ಬೆಂಗಳೂರು :  ಹುಬ್ಬಳ್ಳಿಯಿಂದ ಖಾಸಗಿ ಟೂರ್ಸ್‌ ಆ್ಯಂಡ್ ಟ್ರಾವೆಲ್ ಸಂಸ್ಥೆ ಮೂಲಕ ಅಮರನಾಥ ಯಾತ್ರೆಗೆ ತೆರಳಿದ್ದ 59 ಯಾತ್ರಿಗಳು ಕಾಶ್ಮೀರದಲ್ಲಿ ಸೃಷ್ಟಿಯಾಗಿರುವ ಪ್ರತಿಕೂಲ ಹವಾಮಾನದಿಂದಾಗಿ ಈಗ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಜೂ.26 ರಂದು ಖಾಸಗಿ ಪ್ರವಾಸಿ ಸಂಸ್ಥೆ ಮೂಲಕ ಅಮರನಾಥ ಯಾತ್ರೆಗೆ 115  ಯಾತ್ರಿಗಳು ಹುಬ್ಬಳ್ಳಿಯಿಂದ ತೆರಳಿದ್ದರು. ಇವರೆಲ್ಲ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ದಾವಣಗೆರೆ, ಲಕ್ಷ್ಮೇಶ್ವರ ಸೇರಿದಂತೆ ಸುತ್ತಮುತ್ತಲ ಪ್ರದೇಶದವರು. ಇವರಲ್ಲಿ 56 ಮಂದಿ ದೇವರ ದರ್ಶನ ಮುಗಿಸಿಕೊಂಡು ಹೊರಬಂದಿದ್ದಾರೆ. 

ಇವರೆಲ್ಲ ಬಾಲ್  ತಾಲ್ ಎಂಬ ಪ್ರದೇಶದಲ್ಲಿನ ಬೇಸ್ ಕ್ಯಾಂಪ್‌ನಲ್ಲಿದ್ದು, ಸುರಕ್ಷಿತವಾಗಿದ್ದಾರೆ. ಆದರೆ ಉಳಿದ 59 ಮಂದಿಗೆ ದೇವರ ದರ್ಶನವಾಗಿರಲಿಲ್ಲ. ಹೀಗಾಗಿ ಗುಫಾ ಗುಹೆಯೊಳಗೆ ಉಳಿದಿದ್ದರು. ಇದೀಗ ಆ ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗುಡ್ಡವೂ ಕುಸಿದಿದೆ. 

ಹೀಗಾಗಿ ಅವರಿಗೆ ಹೊರಬರಲು ಸಾಧ್ಯವಾಗುತ್ತಿಲ್ಲ. 3 ದಿನದಿಂದ 59 ಮಂದಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಅನ್ನ, ಆಹಾರ ದೊರೆತಿದೆಯೋ, ಇಲ್ಲವೋ ಎಂಬುದೂ ತಿಳಿಯುತ್ತಿಲ್ಲ ಎಂದು ಬೇಸ್ ಕ್ಯಾಂಪ್‌ನಲ್ಲಿರುವ ಹುಬ್ಬಳ್ಳಿಯ ಯಾತ್ರಿ ರಾಘವೇಂದ್ರ ಶಿರಹಟ್ಟಿ ಮಾಹಿತಿ ನೀಡಿದ್ದಾರೆ. ಆದರೆ ಈ 59 ಜನರು ಯಾರು, ಯಾವ ಊರಿನವರು ಎಂಬುದು ಗೊತ್ತಾಗಿಲ್ಲ. ಅವರು ನಮ್ಮೊಂದಿಗೆ ಬಂದಿದ್ದರು. ಅಷ್ಟೇ ಅವರ ಬಗ್ಗೆ ನಮಗೆ ಮಾಹಿತಿ ಇರೋದು. ಆದಷ್ಟು ಬೇಗ ಅವರನ್ನು ರಕ್ಷಿಸುವ ಕೆಲಸ ಸರ್ಕಾರ ಮಾಡಬೇಕಿದೆ ಎಂದು ಆಗ್ರಹಿಸಿದ್ದಾರೆ.