ಅಕ್ರಮ ವಲಸೆ ತಡೆಗಾಗಿ ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಾಣವಾಗಬೇಕೆಂಬ ಅಧ್ಯಕ್ಷ ಡೊನಾಲ್ಡ… ಟ್ರಂಪ್‌ ಅವರ ಬಿಗಿಪಟ್ಟು ಮತ್ತು ಅದನ್ನು ಒಪ್ಪಲು ಪ್ರತಿಪಕ್ಷ ಡೆಮಾಕ್ರೆಟಿಕ್‌ ಪಾರ್ಟಿ ನಿರಾಕರಿಸಿರುವುದರ ಪರಿಣಾಮ ಸರ್ಕಾರಿ ಆಡಳಿತ ಯಂತ್ರ ಡಿಸೆಂಬರ್‌ 22ರಿಂದ ಸ್ಥಗಿತಗೊಂಡಿದೆ. 

ಮೆಕ್ಸಿಕೋ (ಜ. 16): ಅಧ್ಯಕ್ಷೀಯ ಚುನಾವಣೆ ವೇಳೆ ತಾನು ಗೆದ್ದರೆ ಮೆಕ್ಸಿಕೋದ ಗಡಿಯುದ್ದಕ್ಕೂ ಅಭೇದ್ಯ ಗೋಡೆ ಕಟ್ಟುವುದಾಗಿ ಘೋಷಿಸಿ ಡೊನಾಲ್ಡ್‌ ಟ್ರಂಪ್‌ ಜಗತ್ತೇ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದರು.

ಆದರೆ, ಅಧ್ಯಕ್ಷರಾಗಿ 2 ವರ್ಷ ಕಳೆದರೂ ಗೋಡೆಗೆ ಬೇಕಾದ ಹಣ ಹೊಂದಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಏಕೆಂದರೆ, ಅಮೆರಿಕದ ಬೊಕ್ಕಸದಲ್ಲಿ ಸಾಕಷ್ಟುದುಡ್ಡಿದ್ದರೂ ಅದನ್ನು ಖರ್ಚು ಮಾಡಲು ಸರ್ಕಾರದ ಒಂದು ಭಾಗವಾಗಿರುವ ಡೆಮಾಕ್ರೆಟಿಕ್‌ ಪಕ್ಷ ಒಪ್ಪುತ್ತಿಲ್ಲ. ಆದರೆ ಟ್ರಂಪ್‌ ಹಟಕ್ಕೆ ಬಿದ್ದಿದ್ದಾರೆ. ಹೀಗಾಗಿ ಬಿಕ್ಕಟ್ಟು ಉಂಟಾಗಿ 25 ದಿನಗಳಿಂದ ಸರ್ಕಾರ ಬಂದ್‌ ಆಗಿದೆ.

ಪರಿಣಾಮ ಅಲ್ಲೀಗ ಕೇಂದ್ರ ಸರ್ಕಾರಿ ನೌಕರರಿಗೆ ಸಂಬಳ ನೀಡಲೂ ದುಡ್ಡಿಲ್ಲದಂತಾಗಿದೆ. ಟ್ರಂಪ್‌ ಅವರ ಕಚೇರಿಯಾದ ಶ್ವೇತಭವನದ ನೀರಿನ ಬಿಲ್‌ ಕೂಡ ಪಾವತಿಸಿಲ್ಲ. ಈ ಕುರಿತ ಕುತೂಹಲಕರ ಸಮಗ್ರ ಮಾಹಿತಿ ಇಲ್ಲಿದೆ.

ವೈಟ್‌ ಹೌಸ್‌ ಬಂದ್‌ ಆಗಲು ಕಾರಣ ಏನು?

ಅಕ್ರಮ ವಲಸೆ ತಡೆಗಾಗಿ ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಾಣವಾಗಬೇಕೆಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಬಿಗಿಪಟ್ಟು ಮತ್ತು ಅದನ್ನು ಒಪ್ಪಲು ಪ್ರತಿಪಕ್ಷ ಡೆಮಾಕ್ರೆಟಿಕ್‌ ಪಾರ್ಟಿ ನಿರಾಕರಿಸಿರುವುದರ ಪರಿಣಾಮ ಸರ್ಕಾರಿ ಆಡಳಿತ ಯಂತ್ರ ಡಿಸೆಂಬರ್‌ 22ರಿಂದ ಸ್ಥಗಿತಗೊಂಡಿದೆ. ಮೆಕ್ಸಿಕೋ ಗೋಡೆ ನಿರ್ಮಾಣಕ್ಕೆ ಸುಮಾರು 40 ಸಾವಿರ ಕೋಟಿ ರು. ಬೇಕು. ಅದನ್ನು ಅಧ್ಯಕ್ಷರೊಬ್ಬರೇ ಮಂಜೂರು ಮಾಡಲು ಸಾಧ್ಯವಿಲ್ಲ.

ಅಮೆರಿಕದ ಉಭಯ ಸದನಗಳು (ಹೌಸ್‌ ಆಫ್‌ ರೆಪ್ರಸೆಂಟೇಟಿವ್ಸ್ ಮತ್ತು ಸೆನೆಟ್‌) ಇದಕ್ಕೆ ಒಪ್ಪಿಗೆ ನೀಡಬೇಕು. ಹೌಸ್‌ ಆಫ್‌ ರೆಪ್ರಸೆಂಟೇಟಿವ್‌್ಸನಲ್ಲಿ ಟ್ರಂಪ್‌ ಅವರ ರಿಪಬ್ಲಿಕನ್‌ ಪಕ್ಷ ಬಹುಮತ ಹೊಂದಿದೆ. ಅಲ್ಲಿ ಗೋಡೆ ನಿರ್ಮಾಣಕ್ಕೆ ಒಪ್ಪಿಗೆ ದೊರೆತಿದೆ. ಆದರೆ, ಸೆನೆಟ್‌ನಲ್ಲಿ ಟ್ರಂಪ್‌ ಅವರ ವಿರೋಧ ಪಕ್ಷ ಅಂದರೆ ಡೆಮಾಕ್ರೆಟಿಕ್‌ ಪಕ್ಷ ಬಹುಮತ ಹೊಂದಿದೆ. ಅಲ್ಲಿ ಗೋಡೆ ನಿರ್ಮಾಣಕ್ಕೆ ಹಣ ನೀಡಲು ಒಪ್ಪಿಗೆ ದೊರೆತಿಲ್ಲ.

ಈ ಮಧ್ಯೆ, ಅಮೆರಿಕದ ಸರ್ಕಾರವನ್ನು ನಡೆಸಲು ಪ್ರತಿ ವರ್ಷ 12 ಹಣಕಾಸು ಮಸೂದೆಗಳನ್ನು ಕಾಲಕಾಲಕ್ಕೆ ಉಭಯ ಸದನಗಳಲ್ಲಿ ಪಾಸು ಮಾಡಿಕೊಳ್ಳಬೇಕಾಗುತ್ತದೆ. ಈ ವರ್ಷ ಇಲ್ಲಿಯವರೆಗೆ 5 ಮಾತ್ರ ಪಾಸಾಗಿವೆ. ಇನ್ನೂ 7 ಬಾಕಿಯಿವೆ. ಅವುಗಳಲ್ಲಿ ಶ್ವೇತಭವನದ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವ, ಆಹಾರ ಸುರಕ್ಷತೆಯ ವೆಚ್ಚ, ಕೆಲ ಇಲಾಖೆಗಳ ನೌಕರರ ಸಂಬಳ ಮುಂತಾದ ವೆಚ್ಚಗಳಿಗೆ ಬೇಕಾದ ಮಸೂದೆಗಳಿವೆ. ಡೆಮಾಕ್ರೆಟಿಕ್‌ ಮತ್ತು ರಿಪಬ್ಲಿಕನ್‌ ಪಕ್ಷದ ತಿಕ್ಕಾಟದಿಂದ ಆ ಮಸೂದೆಗಳಿಗೆ ತಡೆ ಬಿದ್ದಿದೆ. ಹೀಗಾಗಿ ಅಮೆರಿಕದ ಕೇಂದ್ರ ಸರ್ಕಾರ ಬಹುತೇಕ ಬಂದ್‌ ಆಗಿದೆ.

ಗಡಿಯಲ್ಲಿ ಕಾಂಕ್ರೀಟ್‌ ಅಥವಾ ಸ್ಟೀಲ್‌ ಗೋಡೆ

ಅಮೆರಿಕ-ಮೆಕ್ಸಿಕೋ ಮಧ್ಯೆ 3300 ಕಿ.ಮೀ. ಉದ್ದದ ಗಡಿಯಿದೆ. ಇಲ್ಲಿಂದ ಪ್ರತಿ ವರ್ಷ ಸಾವಿರಾರು ಮೆಕ್ಸಿಕನ್ನರು ನುಸುಳಿ ಅಮೆರಿಕದ ಒಳಗೆ ಬಂದು ಅಕ್ರಮವಾಗಿ ನೆಲೆಸುತ್ತಾರೆ ಮತ್ತು ಕಾನೂನುಬಾಹಿರ ಚಟುವಟಿಕೆ ನಡೆಸುತ್ತಾರೆಂಬ ಆರೋಪವಿದೆ. ಇವರು ಅಮೆರಿಕನ್ನರ ಕೆಲಸವನ್ನೂ ಕಬಳಿಸುತ್ತಾರೆ.

ಇದು ಅಮೆರಿಕದಲ್ಲಿ ದಶಕಗಳಿಂದ ಇರುವ ಸಮಸ್ಯೆ. ಈ ಅಕ್ರಮ ವಲಸೆ ತಡೆಯುವುದಾಗಿ ಟ್ರಂಪ್‌ ಹೇಳಿದ್ದರಿಂದ ಜನರು ಖುಷಿಯಿಂದ ಅವರನ್ನು ಗೆಲ್ಲಿಸಿದ್ದರು. ಗಡಿಯ ಕೆಲ ಪ್ರದೇಶಗಳಲ್ಲಿ ಗೋಡೆ ಕಟ್ಟಲಾಗದ ದುರ್ಗಮ ಸ್ಥಳಗಳು ಇರುವುದರಿಂದ ಅಂತಿಮವಾಗಿ 1,600 ಕಿ.ಮೀ. ಕಾಂಕ್ರೀಟ್‌ ಅಥವಾ ಉಕ್ಕಿನ ಗೋಡೆ ಕಟ್ಟುವುದಾಗಿ ಟ್ರಂಪ್‌ ಘೋಷಿಸಿದ್ದರು. ಆದರೆ ಇದೊಂದು ದುಂದುವೆಚ್ಚ ಎಂದು ಡೆಮಾಕ್ರೆಟ್‌ ಪಕ್ಷದ ಸಂಸದರು ತಡೆಯೊಡ್ಡುತ್ತಿದ್ದಾರೆ.

25 ದಿನ ಶ್ವೇತ ಭವನ ಬಂದ್‌ ಮಾಡಿ ದಾಖಲೆ ಬರೆದ ಟ್ರಂಪ್‌!

ಗೋಡೆ ಕಟ್ಟಲು ಸರ್ಕಾರದ ಬೊಕ್ಕಸದಿಂದ ಹಣ ನೀಡುವುದಕ್ಕೆ ಸೆನೆಟ್‌ ಒಪ್ಪುತ್ತಿಲ್ಲ. ನೀವು ಒಪ್ಪಿಗೆ ನೀಡದಿದ್ದರೆ ನಾನು ಇತರ ಖರ್ಚುವೆಚ್ಚಗಳ ಮಸೂದೆಗಳಿಗೆ ಒಪ್ಪಿಗೆ ನೀಡುವುದಿಲ್ಲ ಎಂದು ಟ್ರಂಪ್‌ ಬಿಗಿಪಟ್ಟು ಹಿಡಿದಿದ್ದಾರೆ. ಹೀಗಾಗಿ ಅಗತ್ಯ ಖರ್ಚುವೆಚ್ಚಗಳಿಗೆ ಹಣವಿಲ್ಲದೆ ಬಹುತೇಕ ಕೇಂದ್ರ ಸರ್ಕಾರ 25 ದಿನಗಳಿಂದ ಬಂದ್‌ ಆಗಿದೆ.

ಶ್ವೇತಭವನ ಹಾಗೂ ಭಾಗಶಃ ಕೇಂದ್ರ ಸರ್ಕಾರ ಇಷ್ಟೊಂದು ದೀರ್ಘ ಅವಧಿಗೆ ಬಂದ್‌ ಆಗಿರುವುದು ಅಮೆರಿಕದ ಇತಿಹಾಸದಲ್ಲೇ ಮೊದಲು. ಒಟ್ಟಾರೆ ಇಲ್ಲಿಯವರೆಗೆ 13 ಬಾರಿ ಇಂತಹ ಪರಿಸ್ಥಿತಿ ಬಂದಿತ್ತು. ಬಿಲ್‌ ಕ್ಲಿಂಟನ್‌ ಅವಧಿಯಲ್ಲಿ 21 ದಿನ ಸರ್ಕಾರ ಬಂದ್‌ ಆಗಿದ್ದೇ ಸುದೀರ್ಘ ಅವಧಿಯಾಗಿತ್ತು. ಒಬಾಮ ಸರ್ಕಾರವಿದ್ದಾಗ ‘ಒಬಾಮ ಕೇರ್‌’ ವಿಷಯದಲ್ಲಿ 16 ದಿನ ಶ್ವೇತಭವನ ಬಂದ್‌ ಆಗಿತ್ತು.

ಸುದೀರ್ಘ ಬಂದ್‌ಗಳು

ಡೊನಾಲ್ಡ್‌ ಟ್ರಂಪ್‌- 25 ದಿನ +

ಬಿಲ್‌ ಕ್ಲಿಂಟನ್‌- 21 ದಿನ

ಜಿಮ್ಮಿ ಕಾರ್ಟರ್‌- 17 ದಿನ

ಬರಾಕ್‌ ಒಬಾಮ- 16 ದಿನ

ಟ್ರಂಪ್‌ ವಾದ ಏನು?

ಸಾವಿರಾರು ಮೆಕ್ಸಿಕನ್ನರು ಅಕ್ರಮವಾಗಿ ಅಮೆರಿಕ ಪ್ರವೇಶಿಸುತ್ತಿದ್ದಾರೆ. ಅವರು ಮಾದಕ ದ್ರವ್ಯಗಳನ್ನು ಎಗ್ಗಿಲ್ಲದೆ ಸಾಗಣೆ ಮಾಡುತ್ತಿದ್ದಾರೆ. ಅಕ್ರಮ ವಲಸೆಯಿಂದಾಗಿ ಅಮೆರಿಕಕ್ಕೆ ಪ್ರತಿವರ್ಷ 250 ಶತಕೊಟಿ ಡಾಲರ್‌ ನಷ್ಟವಾಗುತ್ತಿದೆ.

ಇದು ರಾಷ್ಟ್ರೀಯ ಭದ್ರತೆಗೂ ಅಪಾಯಕಾರಿ. ಇಂತಹ ಪರಿಸ್ಥಿತಿಯಲ್ಲಿ ಗೋಡೆ ನಿರ್ಮಾಣಕ್ಕೆ ಹಣ ಮಂಜೂರು ಮಾಡಲು ಟೆಮಾಕ್ರೆಟ್‌ಗಳು ಒಪ್ಪದಿದ್ದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಹೇರುತ್ತೇನೆ. ಆಗ ಮಿಲಿಟರಿಗೆ ತೆಗೆದಿರಿಸಿದ ಹಣದಲ್ಲಿ ಗೋಡೆ ನಿರ್ಮಿಸುತ್ತೇನೆ.

ಡೆಮಾಕ್ರೆಟ್‌ ವಾದ ಏನು?

ಮೆಕ್ಸಿಕೋ ಗೋಡೆ ನಿರ್ಮಾಣಕ್ಕೆ 5.7 ಬಿಲಿಯನ್‌ ಡಾಲರ್‌ನಷ್ಟುದೊಡ್ಡ ಮೊತ್ತ ಖರ್ಚು ಮಾಡುವುದು ಅನವಶ್ಯಕ. ಈ ಗೋಡೆಯಿಂದ ಯಾವುದೇ ಉಪಯೋಗ ಇಲ್ಲ. ಸಾರ್ವಜನಿಕರ ಅಭಿಪ್ರಾಯವೂ ಇದೇ ಆಗಿದೆ. ಶೇ.69ರಷ್ಟುಅಮೆರಿಕನ್ನರು ಗೋಡೆ ನಿರ್ಮಾಣ ಬೇಡ ಎನ್ನುತ್ತಿದ್ದಾರೆ. ಸರ್ಕಾರವನ್ನು ಬಂದ್‌ ಮಾಡುವುದು ನಮಗೆ ಬೇಕಿಲ್ಲ. ಟ್ರಂಪ್‌ ಹಟ ಬಿಡದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಅವರ ನಡೆ ಸಂವಿಧಾನಕ್ಕೆ ವಿರುದ್ಧವಾಗಿದೆ.

ಒಂದು ವಾರದಲ್ಲಿ 100 ಕೋಟಿ ಡಾಲರ್‌ ನಷ್ಟ!

ಆರ್ಥಿಕ ತಜ್ಞರ ಪ್ರಕಾರ ಅಮೆರಿಕ ಸರ್ಕಾರ ಬಾಗಶಃ ಕೆಲಸ ನಿಲ್ಲಿಸಿದ್ದರಿಂದಾಗಿ ದೇಶದ ಆರ್ಥಿಕತೆ ಮೇಲೆ ಭಾರಿ ಹೊಡೆತ ಬಿದ್ದಿದೆ. ಪ್ರತಿ ವಾರಕ್ಕೆ ಅಂದಾಜು 100 ಕೋಟಿ ಡಾಲರ್‌ನಷ್ಟುನಷ್ಟವಾಗುತ್ತಿದೆ. ಅಂದರೆ ಇಲ್ಲಿಯವರೆಗೆ 300 ಕೋಟಿ ಡಾಲರ್‌ಗೂ ಹೆಚ್ಚು ನಷ್ಟವಾಗಿದೆ.

ಯಾರ್ಯಾರಿಗೆ ಸಂಬಳವಿಲ್ಲ? ಯಾವ್ಯಾವ ಸೇವೆ ಸ್ಥಗಿತ?

- 8,00,000 ಕೇಂದ್ರ ಸರ್ಕಾರಿ ನೌಕರರು ಕಳೆದ ತಿಂಗಳ ಸಂಬಳ ಪಡೆದಿಲ್ಲ.

- 4,20,000 ಅತ್ಯವಶ್ಯಕ ನೌಕರರ ಪಟ್ಟಿಯಲ್ಲಿನ ನೌಕರರು ಸಂಬಳ ಇಲ್ಲದೆ ಕೆಲಸ ಮಾಡುತ್ತಿದ್ದಾರೆ.

- ಎಫ್‌ಬಿಐ ಪೊಲೀಸರು, ನಾಸಾ ಎಂಜಿನಿಯರ್‌ಗಳು, ಸರ್ಕಾರಿ ವಕೀಲರು, ಹವಾಮಾನ ತಜ್ಞರಿಗೆ ಸಂಬಳ ಸಿಕ್ಕಿಲ್ಲ.

- ಒಳನಾಡು ಭದ್ರತೆ, ನ್ಯಾಯಾಂಗ, ಕೃಷಿ, ಖಜಾನೆ, ಆಂತರಿಕ ಸಾರಿಗೆ, ವಾಣಿಜ್ಯ ವ್ಯವಹಾರಗಳು ಬಂದ್‌ ಆಗಿವೆ.

- ಆಹಾರ ತಪಾಸಣಾ ಕಾರ್ಯವನ್ನು ನಿಲ್ಲಿಸಲಾಗಿದೆ.

- ನೂತನ ಉದ್ಯಮಗಳ ಪಟ್ಟಿಗೆ ತಾತ್ಕಾಲಿಕ ತಡೆ ನೀಡಲಾಗಿದೆ.

- ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸ್ವಚ್ಛತಾ ಕಾರ್ಯಗಳು ಬಂದ್‌ ಆಗಿವೆ.

- ಸಾವಿರಾರು ನೌಕರರು ಸಂಬಳವಿಲ್ಲದೆ ಸರ್ಕಾರಿ ಕೆಲಸ ತೊರೆದಿದ್ದಾರೆ.

ಟ್ರಂಪ್‌ ತುರ್ತು ಪರಿಸ್ಥಿತಿ ಘೋಷಿಸಿದರೆ ಏನಾಗುತ್ತೆ?

ಗೋಡೆಗೆ ತಡೆಯೊಡ್ಡುತ್ತಿರುವ ಹಾಗೂ ತಮ್ಮ ನಿಲುವಿಗೆ ಸೊಪ್ಪುಹಾಕದ ಡೆಮಾಕ್ರೆಟ್‌ಗಳ ಬಗ್ಗೆ ಟ್ರಂಪ್‌ ಕೆಂಡಾಮಂಡಲರಾಗಿದ್ದು, ತುರ್ತು ಪರಿಸ್ಥಿತಿ ಘೋಷಿಸುವ ಬೆದರಿಕೆಯನ್ನೂ ಹಾಕುತ್ತಿದ್ದಾರೆ. ತುರ್ತು ಪರಿಸ್ಥಿತಿ ಘೋಷಣೆಯಾದರೆ ಮೆಕ್ಸಿಕೋ-ಅಮೆರಿಕ ಗಡಿ ಭಾಗದಲ್ಲಿ ಕಾಂಕ್ರೀಟ್‌ ಅಥವಾ ಉಕ್ಕಿನ ಗೋಡೆ ನಿರ್ಮಾಣ ಮಾಡಲು ಟ್ರಂಪ್‌ಗೆ ಪರಮಾಧಿಕಾರ ಸಿಗುತ್ತದೆ.

ಅವರು ದೇಶದ ಮಿಲಿಟರಿಗೆ ಮೀಸಲಿಡುವ ಹಣವನ್ನು ಗೋಡೆ ನಿರ್ಮಾಣಕ್ಕೆ ಬಳಸಿಕೊಳ್ಳುತ್ತಾರೆ. ಆದರೆ, ಅಮೆರಿಕದಲ್ಲಿ ತುರ್ತುಸ್ಥಿತಿ ಘೋಷಿಸುವುದು ಸುಲಭವಿಲ್ಲ. ಅದಕ್ಕೆ ನೂರಾರು ಕಾನೂನಾತ್ಮಕ ಅಡ್ಡಿಗಳಿವೆ. ಹೀಗಾಗಿ ಇದು ಕೇವಲ ಟ್ರಂಪ್‌ ಒಡ್ಡುತ್ತಿರುವ ಬೆದರಿಕೆ ಎನ್ನಲಾಗುತ್ತಿದೆ.

ಗೋಡೆ ಕಟ್ಟದಿದ್ದರೆ ಟ್ರಂಪ್‌ ಮತ್ತೊಮ್ಮೆ ಅಧ್ಯಕ್ಷರಾಗಲ್ಲ

ಅಕ್ರಮ ವಲಸೆ ಅಮೆರಿಕಕ್ಕೆ ಅಂಟಿದ ದೊಡ್ಡ ಸಮಸ್ಯೆ ಎಂಬುದರಲ್ಲಿ ಸಂಶಯವಿಲ್ಲ. ಪುಟ್ಟಮಕ್ಕಳನ್ನೂ ತಮ್ಮ ಜೊತೆಗೆ ಕರೆತಂದು ವಲಸಿಗರು ಅಮೆರಿಕದಲ್ಲಿಯೇ ತಳವೂರಿಬಿಡುತ್ತಾರೆ. ಇದಕ್ಕಾಗಿ ಟ್ರಂಪ್‌ ಸರ್ಕಾರ ವೀಸಾ ಸಂಬಂಧಿ ಹಲವಾರು ನಿಯಮಗಳಿಗೆ ಬದಲಾವಣೆ ತಂದಿದೆ.

ಆದರೆ, ಮೆಕ್ಸಿಕೋ ಗಡಿಗೆ ಗೋಡೆ ಕಟ್ಟುವುದು ಟ್ರಂಪ್‌ ನೀಡಿದ್ದ ಭರವಸೆಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಒಂದು ವೇಳೆ ಅವರು ಗೋಡೆ ನಿರ್ಮಿಸದೆ ಇದ್ದಲ್ಲಿ 2020ರಲ್ಲಿ ಅವರು ಪುನರಾಯ್ಕೆಗೊಳ್ಳುವ ಅವಕಾಶ ತಪ್ಪಬಹುದು.

ದುಡ್ಡಿಲ್ಲದೆ ಫುಟ್ಬಾಲ್‌ ಟೀಮ್‌ಗೆ ಬರ್ಗರ್‌ ತಿನ್ನಿಸಿದ ಟ್ರಂಪ್‌!

ಅಮೆರಿಕದ ವಿಶ್ವವಿದ್ಯಾಲಯವೊಂದರ ಫುಟ್ಬಾಲ್‌ ಟೀಮ್‌ನ ಸದಸ್ಯರು ಪ್ರತಿಷ್ಠಿತ ಪಂದ್ಯವನ್ನು ಗೆದ್ದಿದ್ದಕ್ಕೆ ಅಭಿನಂದಿಸಲು ಮೊನ್ನೆ ಸೋಮವಾರ ಟ್ರಂಪ್‌ ಅವರನ್ನೆಲ್ಲ ಶ್ವೇತಭವನಕ್ಕೆ ಆಹ್ವಾನಿಸಿದ್ದರು. ಶ್ವೇತಭವನದ ಔತಣವೆಂದರೆ ಅತ್ಯಂತ ಅದ್ಧೂರಿಯಾಗಿರುತ್ತದೆ. ಆದರೆ, ಖರ್ಚಿಗೆ ಹಣವಿಲ್ಲದೆ ಟ್ರಂಪ್‌ ತಮ್ಮ ಕಿಸೆಯಿಂದ ಹಣ ನೀಡಿ ಫುಟ್ಬಾಲ್‌ ತಂಡದವರಿಗೆ 300 ಬರ್ಗರ್‌ ಆರ್ಡರ್‌ ಮಾಡಿ ತಿನ್ನಿಸಿ ಕಳಿಸಿದ್ದಾರೆ! ಇದನ್ನು ಸ್ವತಃ ಮಾಧ್ಯಮಗಳಿಗೆ ಹೇಳಿಕೊಂಡಿದ್ದಾರೆ ಕೂಡ.