ಬೆಂಗಳೂರು :  ನಾಡಿನ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್‌ ಭಾಷೆ ಕಲಿಸುವ ನಿರ್ಧಾರವನ್ನು ಸಮ​ರ್ಪ​ಕ​ವಾಗಿ ಕಾರ್ಯಗತಗೊಳಿಸುವ ಪ್ರಯ​ತ್ನ​ವನ್ನು ಸರ್ಕಾರ ನಡೆ​ಸ​ಲಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಗುರುವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 63ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಮಕ್ಕಳ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಾವೆಲ್ಲರೂ ಕನ್ನಡವೇ ಪ್ರಾಣ ಪದಕ ಎಂದು ಭಾವಿಸಿದ್ದೇವೆ. ಇದರ ಜತೆಗೆ ಮಕ್ಕಳ ಭವಿಷ್ಯವೂ ಮುಖ್ಯವಾಗುತ್ತದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಕ್ಕಳು ಕೀಳರಿಮೆ ಭಾವದಿಂದ ಹೊರಬಂದು ಎಲ್ಲರಂತೆ ಜೀವನ ಎದುರಿಸಬೇಕೆನ್ನುವುದು ಸರ್ಕಾರದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್‌ ಭಾಷೆ ಕಲಿಸಲು ನಿರ್ಧರಿಸಲಾಗಿದೆ. ಆದರೆ, ಇಂಗ್ಲಿಷ್‌ ಕಲಿಸುವ ಆಶಯಕ್ಕೆ ಅಲ್ಲಲ್ಲಿ ಅಪಸ್ವರಗಳು ಬರುತ್ತಿವೆ. ಇಂಗ್ಲಿಷ್‌ ಕಲಿಕೆಯ ಉದ್ದೇಶ ವ್ಯಾವಹಾರಿಕ ದೃಷ್ಟಿಗೆ ಮಾತ್ರ ಸೀಮಿತ. ಇಂಗ್ಲಿಷ್‌ ಕಲಿಕೆ ಕನ್ನಡದ ಸಾರ್ವಭೌಮತ್ವದ ಮೇಲೆ ಸವಾರಿ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಭರ​ವಸೆ ನೀಡಿ​ದ​ರು.

ರಾಜ್ಯ ಒಡೆಯುವ ಮಾತೇ ಇಲ್ಲ:  ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನಂತಹ ಮಹಾನ್‌ ಸಂಘಟನೆಗಳ ಮಾರ್ಗದರ್ಶನದಲ್ಲಿ ಅನೇಕ ಅಪ್ರತಿಮ ಸೇನಾನಿಗಳ ದಿಟ್ಟಹೊರಾಟ, ಕೋಟ್ಯಂತರ ಕನ್ನಡಿಗರ ತ್ಯಾಗ, ಬಲಿದಾನದ ಫಲವಾಗಿ ಅಖಂಡ ಕರ್ನಾಟಕ ರೂಪುಗೊಂಡಿದೆ. ಆದರೆ, ಇತ್ತೀಚೆಗೆ ಈ ಅಖಂಡ ಕರ್ನಾಟಕ ಒಡೆಯುವ ದನಿಗಳು ಕೇಳಿ ಬರುತ್ತಿವೆ. ಅದನ್ನು ಸಂಪೂರ್ಣವಾಗಿ ಧಿಕ್ಕರಿಸಬೇಕು. ನಾಡನ್ನು ಒಡೆಯುವ ಅಪ ಪ್ರಚಾರಗಳಿಗೆ ಕಿವಿಗೊಡಬೇಡಿ. 30 ಜಿಲ್ಲೆ ಒಳಗೊಂಡ ಅಖಂಡ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಉತ್ತರ, ದಕ್ಷಿಣ, ಮಧ್ಯ, ಹೈದರಾಬಾದ್‌ ಕರ್ನಾಟಕ ಎಂಬ ಭೇದಭಾವ ಸಲ್ಲದು. ಒಂದು ತಾಯಿಯ ಮಕ್ಕಳ ಹಾಗೆ ಇದ್ದು ನಾಡು ಕಟ್ಟೋಣ ಎಂದು ಮನವಿ ಮಾಡಿದರು.

ಶಿರಸಿ ಶಾಲೆಗೆ ಸಿಎಂ ಶ್ಲಾಘನೆ:  ರಾಜ್ಯದ ಸರ್ಕಾರಿ ಶಾಲೆಗಳ ಗುಣಮಟ್ಟಹೆಚ್ಚಬೇಕು. ಶಿರಸಿಯ ಮಾರಿಕಾಂಬಾ ಸರ್ಕಾರಿ ಶಾಲೆ ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿ ನಡುವೆಯೂ ದಾಖಲೆಯ ಮಟ್ಟದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಏರಿಸಿಕೊಂಡಿದೆ. ಈ ಶಾಲೆಯ ಪ್ರಗತಿಗೆ ಶಿಕ್ಷಕ ವರ್ಗದ ಕೊಡುಗೆಯೂ ಪ್ರಮುಖ ಕಾರಣ. ಎಲ್ಲ ಸರ್ಕಾರಿ ಶಾಲೆಗಳು ಈ ಮಟ್ಟಕ್ಕೆ ಏರಬೇಕೆಂಬ ಆಸೆಯಿದೆ. ಅದಕ್ಕೆ ಅಗತ್ಯವಿರುವ ನೆರವು ನೀಡಲು ಸರ್ಕಾರ ಸಿದ್ಧವಿದೆ. ಶಿಕ್ಷಕ ವೃಂದ ಶ್ರಮ ಹಾಕಿದರೆ ಉನ್ನತ ಸಾಧನೆ ಸಾಧ್ಯವಾಗಲಿದೆ ಎಂದರು.

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಸಚಿವೆ ಜಯಮಾಲಾ, ಶಾಸಕ ರೋಷನ್‌ ಬೇಗ್‌, ವಿಧಾನ ಪರಿಷತ್‌ ಸದಸ್ಯ ಟಿ.ಎ. ಶರವಣ, ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಮುನಿರಾಜು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ಮತ್ತಿತರರು ಉಪಸ್ಥಿತರಿದ್ದರು.


ಅಂಗವಿಕಲ ಮಕ್ಕಳಿಗೂ ಬಿಸಿ ಹಾಲು

ರಾಜ್ಯ ಸರ್ಕಾರದ ಕ್ಷೀರಭಾಗ್ಯ ಯೋಜನೆಗಳನ್ನು ಅಂಗವಿಕಲ ಮಕ್ಕಳ ಖಾಸಗಿ ಶಾಲೆಗಳಿಗೂ ವಿಸ್ತರಿಸಲಾಗಿದೆ. ಇಂದಿನಿಂದ ರಾಜ್ಯದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿರುವ 153 ಅಂಗವಿಕಲ ಮಕ್ಕಳ ಶಾಲೆಗಳಿಗೆ ಕ್ಷೀರಭಾಗ್ಯ ಯೋಜನೆ ವಿಸ್ತರಿಸಲಾಗಿದೆ. 153 ಶಾಲೆಗಳ 10,567 ಅಂಗವಿಕಲ ಮಕ್ಕಳು ಬಿಸಿಹಾಲು ಪಡೆಯಲಿದ್ದಾರೆ. ಈಗಾಗಲೇ ರಾಜ್ಯದಲ್ಲಿ 58.30 ಲಕ್ಷ ಮಕ್ಕಳಿಗೆ ಬಿಸಿ ಹಾಲು ನೀಡಲಾಗುತ್ತಿದೆ ಎಂದು ಕುಮಾರಸ್ವಾಮಿ ತಿಳಿಸಿದರು.


ತ್ರಿವರ್ಣ ಧ್ವಜ ಹಾರಿಸಿದ ಸಿಎಂ 

ಕಳೆದ ವರ್ಷ ಪ್ರತ್ಯೇಕ ನಾಡಧ್ವಜದ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಈ ಬಾರಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ತ್ರಿವರ್ಣ ಧ್ವಜವನ್ನು ಆರೋಹಣ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವಕ್ಕೆ ಚಾಲನೆ ನೀಡಿದರು. ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿಅವರು ಹಳದಿ ಮತ್ತು ಕೆಂಪು ಬಣ್ಣದ ಕನ್ನಡ ಧ್ವಜವನ್ನು ಆರೋಹಣ ಮಾಡಿದರು.