯಲ್ಲಿ 14 ತಾಲೂಕು, ಬಾಗಲಕೋಟೆ 6, ವಿಜಯಪುರ 5, ರಾಯಚೂರು 5, ಉತ್ತರ ಕನ್ನಡ 5, ಶಿವಮೊಗ್ಗ 4, ಕೊಡಗು 3, ಚಿಕ್ಕಮಗಳೂರು 7 ತಾಲೂಕು, ಹಾಸನ 8 ತಾಲೂಕುಗಳೂ ಇದ್ದವು.

ಪ್ರಸ್ತುತ ಈ ಜಿಲ್ಲೆಗಳ ಪ್ರವಾಹ ಪೀಡಿತ ತಾಲೂಕುಗಳ ಪೈಕಿ ಬೆಳಗಾವಿ 9, ಬಾಗಲಕೋಟೆ 4, ವಿಜಯಪುರ 2, ರಾಯಚೂರು 3, ಉತ್ತರ ಕನ್ನಡ 5, ಶಿವಮೊಗ್ಗ 1, ಕೊಡಗು 1, ಚಿಕ್ಕಮಗಳೂರು 4, ಹಾಸನ 3 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಉಳಿದಂತೆ ಬರಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದ್ದ ದಕ್ಷಿಣ ಕನ್ನಡ 5 ತಾಲೂಕು, ಉಡುಪಿ 3 ತಾಲೂಕುಗಳಲ್ಲೂ ಉತ್ತಮ ಮಳೆ ದಾಖಲಾಗಿದ್ದರೂ, ಪ್ರವಾಹ ಸ್ಥಿತಿ ಉಂಟಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಒಟ್ಟು 31 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದರೂ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಏಕಾಏಕಿ ತೆಗೆದು ಹಾಕಲು ಸಾಧ್ಯವಿಲ್ಲ. ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆಯೇ ಅಥವಾ ಮಹಾರಾಷ್ಟ್ರದ ಮಳೆ, ಜಲಾಶಯಗಳಿಂದ ಬಿಡುಗಡೆಯಾದ ನೀರಿನ ಪ್ರವಾಹ, ತುಂಬಿ ಹರಿಯುತ್ತಿರುವ ನದಿಯಿಂದ ಉಂಟಾಗಿರುವ ಪ್ರವಾಹ ಉಂಟಾಗಿದೆಯೇ ಎಂಬುದನ್ನು ಅಧ್ಯಯನ ಮಾಡಲಾಗುವುದು. ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದರೆ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿರುತ್ತದೆ. ಆದರೂ ಯಾವ ಹಂತದಲ್ಲಿ ಮಳೆಯಾಗಿದೆ? ವಾಡಿಕೆಯ ಮಳೆ ದಿನಗಳು ಹಾಗೂ ಮಳೆಯಾದ ದಿನಗಳನ್ನೂ ಅಧ್ಯಯನ ಮಾಡಲಾಗುವುದು. ಒಂದೇ ವರ್ಷದಲ್ಲಿ ಅತಿವೃಷ್ಟಿಹಾಗೂ ಅನಾವೃಷ್ಟಿಎರಡೂ ವಿಭಾಗದಲ್ಲೂ ಸಮಸ್ಯೆ ಎದುರಿಸಿರುವವರಿಗೆ ಪರಿಹಾರ ಕಲ್ಪಿಸಲು ನಿಯಮಗಳಲ್ಲಿ ಅವಕಾಶವಿದೆ ಎಂದು ಹೇಳಿದರು.