ಉಡುಪಿ: ರಾಜ್ಯದ ಹಾಲಿ ಸಂಸದರೆಲ್ಲರಿಗೂ ಈ ಬಾರಿ ಟಿಕೆಟ್‌ ಕೊಡುವುದಾಗಿ ಪಕ್ಷದ ರಾಷ್ಟ್ರೀಯ ನಾಯಕರು ತಿಳಿಸಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದು ಖಚಿತ ಎಂದು ಪರೋಕ್ಷವಾಗಿ ತಿಳಿಸಿದರು.

ಶುಕ್ರವಾರ ನಗರದಲ್ಲಿ ತಮ್ಮ ವರ್ಷಗಳ ಸಾಧನೆಯ ವರದಿಯನ್ನು ಬಿಡುಗಡೆ ಮಾಡಿದ ಅವರು, ಯಾರಿಗೆ ಟಿಕೆಟ್‌ ನೀಡಬೇಕು ಎನ್ನುವುದನ್ನು ಪಕ್ಷದ ಸಂಸದೀಯ ಮಂಡಳಿಯೇ ನಿರ್ಧರಿಸುತ್ತದೆ. 2-3 ದಿನಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದೆ ಎಂದು ಹೇಳಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಶೋಭಾ ಸ್ಪರ್ಧೆಗೆ ಪಕ್ಷದಲ್ಲಿಯೇ ವಿರೋಧ ಇರುವ ಬಗ್ಗೆ ಕೇಳಲಾದ ಪ್ರಶ್ನೆಗೆ, ನಾನು ವಿರೋಧಗಳ ಮಧ್ಯೆಯೇ ರಾಜಕೀಯದಲ್ಲಿ ಬೆಳೆದು ಬಂದವಳು. ಈಗಲೂ ನನ್ನನ್ನು ಕೆಲವರು ವಿರೋಧ ಮಾಡ್ತಾ ಇದ್ದಾರೆ. ಆದರೆ ಅವರಾರ‍ಯರೂ ಪಕ್ಷದ ಕಾರ್ಯಕರ್ತರೇ ಅಲ್ಲ ಎಂದರು.

ಉಡುಪಿ-ಚಿಕ್ಕಮಗಳೂರು ಸುಲಭವಾಗಿ ಬಿಜೆಪಿ ಗೆಲ್ಲುವ ಕ್ಷೇತ್ರವಾದ್ದರಿಂದ ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆ ಸಹಜವಾಗಿಯೇ ಹೆಚ್ಚಿದೆ. ಆದ್ದರಿಂದ ಕೆಲವರು ತಮ್ಮ ಬಗ್ಗೆ ದೂರು ಸಲ್ಲಿಸಿದ್ದಾರೆ. ಆದರೆ ಪಕ್ಷದ ವರಿಷ್ಠರು ಎಲ್ಲರನ್ನೂ ತುಲನೆ ಮಾಡಿಯೇ ಟಿಕೆಟ್‌ ನೀಡುತ್ತಾರೆ. ಬಿಜೆಪಿಯ ವರಿಷ್ಠರ ನಿರ್ಧಾರದಲ್ಲಿ ಯಾರಿಗೂ ಮೂಗು ತೂರಿಸುವ ಅವಕಾಶ ಇಲ್ಲ. ಆದ್ದರಿಂದ ಯಾರು ದೂರು ಕೊಟ್ಟರೂ ಏನು ಪ್ರಯೋಜನವಿಲ್ಲ ಎಂದು ತಮ್ಮ ವಿರೋಧಿಗಳಿಗೆ ತಿರುಗೇಟು ನೀಡಿದರು.