ಮೈಸೂರು[ಆ.30]: ಬಿಜೆಪಿ ಅತಿಥಿ ಸರ್ಕಾರ ಮಾಡುತ್ತಿದೆ ಎಂದು ಹೇಳಿಕೆ ಕೊಟ್ಟತಮ್ಮ ಪಕ್ಷದವರೇ ಆದ ಶಾಸಕ ಎಸ್‌.ಎ.ರಾಮದಾಸ್‌ಗೆ ಸಂಸದ ವಿ.ಶ್ರೀನಿವಾಸ್‌ ಟಾಂಗ್‌ ಕೊಟ್ಟಿದ್ದು, ಈ ಅತಿಥಿಗಳು ಇಲ್ಲದೇ ಹೋಗಿದ್ದರೆ ಇವರು ಸರ್ಕಾರವನ್ನು ರಚಿಸುತ್ತಿದ್ದರೆ ಎಂದು ಕಿಡಿಕಾರಿದ್ದಾರೆ.

ನಗರದಲ್ಲಿ ಗುರುವಾರ ತಮ್ಮ ನಿವಾಸದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಜತೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಮುಖ್ಯ ಕಾರಣ ಯಾರು ಎಂಬುದನ್ನು ಶಾಸಕ ಎಸ್‌.ಎ. ರಾಮದಾಸ್‌ ತಿಳಿದುಕೊಳ್ಳಬೇಕು. ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಆ 17 ಜನ ಅತಿಥಿಗಳೇ ಕಾರಣ. ಅವರು ಬರುವುದಿಲ್ಲ ಎಂದಿದ್ದರೆ ಇವರು ಅತಿಥಿ ಸತ್ಕಾರವನ್ನೂ ಮಾಡುತ್ತಿರಲಿಲ್ಲ, ಸರ್ಕಾರ ಮಾಡಲೂ ಸಾಧ್ಯವಾಗುತ್ತಿರಲಿಲ್ಲ. ಈ ವಿಚಾರವನ್ನು ಮೊದಲು ರಾಮದಾಸ್‌ ಅರ್ಥ ಮಾಡಿಕೊಳ್ಳಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಟಿಡಿ ಗೆಲುವಿಗೆ ನಾನೇ ಕಾರಣ:

ಜಿ.ಟಿ.ದೇವೆಗೌಡ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಯ ಸಾಧಿಸುವುದಕ್ಕೆ ನಾನೇ ಮುಖ್ಯ ಕಾರಣ. ಅಂದು ನಾನು ಈ ಮಾತನ್ನು ಹೇಳಿದ್ದರೆ ಮಾಧ್ಯಮದವರು ನಗುತ್ತಿದ್ದರು. ಈಗ ಏನಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ಜಿ.ಟಿ.ದೇವೆಗೌಡ ಪರ ಕೆಲಸ ಮಾಡಿದವರೇ ನಾವು. ಸಿದ್ದರಾಮಯ್ಯ 36,000 ಮತಗಳ ಅಂತರದಲ್ಲಿ ಸೋತ. ಸಿದ್ದರಾಮಯ್ಯ ಹೇಳುವ ಯಾವ ಮಾತು ಸತ್ಯವಾಗುವುದಿಲ್ಲ, ಮಧ್ಯಂತರ ಚುನಾವಣೆ ನಡೆಯಲ್ಲ ಎಂದಿದ್ದಾರೆ.