ಓಲಾ,ಉಬರ್ ಸೇವೆಗೆ ಕಾರು ಖರೀದಿಸಿದವರಿಗೆ ಡೌನ್ ಪೇಮೆಂಟ್ ಸರ್ಕಾರದಿಂದಲೇ ಪಾವತಿ ಮಾಡಲಾಗುವುದು ಎಂದು ಪ್ರಣಾಳಿಕೆ ಘೋಷಿಸಲಾಗಿದೆ.
ಲೂಧಿಯಾನ(ಜ.25): ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಒಬ್ಬರನ್ನೊಬ್ಬರು ಮೀರಿಸುವಂತೆ ಚುನಾವಣಾ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಅದಕ್ಕೆ ಹೊಸ ಸೇರ್ಪಡೆಯೆಂಬಂತೆ, ಪಂಜಾಬ್'ನ ಆಡಳಿತಾರೂಢ ಶಿರೋಮಣಿ ಅಕಾಲಿ ದಳವು, ಪಕ್ಷ ಅಧಿಕಾರಕ್ಕೆ ಬಂದರೆ ಅಮೆರಿಕ ಮತ್ತು ಕೆನಡಾದಲ್ಲಿ ಭಾರಿ ಪ್ರಮಾಣದ ಭೂಮಿ ಖರೀದಿಸಿ ವಲಸೆ ಹೋಗುವ ಪಂಜಾಬಿಗಳಿಗೆ ಅದನ್ನು ನೀಡುವುದಾಗಿ ಘೋಷಿಸಿದೆ.
ಪಂಜಾಬ್ ಸರ್ಕಾರವು ಅಮೆರಿಕ ಮತ್ತು ಕೆನಡಾದಲ್ಲಿ ಒಂದು ಲಕ್ಷ ಎಕರೆ ಭೂಮಿ ಖರೀದಿಸಲಿದೆ. ರೈತರಿಗೆ ಹಾಗೂ ಪಂಜಾಬ್'ನಿಂದ ವಲಸೆ ಹೋಗ ಬಯಸುವವರಿಗೆ ಅಲ್ಲಿ ನೆಲೆಸಲು ಇದರಿಂದ ನೆರವಾಗಲಿದೆ. ಜತೆಗೆ, ಆ ದೇಶಗಳಲ್ಲಿ ಕಾಯಂ ನಿವಾಸಿ ಸ್ಥಾನಮಾನವನ್ನೂ ಇದು ಒದಗಿಸಿಕೊಡಲಿದೆ ಎಂದು ಪ್ರಣಾಳಿಕೆ ಬಿಡುಗಡೆ ವೇಳೆ ಪಂಜಾಬ್ ಉಪಮುಖ್ಯಮಂತ್ರಿ ಸುಖ್‌ಬೀರ್ ಸಿಂಗ್ ಬಾದಲ್ ಹೇಳಿದ್ದಾರೆ. ಆದರೆ, ಈ ಯೋಜನೆ ಹೇಗೆ ಜಾರಿಯಾಗಲಿದೆ ಮತ್ತು ಫಲಾನುಭವಿಗಳನ್ನು ಹೇಗೆ ಆಯ್ಕೆ ಮಾಡಲಾಗುವುದು ಎಂಬ ಮಾಹಿತಿಯನ್ನು ಅವರು ಬಹಿರಂಗಪಡಿಸಿಲ್ಲ.
ಉಳಿದಂತೆ ಮದ್ಯವ್ಯಸನ ಮುಕ್ತರಾದವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ, ಸಣ್ಣ ರೈತರ ಸಾಲ ಮನ್ನಾ, ಓಲಾ,ಉಬರ್ ಸೇವೆಗೆ ಕಾರು ಖರೀದಿಸಿದವರಿಗೆ ಡೌನ್ ಪೇಮೆಂಟ್ ಸರ್ಕಾರದಿಂದಲೇ ಪಾವತಿ ಮಾಡಲಾಗುವುದು ಎಂದು ಪ್ರಣಾಳಿಕೆ ಘೋಷಿಸಲಾಗಿದೆ.
