ಸಂಸದರಾದಾಗ ಬಂಗಲೆಯೇಬೇಕೆಂದು ಹಠ ಹಿಡಿದಿದ್ದರು ಅಂಬಿ!

ಅಂಬರೀಶ್ ಸಂಸದರಾಗಿ ಆಯ್ಕೆಯಾದಾಗ ಫ್ಲಾಟ್ ಕೊಟ್ಟಾಗ ಬಂಗಲೆಯೇ ಬೇಕೆಂದು ಹಠ ಹಿಡಿದಿದ್ದರು. ಕೊನೆಗೆ ಹೋಟೆಲ್ ಲೀ ಮೆರಿಡಿಯನ್ ಪಕ್ಕದಲ್ಲಿ ಲೋಕಸಭಾ ಅಧಿಕಾರಿಗಳು ಒಂದು ಬಂಗಲೆ ಹುಡುಕಿಕೊಟ್ಟರಂತೆ!

Ambareesh urged to Bungalow during the period of MP

ಬೆಂಗಳೂರು (ನ. 27): ಅಂಬರೀಷ್ ಸಂಸದನಾಗಿ ದಿಲ್ಲಿಗೆ ಬರುವುದಕ್ಕಿಂತಲೂ ಮುಂಚೆಯಿಂದ ಉಳಿದುಕೊಳ್ಳುತ್ತಿದ್ದುದು ಚಾಣಕ್ಯಪುರಿಯಲ್ಲಿರುವ ಅಶೋಕಾ ಹೋಟೆಲ್‌ನಲ್ಲಿ. ಅಲ್ಲೂ 10-12 ಗೆಳೆಯರನ್ನು ಗುಡ್ಡೆ ಹಾಕಿಕೊಂಡು ಸಮಾರಾಧನೆ ಮಾಡಿ ಹೋಗುತ್ತಿದ್ದರು. 

ತೆಲಗು ನಟ ಮೋಹನ್ ಬಾಬು, ಜಯಪ್ರದಾ ಗಂಡ ಶ್ರೀಕಾಂತ್ ನೆಹೆತಾ, ಸಂಸದ ಧನಂಜಯ ಕುಮಾರ್, ಐ ಎಂ ಜಯರಾಮ್ ಶೆಟ್ಟಿ, ತಮಿಳು ನಟ ಶರತ್ ಇವರೆಲ್ಲಾ ಅಂಬಿ ‘ದಿಲ್ಲಿ ಮಿತ್ರಮಂಡಳಿ’ ಕಾಯಂ ಸದಸ್ಯರು. ಕೊನೆಗೆ ಸಂಸದರಾಗಿ ಆಯ್ಕೆಯಾಗಿ ಬಂದ ನಂತರ ಕೆಲವು ತಿಂಗಳ ಕಾಲ ಕರ್ನಾಟಕ ಭವನದ ರೂಂ ನಂಬರ್ 001 ರಲ್ಲಿ ವಾಸ್ತವ್ಯ ಹೂಡಿದ್ದರು. 3 ಬೆಡ್ ರೂಂ ಫ್ಲ್ಯಾಟ್ ಕೊಟ್ಟಾಗ ‘ಬೇಡ ಹೋಗ್ರಿ ಬಂಗಲೆ ಕೊಡೋದಾದ್ರೆ ಕೊಡಿ’ ಎಂದು ಹಟ ಹಿಡಿದಿದ್ದರಂತೆ. 

ಕೊನೆಗೆ ಹೋಟೆಲ್ ಲೀ ಮೆರಿಡಿಯನ್ ಪಕ್ಕದಲ್ಲಿ ಲೋಕಸಭಾ ಅಧಿಕಾರಿಗಳು ಒಂದು ಬಂಗಲೆ ಹುಡುಕಿಕೊಟ್ಟರಂತೆ. ನಂತರ ಅಂಬಿಯ ಬಹುಭಾಷಾ ಮಿತ್ರಮಂಡಳಿ ನಂತರ ಸರ್ಕಾರಿ ಮನೆಗೆ ಶಿಫ್ಟ್ ಆಯಿತಂತೆ. ದಿನವೂ ಅಂಬಿ ಏಳುತ್ತಿದ್ದದ್ದೇ ಮಧ್ಯಾಹ್ನದ ಹೊತ್ತಿಗೆ. ನಂತರ ಸೆಂಟ್ರಲ್ ಹಾಲ್‌ಗೆ ಹೋಗಿ ಸಹಿ ಹಾಕಿ ಕಾಫಿ ಕುಡಿಯುತ್ತಾ ಹರಟೆ ಹೊಡೆದು ಒಂದರ್ಧ ಗಂಟೆ ಹೌಸ್‌ನಲ್ಲಿ ಕುಳಿತು ಬರುತ್ತಿದ್ದರು.

ಒಮ್ಮೆಯಂತೂ 6 ತಿಂಗಳಿಗೂ ಹೆಚ್ಚು ಕಾಲ ಸಹಿ ಮಾಡದೇ ಇದ್ದಾಗ ಹಿರಿಯ ಪತ್ರಕರ್ತರೊಬ್ಬರು ಫೋನ್ ಮಾಡಿ, ‘ಸದಸ್ಯತ್ವ ಹೋದೀತು’ ಎಂದು ಹೇಳಿದ ನಂತರ ಬಂದು ಸಹಿ ಹಾಕಿದರಂತೆ. ಗುಲಾಂ ನಬಿ, ಸುಶೀಲ್ ಕುಮಾರ ಶಿಂಧೆ, ಅಂಬಿಕಾ ಸೋನಿ ಜೊತೆ ಇದ್ದಷ್ಟೇ ಮೈತ್ರಿ ಅಂಬರೀಷ್‌ಗೆ ಅನಂತಕುಮಾರ್, ವೆಂಕಯ್ಯ ನಾಯ್ಡು ಜೊತೆ ಇತ್ತು. ಆದರೆ ಎಲ್ಲ ಪ್ರಭಾವ ಇದ್ದರೂ ಅಂಬರೀಷ್ ಮೈತ್ರಿಯನ್ನು ಜತನದಿಂದ ಕಾಪಾಡಿಕೊಂಡರೇ ಹೊರತು ಎಂದಿಗೂ ಅದನ್ನು ವೈಯಕ್ತಿಕ ಸ್ವಾರ್ಥಕ್ಕೂ ಬಳಸಲಿಲ್ಲ, ರಾಜ್ಯಕ್ಕಾಗಿಯೂ ಉಪಯೋಗಿಸಲಿಲ್ಲ. 

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ 

Latest Videos
Follow Us:
Download App:
  • android
  • ios