Asianet Suvarna News Asianet Suvarna News

ಸಚಿವರಾಗಿದ್ದ ಮೂರು ವರ್ಷದಲ್ಲಿ 9 ಲಕ್ಷ ಮನೆ ಕಟ್ಟಿಸಿದ್ದರು ಅಂಬಿ

 ರಾಜಕೀಯ ಜೀವನದಲ್ಲಿ ಹಲವಾರು ಜನಪರ ಕೆಲಸ ಮಾಡಿರುವ ಅಂಬರೀಷ್‌ ರಾಜ್ಯ ವಸತಿ ಇಲಾಖೆ ಸಚಿವರಾಗಿ ರಾಜ್ಯದ ಬಡ ಹಾಗೂ ನಿರ್ವಸತಿಕರಿಗಾಗಿ 13 ಲಕ್ಷ ಮನೆಗಳ ನಿರ್ಮಾಣ ಯೋಜನೆಗೆ ಚಾಲನೆ ನೀಡಿದ್ದರು. ಅಲ್ಲದೆ, ಕಡತ ವಿಲೇವಾರಿಯಲ್ಲಿ ವಸತಿ ಇಲಾಖೆಯನ್ನು ಅಗ್ರಮಾನ್ಯ ಸ್ಥಾನಕ್ಕೆ ಕೊಂಡೊಯ್ದಿದ್ದರು.

Ambareesh was popular for being Helping Nature
Author
Bengaluru, First Published Nov 26, 2018, 8:22 AM IST

ಬೆಂಗಳೂರು :  ಎರಡೂವರೆ ದಶಕದ ರಾಜಕೀಯ ಜೀವನದಲ್ಲಿ ಹಲವಾರು ಜನಪರ ಕೆಲಸ ಮಾಡಿರುವ ಅಂಬರೀಷ್‌ ರಾಜ್ಯ ವಸತಿ ಇಲಾಖೆ ಸಚಿವರಾಗಿ ರಾಜ್ಯದ ಬಡ ಹಾಗೂ ನಿರ್ವಸತಿಕರಿಗಾಗಿ 13 ಲಕ್ಷ ಮನೆಗಳ ನಿರ್ಮಾಣ ಯೋಜನೆಗೆ ಚಾಲನೆ ನೀಡಿದ್ದರು. ಅಲ್ಲದೆ, ಕಡತ ವಿಲೇವಾರಿಯಲ್ಲಿ ವಸತಿ ಇಲಾಖೆಯನ್ನು ಅಗ್ರಮಾನ್ಯ ಸ್ಥಾನಕ್ಕೆ ಕೊಂಡೊಯ್ದಿದ್ದರು.

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಸ್ಥಾನಕ್ಕೆ ಅರ್ಧಕ್ಕೆ ರಾಜೀನಾಮೆ ಸಲ್ಲಿಸಿದ್ದ ಅಂಬರೀಷ್‌ ಅವರನ್ನು 2016ರ ಜೂನ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಿಂದ ಅರ್ಧಕ್ಕೆ ಕೈ ಬಿಟ್ಟಿದ್ದರು.

ಆದರೂ, ರಾಜ್ಯ ವಸತಿ ಸಚಿವರಾಗಿ ಅಂಬರೀಷ್‌ ಅವರು ಗಮನಾರ್ಹ ಸೇವೆ ಸಲ್ಲಿಸಿದ್ದರು. ರಾಜ್ಯಾದ್ಯಂತ ಬಡ ಹಾಗೂ ನಿರ್ವಸಿತರಿಗಾಗಿ 13 ಲಕ್ಷ ಮನೆಗಳನ್ನು ನಿರ್ಮಾಣ ಮಾಡುವ ಯೋಜನೆಗೆ 2013ರಲ್ಲಿ ಚಾಲನೆ ನೀಡಿದ್ದರು. ತಮ್ಮ ಮೂರು ವರ್ಷಗಳ ಅವಧಿಯಲ್ಲೇ ಬರೋಬ್ಬರಿ 9 ಲಕ್ಷ ಮನೆಗಳನ್ನು ನಿರ್ಮಿಸಿಕೊಟ್ಟಿದ್ದರು.

2013-14ನೇ ಸಾಲಿನ ಅವಧಿಯಲ್ಲಿ 2.19 ಲಕ್ಷ ವಸತಿ ನಿರ್ಮಾಣ ಘೋಷಿಸಿದ್ದರು. ಇದರಲ್ಲಿ ಬಸವ ವಸತಿ ಯೋಜನೆ 87 ಸಾವಿರ, ಇಂದಿರಾ ಆವಾಸ್‌ ಯೋಜನೆಯಡಿ 20 ಸಾವಿರ ಸೇರಿದಂತೆ ಒಂದೇ ವರ್ಷದಲ್ಲಿ ವಸತಿ ನಿರ್ಮಾಣಕ್ಕೆ 20 ಸಾವಿರ ಕೋಟಿ ರು. ಮೀಸಲಿಟ್ಟಿದ್ದರು. ಶೇ.70 ರಷ್ಟುಮನೆಗಳನ್ನು ಅದೇ ಆರ್ಥಿಕ ಸಾಲಿನಲ್ಲಿ ನಿರ್ಮಿಸುವ ಮೂಲಕ ತಮ್ಮ ಕಾರ್ಯದಕ್ಷತೆ ಪ್ರದರ್ಶಿಸಿದ್ದರು.

ಈ ಮೂಲಕ ಕಡತ ವಿಲೇವಾರಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನೀಡುವ ರಾರ‍ಯಂಕಿಂಗ್‌ನಲ್ಲಿ ವಸತಿ ಇಲಾಖೆಯನ್ನು ಪ್ರಥಮ ಸ್ಥಾನದಲ್ಲಿ ನಿಲ್ಲಿಸಿದ್ದರು.

ಇದರ ಜತೆಗೆ ಕೆಂಗೇರಿ ಬಳಿ ಕೈಗೆಟಕುವ ದರದಲ್ಲಿ ಫ್ಲ್ಯಾಟ್‌ಗಳ ನಿರ್ಮಾಣ, ಆನೇಕಲ್‌ ರಸ್ತೆ ಬಳಿಯ ಸೂರ್ಯ ಸಿಟಿಗೆ 800 ಕೋಟಿ ರು. ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಯೋಜನೆಗೆ ಚಾಲನೆ ನೀಡಿದ್ದರು. ಸಿನಿಮಾ ಕಾರ್ಮಿಕರಿಗೂ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಿದ್ದರು.

ಅಲ್ಲದೆ, ಬಡವರಿಗೆ ನೀಡುವ ವಸತಿಗಳ ದುರ್ಬಳಕೆ ತಡೆಯಲು ಫಲಾನುಭವಿಗಳು ಬೇರೊಬ್ಬರಿಗೆ ಮನೆ ಬಾಡಿಗೆ ನೀಡದಂತೆ ನಿರ್ಬಂಧ ವಿಧಿಸಿದ್ದರು. ಇದನ್ನು ಕಟ್ಟುನಿಟ್ಟಾಗಿ ಪಾಲಿಸಿ ಬಾಡಿಗೆಗೆ ನೀಡಿದ್ದರೆ ಬಾಡಿಗೆ ಇರುವವರನ್ನೇ ಮಾಲೀಕರನ್ನಾಗಿ ಘೋಷಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದರು.

ರಾಜೀನಾಮೆಗಳು:  2002 ಹಾಗೂ 2007ರಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅಂಬರೀಷ್‌ ಅವರು ಸಚಿವ ಸ್ಥಾನದಿಂದ ಕೈ ಬಿಟ್ಟ ಹಿನ್ನೆಲೆಯಲ್ಲಿ 2016ರಲ್ಲೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಂದು ಸ್ಪೀಕರ್‌ ಆಗಿದ್ದ ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾಗಿ ನೇಮಕವಾಗಿದ್ದ ಪರಿಣಾಮ ಉಪಾಧ್ಯಕ್ಷರಾಗಿದ್ದ ಎನ್‌.ಎಚ್‌. ಶಿವಶಂಕರರೆಡ್ಡಿ ಅವರು ರಾಜೀನಾಮೆ ಪತ್ರವನ್ನು ಅಂಗೀಕರಿಸಿರಲಿಲ್ಲ. ಮಾಹಿತಿ ಕೊರತೆ ನೆಪ ನೀಡಿ ಹಿಂತಿರುಗಿಸಿದ್ದರು.

1 ವರ್ಷಕ್ಕೂ ಹೆಚ್ಚು ಕಾಲ ಅಧಿವೇಶನಕ್ಕೇ ಗೈರು

2016ರ ಜೂನ್‌ನಲ್ಲಿ ವಸತಿ ಸಚಿವ ಸ್ಥಾನದಿಂದ ಕೈ ಬಿಟ್ಟಬಳಿಕ ಬರೋಬ್ಬರಿ ಒಂದು ವರ್ಷಕ್ಕೂ ಹೆಚ್ಚು ಕಾಲ ವಿಧಾನಸಭೆ ಅಧಿವೇಶನಕ್ಕೆ ಹಾಜರಾಗದೆ ಅಂತರ ಕಾಯ್ದುಕೊಂಡಿದದರು. 2016 ರಿಂದ ನಡೆದ ಚಳಿಗಾಲದ ಅಧಿವೇಶನ ಹಾಗೂ ಬಜೆಟ್‌ ಅಧಿವೇಶನ ಎರಡಕ್ಕೂ ಗೈರು ಹಾಜರಾಗಿದ್ದರು. ಇದಕ್ಕೆ ಕಾರಣ ಕೇಳಿ ಅಂದಿನ ಸ್ಪೀಕರ್‌ ಕೆ.ಬಿ. ಕೋಳಿವಾಡ ನೋಟಿಸ್‌ ಜಾರಿ ಮಾಡಿದ್ದರು. ಈ ವೇಳೆ ಅಂಬರೀಷ್‌ ಅವರು ಹವಾನಿಯಂತ್ರಿತ ಹಾಲ್‌ನಲ್ಲಿ ಕೂರಲು ಆರೋಗ್ಯ ಸಹಕರಿಸುತ್ತಿಲ್ಲ ಎಂಬ ಉತ್ತರ ನೀಡಿದ್ದರು.

2014ರಲ್ಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಫೆಬ್ರುವರಿಯಿಂದ ಏಪ್ರಿಲ್‌ 11ರವರೆಗೆ ವಿಕ್ರಂ ಆಸ್ಪತ್ರೆ, ಸಿಂಗಾಪುರ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು, ಬಳಿಕ ದೇಶಕ್ಕೆ ವಾಪಸಾದ ಬಳಿಕ ಅಲ್ಪ ವಿಶ್ರಾಂತಿ ಬಳಿಕ ಮತ್ತೆ ಇಲಾಖಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅನಾರೋಗ್ಯ ಸಮಸ್ಯೆಯಿಂದಾಗಿ ಹೆಚ್ಚು ಪ್ರವಾಸ ಮಾಡಲಾಗದೆ ಸಮಸ್ಯೆ ಎದುರಿಸಿದ್ದರು. ಇದರಿಂದ ವಿಪಕ್ಷಗಳ ಟೀಕೆಗೂ ಗುರಿಯಾಗಿದ್ದರು. ಜತೆಗೆ ಬಿಜೆಪಿ ಅವಧಿಯಲ್ಲಿ ಶುರುವಾದ ಬಸವ ವಸತಿ ಯೋಜನೆ, ಅಟಲ್‌ ವಸತಿ ಯೋಜನೆಗಳಿಗೆ ಸೂಕ್ತ ಅನುದಾನ ನೀಡುತ್ತಿಲ್ಲ ಎಂಬ ಆರೋಪಕ್ಕೂ ಗುರಿಯಾಗಿದ್ದರು.

ಬಳಿಕ 2016 ಜೂನ್‌ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಬರೀಷ್‌ ಅವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟರು. ಇದರಿಂದ ತೀವ್ರ ನೊಂದುಕೊಂಡಿದ್ದ ಅವರು, ಪಕ್ಷ ಹಾಗೂ ಸರಕಾರದಿಂದ ಅಂತರ ಕಾಯ್ದುಕೊಂಡಿದ್ದರು.

Follow Us:
Download App:
  • android
  • ios