ಗುವಾಹಟಿ: ಅಕ್ರಮ ಬಾಂಗ್ಲಾದೇಶೀಯರ ವಲಸೆಯಿಂದ ತತ್ತರಿಸಿರುವ ಅಸ್ಸಾಂನಲ್ಲಿ ಇರುವವರು ನಿಜವಾದ ಅಸ್ಸಾಮಿಗಳು ಹೌದೋ ಅಲ್ಲವೋ ಎಂಬುದನ್ನು ನಿರ್ಧರಿಸುವ ಅಸ್ಸಾಂನ ‘ರಾಷ್ಟ್ರೀಯ ನಾಗರಿಕ ರಿಜಿಸ್ಟ್ರಾರ್’ನ ಅಂತಿಮ ಕರಡು ಸೋಮವಾರ ಬಿಡುಗಡೆಯಾಗಲಿದೆ. ಇದು ಅಸ್ಸಾಂನಲ್ಲಿರುವ ಜನರಲ್ಲಿ ಸಹಜವಾಗೇ ಆತಂಕ-ತಳಮಳ ಮೂಡಿಸಿದೆ.

ಸೋಮವಾರ ಮಧ್ಯಾಹ್ನ ಎಲ್ಲ ಎನ್‌ಆರ್‌ಸಿ ಕೇಂದ್ರಗಳಲ್ಲಿ ಪಟ್ಟಿ ಬಹಿರಂಗವಾಗಲಿದ್ದು, ಅರ್ಜಿ ಸಲ್ಲಿಸಿರುವವರು ತಮ್ಮ ಹೆಸರು ಅದರಲ್ಲಿ ಇದೆಯೋ ಇಲ್ಲವೋ ಎಂದು ತಪಾಸಿಸಿಕೊಳ್ಳಬಹುದಾಗಿದೆ. ಪಟ್ಟಿಯಲ್ಲಿ ಅರ್ಜಿದಾರನ ಹೆಸರು, ವಿಳಾಸ ಹಾಗೂ ಛಾಯಾಚಿತ್ರ ಇರಲಿದೆ. ಸೆ.28 ರವರೆಗೆ ಹೆಸರು ಪರಿಶೀಲಿಸಲು ಅವಕಾಶವಿದೆ. 

1971 ರ ಮಾರ್ಚ್ 25ಕ್ಕಿಂತ ಮೊದಲು ಅಸ್ಸಾಂನಲ್ಲಿ ತಂಗಿರುವ ಎಲ್ಲರನ್ನು ನಾಗರಿಕ ರಿಜಿಸ್ಟ್ರಾರ್‌ನಲ್ಲಿ (ಎನ್‌ಆರ್‌ಸಿ) ಉಲ್ಲೇಖಿಸಲಾಗುತ್ತದೆ ಎಂದು ಸರ್ಕಾರ ಈಗಾಗಲೇ ಸ್ಪಷ್ಟೀಕರಣ ನೀಡಿದೆ ಹಾಗೂ ‘ನೈಜ ನಾಗರಿಕರು ಭಯ ಪಡಬೇಕಿಲ್ಲ’ ಎಂದು ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಸ್ಪಷ್ಟಪಡಿಸಿದ್ದಾರೆ. 

ಈ ನಡುವೆ, ಪಟ್ಟಿಯಲ್ಲಿ ಹೆಸರು ಕಾಣಿಸದವರು ಗಲಾಟೆ ಮಾಡಬಹುದು ಎಂಬ ಆತಂಕ ಇದ್ದು, ರಾಜ್ಯಾದ್ಯಂತ ಬಿಗಿ ಪೊಲೀಸ್ ಪಹರೆ ಏರ್ಪಡಿಸಲಾಗಿದೆ. ಕೇಂದ್ರ ಸರ್ಕಾರ ಕೂಡ 220  ಕೇಂದ್ರೀಯ ಸಶಸ್ತ್ರ ಪಡೆ ತುಕಡಿಗಳನ್ನು ಕಳಿಸಿಕೊಟ್ಟಿದೆ. ಮೊದಲ ಕರಡು ಜ.1ರಂದು ಬಿಡುಗಡೆಯಾಗಿತ್ತು. ಆಗ 3 . 29 ಕೋಟಿ ಅರ್ಜಿದಾರರಲ್ಲಿ  1.9  ಕೋಟಿ ಜನರ ಹೆಸರನ್ನು ಸೇರಿಸಲಾಗಿತ್ತು.

ಉಳಿದ 2 ಕೋಟಿ ಜನರ ಹಣೆಬರಹ ಈಗ ತೀರ್ಮಾನವಾಗಲಿದೆ. ಹೀಗಾಗಿ ಅಕ್ರಮ ಬಾಂಗ್ಲಾದೇಶೀ ವಲಸಿಗರಿಗೆ ಇದು ಬಿಸಿ ಮುಟ್ಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸುಪ್ರೀಂ ಕೋರ್ಟ್ ನಿಗಾದಲ್ಲಿ ಅಸ್ಸಾಂನಲ್ಲಿ ನಾಗರಿಕ ನೋಂದಣಿ ನಡೆಯುತ್ತಿದೆ. ಅಸ್ಸಾಂನಲ್ಲಷ್ಟೇ ಏಕೆ ಪ್ರತ್ಯೇಕ 

ನಾಗರಿಕತ್ವ ನೋಂದಣಿ?:  ‘ರಾಷ್ಟ್ರೀಯ ನಾಗರಿಕ ನೋಂದಣಿ’ಯು ಇಡೀ ದೇಶಕ್ಕೆ ಸಂಬಂಧಿಸಿದ್ದು. ಇಡೀ ದೇಶದ ನಾಗರಿಕರ ಹೆಸರು ಇದರಲ್ಲಿ ಇರುತ್ತದೆ. ಆದರೆ ಅಸ್ಸಾಂನಲ್ಲಿ ಅಕ್ರಮ ಬಾಂಗ್ಲಾದೇಶೀಯರ ಹಾವಳಿ ಅಧಿಕವಾಗಿರುವ ಕಾರಣ ಹಾಗೂ ಈ ವಿಷಯಕ್ಕೆ ಸಂಬಂಧಿಸಿದಂತೆ ಪದೇ ಪದೇ ಹಿಂಸಾಚಾರ ನಡೆಯುತ್ತಿರುವ ಕಾರಣ ಸುಪ್ರೀಂ ಕೋರ್ಟ್ ನಿಗಾದಲ್ಲಿ ಅಸ್ಸಾಂ ಸರ್ಕಾರ ರಾಜ್ಯದ ನಾಗರಿಕರ ಪ್ರತ್ಯೇಕ ನೋಂದಣಿ ಕೈಗೊಳ್ಳುತ್ತಿದೆ. 

ಪಟ್ಟಿಯಲ್ಲಿ ಹೆಸರಿಲ್ಲದಿದ್ರೆ ಅವಕಾಶ ಇದೆ: ಅಂತಿಮ ಕರಡು ಪಟ್ಟಿಯಲ್ಲಿ ಹೆಸರು ಇಲ್ಲದೇ ಇರುವವರು ಆತಂಕಕ್ಕೊಳಗಾಗಬೇಕಿಲ್ಲ. ಆಗಸ್ಟ್ 7 ರಿಂದ ಸೆಪ್ಟೆಂಬರ್ 28 ರವರೆಗೆ ಇವರು ಒಂದು ನಿಗದಿತ ಅರ್ಜಿ ನಮೂನೆಯಲ್ಲಿ ವಿವರ ಭರ್ತಿ ಮಾಡಿ ನೋಂದಣಿ ಕೇಂದ್ರಗಳಿಗೆ ಸಲ್ಲಿಸಬೇಕು. ಹೆಸರು ಏಕೆ ಬಿಟ್ಟು ಹೋಗಿದೆ ಎಂಬ ಕಾರಣ ನೀಡುವ ಉತ್ತರವನ್ನು ನೋಂದಣಾಧಿಕಾರಿಗಳು ಒದಗಿಸುತ್ತಾರೆ. ಇವರು ಒದಗಿಸಿದ ಉತ್ತರ ಆಧರಿಸಿ ಆಗಸ್ಟ್ 30 ರಿಂದ  ಸೆ. 28 ರವರೆಗೆ ಬೇರೊಂದು ಅರ್ಜಿ ನಮೂನೆಯಲ್ಲಿ ಹೊಸ ಅರ್ಜಿ ಭರ್ತಿ ಮಾಡಿ ನಾಗರಿಕತ್ವ ನೋಂದಣಿಗೆ ಕೊನೆಯದಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.