ಪಾಟ್ನಾ:  ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು  ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಇಂದು ಬೆಳಗ್ಗೆ ಭೇಟಿ ಮಾಡಿದ್ದು, 2019ರ ಲೋಕಸಭಾ ಚುನಾವಣೆ ಸಂಬಂಧ ಚರ್ಚೆ ನಡೆಸಿದ್ದಾರೆ.

ಅಲ್ಲದೇ ಈ ವೇಳೆ ಬಿಜೆಪಿ ಮುಖಂಡ ಹಾಗೂ ಬಿಹಾರ ಉಪ ಮುಖ್ಯಮಂತ್ರಿ  ಸುಶೀಲ್ ಕುಮಾರ್ ಮೋದಿ ಅವರೂ ಕೂಡ ಹಾಜರಿದ್ದು, ಸೀಟುಗಳ ಹಂಚಿಕೆ ಕುರಿತಂತೆ ಮಾತುಕತೆ ನಡೆಸಲಾಗಿದೆ. 

ಕಳೆದ ಅನೇಕ ದಿನಗಳಿಂದಲೂ  ಕೂಡ  ಬಿಜೆಪಿ ಹಾಗೂ ಜೆಡಿಯು ನಡುವೆ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಕುರಿತಂತೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎನ್ನಲಾಗಿತ್ತು.  ಕಳೆದ ಕೆಲ ದಿನಗಳ ಹಿಂದೆ ಜೆಡಿಯು ಮುಖಂಡರು 22ಕ್ಕಿಂತ ಹೆಚ್ಚಿನ ಸೀಟುಗಳನ್ನು ಬಿಟ್ಟುಕೊಡುವುದಿಲ್ಲ ಎಂದು ಕೂಡ ಹೇಳಿದ್ದರು.

ಆದರೆ ಭಾನುವಾರ ಸಭೆ ನಡೆಸಿದ ಜೆಡಿಯು ಮುಖಂಡರು ಬಿಜೆಪಿಯೊಂದಿಗೆ ಸೇರಿ ಮೈತ್ರಿಯಾಗಿ  ಚುನಾವಣೆ ಎದುರಿಸುವುದನ್ನು ಖಚಿತ ಪಡಿಸಿದ್ದರು. ಅಲ್ಲದೇ ಇದೀಗ ಜೆಡಿಯು ಮುಖಂಡರನ್ನು ಅಮಿತ್ ಶಾ ಭೇಟಿ ಮಾಡಿ ಮೈತ್ರಿಯಾಗಿ ಚುನಾವಣೆ ಎದುರಿಸುವ ಸಂಬಂಧವಾಗಿ  ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.