ಆ್ಯಂಬುಲೆನ್ಸ್ ಚಾಲಕನ ಛಲಬಿಡದ ಯತ್ನ | ಕಣ್ಣೂರಿನಿಂದ ತಿರುವನಂತಪುರಂ ಆಸ್ಪತ್ರೆಗೆ ಮಗು ರವಾನೆ
ತಿರುವನಂತಪುರಂ: ಒಂದು ತಿಂಗಳ ಹಸುಗೂಸು ಉಸಿರಾಟದ ತೊಂದರೆಯಿಂದಾಗಿ ತುರ್ತಾಗಿ ಹೃದಯದ ಚಿಕಿತ್ಸೆಗೆ ಒಳಗಾಗಬೇಕಿತ್ತು. ಆದರೆ, 516 ಕಿ.ಮೀ.ಗಿಂತಲೂ ಹೆಚ್ಚಿನ ದೂರದ ಆಸ್ಪತ್ರೆಗೆ ಅಷ್ಟು ಬೇಗ ಸಾಗಿಸುವುದು ಸಾಧ್ಯವೇ ಇರಲಿಲ್ಲ. ರಸ್ತೆ ಮಾರ್ಗದಲ್ಲಿ ಕಡಿಮೆ ಟ್ರಾಫಿಕ್ ಇದ್ದರೂ ಕನಿಷ್ಠ 14 ತಾಸಿನ ಪ್ರಯಾಣ. ಈ ಅಸಾಧ್ಯ ಸವಾಲನ್ನು ಕೇರಳದ ಆ್ಯಂಬುಲೆನ್ಸ್ ಚಾಲಕನೊಬ್ಬ ಸಾಧಿಸಿದ್ದಾನೆ.
ಹೌದು, ಇದಾವುದೋ ಸಿನಿಮಾದ ದೃಶ್ಯವಲ್ಲ. ಕೇರಳದಲ್ಲಿ ನಡೆದ ನೈಜ ಘಟನೆ. ಫಾತಿಮಾ ಲಾಬಿಯಾ ಎಂಬ 31 ದಿನದ ಹಸುಗೂಸು ಕಳೆದೊಂದು ವಾರದಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿತ್ತು. ಹೀಗಾಗಿ ತಕ್ಷಣವೇ ಶಸ್ತ್ರಚಿಕಿತ್ಸೆಗೆ ವೈದ್ಯರು ಸೂಚಿಸಿದ್ದರು. ತಿರುವನಂತಪುರದ ಶ್ರೀ ಚಿತ್ರಾ ಮಿಷನ್ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದರು.
ತಿರುವನಂತಪುರಂಗೆ ಏರ್ ಆ್ಯಂಬುಲೆನ್ಸ್ ಮೂಲಕ ಸಾಗಿಸುವುದಕ್ಕೆ ಕಣ್ಣೂರಿನಿಂದ ಹತ್ತಿರದ ವಿಮಾನ ನಿಲ್ದಾಣಗಳಾದ ಮಂಗಳೂರು ಅಥವಾ ಕಲ್ಲಿಕೋಟೆಗೆ ತೆರಳಲು 5 ತಾಸು ಬೇಕಾಗುತ್ತಿತ್ತು. ಹೀಗಾಗಿ ರಸ್ತೆ ಮಾರ್ಗದ ಮೂಲಕವೇ ಮಗುವನ್ನು ಸಾಗಿಸಲು ನಿರ್ಧರಿಸಲಾಯಿತು.
ಆ್ಯಂಬುಲೆನ್ಸ್ ಚಾಲಕ ತಮೀಮ್ ಎಂಬಾತನಿಗೆ ಬುಧವಾರ ರಾತ್ರಿ ಕಣ್ಣೂರಿನ ಪ್ಯಾರಿಯಾರಾಮ್ ಮೆಡಿಕಲ್ ಕಾಲೇಜಿನಿಂದ ತಿರುವನಂತಪುರದ ಆಸ್ಪತ್ರೆಗೆ ಮಗುವನ್ನು ಸಾಗಿಸುವ ಕೆಲಸವನ್ನು ಒಪ್ಪಿಸಲಾಗಿತ್ತು. ರಾತ್ರಿ 8.20ಕ್ಕೆ ಹೊರಟ ಆ್ಯಂಬುಲೆನ್ಸ್ ಎರಡು ಆಸ್ಪತ್ರೆಗಳ ನಡುವಿನ 516 ಕಿ.ಮೀ. ದೂರವನ್ನು 7 ತಾಸಿನಲ್ಲಿ ಕ್ರಮಿಸಿದೆ.
ಈ ವೇಳೆ, ಕೇರಳದ ಸಂಚಾರಿ ಪೊಲೀಸರು ಆ್ಯಂಬುಲೆನ್ಸ್ ಸಾಗುವ ಮಾರ್ಗದಲ್ಲಿ ಟ್ರಾಫಿಕ್ ತೊಂದರೆ ಆಗದಂತೆ ನೋಡಿಕೊಂಡಿದ್ದರು. 15 ನಿಮಿಷ ವಿರಾಮ ಪಡೆದುಕೊಂಡಿದ್ದನ್ನು ಹೊರತು ಪಡಿಸಿ ಚಾಲಕ ನಿಗದಿತವಾಗಿ ಗಂಟೆಗೆ 100-120 ಕಿ.ಮೀ.ವೇಗವಾಗಿ ವಾಹನ ಚಲಾಯಿಸಿದ್ದಾನೆ.
ಗುರುವಾರ ಮುಂಜಾನೆ 3.22ಕ್ಕೆ ಮಗುವನ್ನು ತಿರುವನಂತಪುರಂನ ಆಸ್ಪತ್ರೆಗೆ ತಲುಪಿಸುವಲ್ಲಿ ಚಾಲಕ ತಮೀಮ್ ಯಶಸ್ವಿಯಾಗಿದ್ದಾನೆ. ಚಾಲಕನ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
