ನೋಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್‌ ಪ್ರಧಾನಿ ನರೇಂದ್ರ ಮೋದಿ ಮತ್ತವರ ನೀತಿಗಳ ಕಟ್ಟಾವಿಮರ್ಶಕರು. ಆದರೆ ಇದೀಗ ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಕಾರ‍್ಯಕ್ರಮ ನೋಡುವುದಕ್ಕಿಂತ ಕಾರ್ಟೂನ್‌ ನೋಡುವುದು ಉತ್ತಮ ಎಂದು ಸಂದರ್ಶನವೊಂದರಲ್ಲಿ ಸೇನ್‌ ಹೇಳಿದ್ದಾರೆ ಎನ್ನಲಾದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಫೇಸ್‌ಬುಕ್‌ನಲ್ಲಿ ಈ ಹೇಳಿಕೆ ಭಾರಿ ವೈರಲ್‌ ಆಗುತ್ತಿದೆ. ಬ್ರಿಟಿಷ್‌ ಮೀಡಿಯಾ ಆರ್ಗನೈಸೇಶನ್‌ಗೆ ಅರ್ಥಶಾಸ್ತ್ರಜ್ಞ ಅಮಾತ್ರ್ಯ ಸೇನ್‌ ನೀಡಿದ ಸಂದರ್ಶನದಲ್ಲಿ ಹೀಗೆ ಹೇಳಿದ್ದಾರೆಂದು ಬಂಗಾಳಿ ಬ್ಲಾಗ್‌ ‘ಭಾರತ್‌ ನ್ಯೂಸ್‌’ ಬರೆದುಕೊಂಡಿದೆ.

ಆದರೆ ಈ ಹೇಳಿಯ ಸತ್ಯಾಸತ್ಯವನ್ನು ಇಂಡಿಯಾ ಟು ಡೇ ಆ್ಯಂಟಿ ಫೇಕ್‌ನ್ಯೂಸ್‌ ರೂಮ್‌ ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಸಂದರ್ಶನದಲ್ಲಿ ಮೋದಿ ಪ್ರಮಾಣ ವಚನ ಸ್ವೀಕಾರ ಕಾರ‍್ಯಕ್ರಮ ವೀಕ್ಷಿಸುವುದಕ್ಕಿಂತ ಕಾರ್ಟೂನ್‌ನೋಡುವುದು ಉತ್ತಮ ಎಂದು ಸೇನ್‌ ಎಲ್ಲೂ ಹೇಳಿಲ್ಲ.

ಭಾರತ್‌ ನ್ಯೂಸ್‌ ಮೇ. 24ರಂದು ಈ ಸುದ್ದಿ ಪ್ರಕಟಿಸಿದೆ. ಅದರಲ್ಲಿ ಬಿಬಿಸಿ ಲಂಡನ್‌ ಅನ್ನು ಸುದ್ದಿ ಮೂಲ ಎಂದು ಉಲ್ಲೇಖಿಸಲಾಗಿದೆ. ಬಿಬಿಸಿ ಸುದ್ದಿವಾಹಿನಿಯಲ್ಲಿ ಅಮಾರ್ತ್ಯ ಸೇನ್‌ ಅವರೊಂದಿಗೆ ನಡೆದ ಕಾರ‍್ಯಕ್ರಮಗಳನ್ನು ಪರಿಶೀಲಿಸಿದಾಗಲೂ ವೈರಲ್‌ ಆಗಿರುವ ಈ ಹೇಳಿಕೆ ಎಲ್ಲೂ ಕಂಡುಬಂದಿಲ್ಲ. ಅಲ್ಲದೆ ನ್ಯೂಯಾರ್ಕ್ ಟೈಮ್ಸ್‌ ನಲ್ಲಿ ಮೇ 24ರಂದು ಸೇನ್‌ ಅವರ ಅಭಿಪ್ರಾಯವೊಂದು ಪ್ರಕಟವಾಗಿತ್ತು. ಆದರೆ ಅದರಲ್ಲಿ ವೈರಲ್‌ ಆಗಿರುವ ಸಂದೇಶ ಎಲ್ಲೂ ಇಲ್ಲ.

-ವೈರಲ್ ಚೆಕ್