ಪುತ್ರ, ಪತ್ನಿ ರಾಜಕೀಯ ಪ್ರವೇಶ ಇಲ್ಲ: ಶಾಸಕ

ಮಂಡ್ಯ: ಪುತ್ರನಾಗಲಿ, ಪತ್ನಿ ಸುಮಲತಾ ಅವರಾಗಲಿ ಸದ್ಯ ರಾಜಕೀಯಕ್ಕೆ ಪ್ರವೇಶಿಸುವ ಸಾಧ್ಯತೆಯನ್ನು ತಳ್ಳಿಹಾಕಿರುವ ಶಾಸಕ ಹಾಗೂ ಮಾಜಿ ಸಚಿವ ಅಂಬರೀಶ್ ಅವರು, ತಾವು ಮಾತ್ರ ಮುಂದಿನ ಚುನಾವಣೆಯಲ್ಲಿ ಮತ್ತೆ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲೇ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ನ ‘ಮನೆ ಮನೆ ಭೇಟಿ’ ಕಾರ್ಯಕ್ರಮದಲ್ಲಿ ನಾನೂ ಪಾಲ್ಗೊಳ್ಳು ತ್ತೇನೆ. ಪಕ್ಷದ ಬಲವರ್ಧನೆಗೆ ಇಂಥ ಕಾರ್ಯಕ್ರಮ ಅಗತ್ಯ ಎಂದರು. ಈ ಮೂಲಕ ಪಕ್ಷದ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮತ್ತು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆಯನ್ನು ಅವರು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ನಮ್ಮ ಕುಟುಂಬದಿಂದ ಯಾರೂ ಚುನಾವಣೆಗೆ ಸ್ಪರ್ಧಿಸಲ್ಲ, ಮಗ ಅಭಿಷೇಕ್ ಸಿನಿಮಾರಂಗಕ್ಕೆ ಹೋಗುತ್ತಾನೆ. ಆತನ ಸಿನಿಮಾದ ಮುಹೂರ್ತ ಸದ್ಯದಲ್ಲೇ ಇದೆ ಎಂದರು. ಹೈಕಮಾಂಡ್‌ಗೆ ಬಿಟ್ಟದ್ದು: ಈ ನಡುವೆ, ಮಂಡ್ಯ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡದೇ ಇರುವುದು ಅಥವಾ ಹೊಸ ಅಧ್ಯಕ್ಷರನ್ನು ನೇಮಿಸುವ ವಿಚಾರ ಪಕ್ಷದ ಹೈ ಕಮಾಂಡ್‌ಗೆ ಬಿಟ್ಟಿದ್ದು. ಆದರೆ ಮಂಡ್ಯದಿಂದ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಆಕಾಂಕ್ಷಿಗಳಾಗಿ ನಾಲ್ಕೈದು ಹೆಸರು ಬಂದಿರುವುದು ನಿಜ. ಆ ಹೆಸರುಗಳನ್ನು ಪರಿಶೀಲಿಸಿ ನೇಮಿಸುವುದು ಅಥವಾ ಬಿಡುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದರು.