ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ವಿಧಾನಸೌಧಕ್ಕೆ ಬಂದ ಮಂಡ್ಯ ಶಾಸಕ, ರೆಬೆಲ್ ಸ್ಟಾರ್ ಅಂಬರೀಷ್ ಅವರು ಲಿಫ್ಟ್‌ನಿಂದ ಮತಗಟ್ಟೆವರೆಗೆ ವ್ಹೀಲ್ ಚೇರ್‌ನಲ್ಲಿ ಹೋಗುವ ಮೂಲಕ ನೆರೆದಿದ್ದವರಿಗೆ ಅಚ್ಚರಿ ಉಂಟು ಮಾಡಿದರು.

ಬೆಂಗಳೂರು(ಜು.18): ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ವಿಧಾನಸೌಧಕ್ಕೆ ಬಂದ ಮಂಡ್ಯ ಶಾಸಕ, ರೆಬೆಲ್ ಸ್ಟಾರ್ ಅಂಬರೀಷ್ ಅವರು ಲಿಫ್ಟ್‌ನಿಂದ ಮತಗಟ್ಟೆವರೆಗೆ ವ್ಹೀಲ್ ಚೇರ್‌ನಲ್ಲಿ ಹೋಗುವ ಮೂಲಕ ನೆರೆದಿದ್ದವರಿಗೆ ಅಚ್ಚರಿ ಉಂಟು ಮಾಡಿದರು.

ಭಾನುವಾರವಷ್ಟೇ ಬೆಂಗಳೂರು ಡರ್ಬಿಯಲ್ಲಿ ಕುದುರೆ ರೇಸ್ ನೋಡಿ ಎಂಜಾಯ್ ಮಾಡಿದ್ದ ‘ಕಲಿಯುಗದ ಕರ್ಣ’ನ ಆರೋಗ್ಯ ಏನಾಯಿತು ಎಂದು ಎಲ್ಲರೂ ಒಂದು ಕ್ಷಣ ಚಿಂತಿತರಾದರು. ನಗುಮೊಗದಿಂದಲೇ ವ್ಹೀಲ್ ಚೇರ್‌ನಲ್ಲಿ ಕುಳಿತಿದ್ದ ಅಂಬರೀಷ್, ಮತಗಟ್ಟೆಗೆ ತೆರಳುತ್ತಲೇ ಸರಾಗನೆ ಎದ್ದು ಒಳಹೋಗಿ ಮತ ಹಾಕಿದರು. ಮತ ಹಾಕುವಾಗ, ‘ಲೇ ಫೋಟೊ ತಗಿರ್ಲಾ’ ಎಂದು ಚಟಾಕಿ ಬೇರೆ ಹಾರಿಸಿದರು. ಆಗ ಮತಗಟ್ಟೆ ಅಧಿಕಾರಿಗಳು, ‘ಸಾರ್ ಹಾಗೆಲ್ಲ ಹೇಳೋಹಾಗಿಲ್ಲ ಬನ್ನಿ’ ಎಂದು ಹೊರಗೆ ಕರೆದುಕೊಂಡು ಬಂದರು. ಆಗ ಮಾಧ್ಯಮ ಪ್ರತಿನಿಧಿಗಳು, ‘ಏನ್ ಸಾರ್ ನಿನ್ನೆ ರೇಸ್‌ನಲ್ಲಿ ಚೆನ್ನಾಗೇ ಇದ್ರಿ, ಇವತ್ತೇನಾಯ್ತು’ ಎಂದು ಪ್ರಶ್ನಿಸುತ್ತಿದ್ದಂತೆಯೇ ‘ನನಗೇನಾಗಿದೆ ಹೋಗಲ್ಲೊ, ಅಲ್ಲಿ ವ್ಹೀಲ್ ಚೇರ್ ಇತ್ತು, ತಳ್ಳಿ ಅಂದೆ, ತಳ್ಳಿದ್ರು, ಅದ್ರಲ್ಲಿ ಬಂದೆ. ನನಗೆ ಏನಾಗಿಲ್ಲ’ ಎಂದು ಎಲ್ಲವೂ ತಮಾಷೆಗೆ ಎಂಬಂತೆ ಹೇಳಿ ಹೊರಟೇ ಬಿಟ್ಟರು.

ಇನ್ನು ಮನೆಯಲ್ಲಿ ಬಿದ್ದು ಎರಡೂ ಕಾಲುಗಳ ನೋವಿನಿಂದ ಬಳಲುತ್ತಿರುವ ಸಚಿವ ಬಸವರಾಜ ರಾಯರಡ್ಡಿ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಬೇಲೂರು ಶಾಸಕ ರುದ್ರೇಶಗೌಡ ವ್ಹೀಲ್ ಚೇರ್ ಬಳಸಿ ಮತಗಟ್ಟೆಗೆ ಬಂದರು. ಕಾಲಿನ ಚಿಕಿತ್ಸೆ ಪಡೆಯುತ್ತಿರುವ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಮತಗಟ್ಟೆಗೆ ಬರಲು ವಾಕರ್ ನೆರವು ಪಡೆದರು. ಕಲಬುರಗಿ ಗ್ರಾಮೀಣ ಶಾಸಕ ರಾಮಕೃಷ್ಣ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸಹಾಯದಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.