ಮೀಸಲಾತಿ ಸೌಲಭ್ಯದಿಂದ ದೂರವಿರುವ ಬ್ರಾಹ್ಮಣರು, ವೈಶ್ಯರು ಸೇರಿದಂತೆ ವಿವಿಧ ಮೇಲ್ಜಾತಿಗಳ ಬಡವರಿಗೂ ಮೀಸಲು ಸೌಲಭ್ಯ ಒದಗಿಸುವ ಕುರಿತು ಸ್ಥೂಲ ಚಿಂತನೆಯೊಂದನ್ನು ಸರ್ಕಾರ ಹೊಂದಿದೆ. ಆದರೆ, ಜಾತಿ ಸಮೀಕ್ಷೆಯ ನಂತರ ಈ ಬಗ್ಗೆ ಖಚಿತ ನಿರ್ಧಾರವಾಗಲಿದೆ.

ಬೆಂಗಳೂರು (ಜೂ.06): ಮೀಸಲಾತಿ ಸೌಲಭ್ಯದಿಂದ ದೂರವಿರುವ ಬ್ರಾಹ್ಮಣರು, ವೈಶ್ಯರು ಸೇರಿದಂತೆ ವಿವಿಧ ಮೇಲ್ಜಾತಿಗಳ ಬಡವರಿಗೂ ಮೀಸಲು ಸೌಲಭ್ಯ ಒದಗಿಸುವ ಕುರಿತು ಸ್ಥೂಲ ಚಿಂತನೆಯೊಂದನ್ನು ಸರ್ಕಾರ ಹೊಂದಿದೆ. ಆದರೆ, ಜಾತಿ ಸಮೀಕ್ಷೆಯ ನಂತರ ಈ ಬಗ್ಗೆ ಖಚಿತ ನಿರ್ಧಾರವಾಗಲಿದೆ.
ರಾಜ್ಯದಲ್ಲಿ ಅಹಿಂದ ಮಾತ್ರವಲ್ಲದೆ ಮೇಲ್ವರ್ಗಗಳಾದ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳೂ ಮೀಸಲು ಸೌಲಭ್ಯ ಅನುಭವಿಸುತ್ತಿವೆ. ಆದರೆ ಬ್ರಾಹ್ಮಣ ಮತ್ತು ವೈಶ್ಯ ಸೇರಿದಂತೆ ಕೆಲವೇ ಕೆಲವು ಜಾತಿಗಳು ಮಾತ್ರ ಮೀಸಲು ಸೌಲಭ್ಯದಿಂದ ದೂರ ಉಳಿದಿವೆ. ಈಗ ಅವುಗಳಿಗೂ ಯಾವುದಾದರೂ ರೀತಿಯಲ್ಲಿ ಮೀಸಲು ಸೌಲಭ್ಯ ನೀಡಿದರೆ ಅವರನ್ನೂ ಕಾಂಗ್ರೆಸ್ ಪರವಾಗಿ ಸೆಳೆದಂತಾಗುತ್ತದೆ. ಹಾಗೆಯೇ ಇದು ದೇಶದಲ್ಲೇ ಕ್ರಾಂತಿ ಎನ್ನುವ ನೀತಿಯಾಗುತ್ತದೆ. ಇದನ್ನೇಕೆ ಪ್ರಯೋಗಿಸಬಾರದು ಎನ್ನುವ ಚಿಂತನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಂದಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿ ಬಂದ ನಂತರ ನಿರ್ಧರಿಸಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ. ಏಕೆಂದರೆ, ಮೊದಲಿಗೆ ವರದಿಯನ್ನು ಬಿಡುಗಡೆ ಮಾಡಬೇಕಿದೆ. ಅದರಲ್ಲಿ ಯಾವ ಜನಾಂಗ ಎಷ್ಟು ಸಂಖ್ಯೆಯಲ್ಲಿದೆ, ಅವುಗಳ ಸ್ಥಿತಿ ಹೇಗಿದೆ ಎನ್ನುವುದನ್ನು ಆ ಸಮುದಾಯಗಳಿಗೆ ಅರ್ಥ ಮಾಡಿಸಬೇಕಿದೆ. ಆನಂತರ ಆ ಜನಾಂಗಗಳು ಪ್ರತಿಕ್ರಿಯಿಸುವ ರೀತಿಯನ್ನೂ ಸರ್ಕಾರ ಗಮನಿಸಬೇಕಿದೆ. ಆದ್ದರಿಂದ ಜಾತಿ ಗಣತಿ ವರದಿ ಬಿಡುಗಡೆ ನಂತರ ಇದಕ್ಕೊಂದು ಸ್ಪಷ್ಟ ರೂಪ ನೀಡಿ ಸೂಕ್ತ ಸಮಯದಲ್ಲಿ ನಿರ್ಧಾರ ಪ್ರಕಟಿಸಲು ಸಿದ್ದರಾಮಯ್ಯ ಆಲೋಚಿಸಿದ್ದಾರೆ ಎನ್ನಲಾಗಿದೆ. ಆದರೆ, ಇದು ಇನ್ನೂ ಪ್ರಾಥಮಿಕ ಹಂತದಲ್ಲಿಯೇ ಇದೆ.