ವಿಮಾನ ಚಾಲನೆ ಮಾಡದ್ದಕ್ಕೆ ನೀಡಲಾಗದ ಭತ್ಯೆ ನೀಡದಿದ್ದರೆ, ಕಾರ್ಯ ಸ್ಥಗಿತಗೊಳಿಸುವುದಾಗಿ ಏರ್ ಇಂಡಿಯಾ ಪೈಲಟ್‌ಗಳ ಬೆದರಿಸಿದ್ದು, ಈಗಾಗಲೇ ನಷ್ಟದಲ್ಲಿರುವ ಸಂಸ್ಥಗೆ ಮತ್ತೊಂದು ಸಂಕಟ ಎದುರಾಗಿದೆ.
ಮುಂಬೈ: ಈಗಾಗಲೇ ನಷ್ಟದ ಸುಳಿಗೆ ಸಿಲುಕಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ ಮತ್ತೊಂದು ಸಂಕಷ್ಟಎದುರಾಗಿದೆ. ತಮ್ಮ ಫ್ಲೈಯಿಂಗ್(ವಿಮಾನ ಚಾಲನೆ ಮಾಡಿದ್ದಕ್ಕೆ ನೀಡಲಾಗುವ ಭತ್ಯೆ) ಭತ್ಯೆಯನ್ನು ತತ್‌ಕ್ಷಣವೇ ಬಿಡುಗಡೆ ಮಾಡದಿದ್ದರೆ, ಕಾರ್ಯಾಚರಣೆಯನ್ನು ನಿಲ್ಲಿಸಬೇಕಾಗುತ್ತದೆ ಎಂದು ಏರ್ ಇಂಡಿಯಾದ ಕೆಲ ಪೈಲಟ್‌ಗಳು ಬೆದರಿಕೆ ಹಾಕಿದ್ದಾರೆ.
‘ಏರ್ ಇಂಡಿಯಾದ ಇತರ ನೌಕರರಿಗೆ ವೇತನ ಮತ್ತು ಇತರ ಸೌಲಭ್ಯಗಳನ್ನು ನೀಡಲಾಗಿದೆ. ಆದರೆ, ವಿಮಾನದ ಕ್ಯಾಬಿನ್ ಸಿಬ್ಬಂದಿ ಮತ್ತು ಪೈಲಟ್‌ಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಫ್ಲೈಯಿಂಗ್ ಭತ್ಯೆಯನ್ನು ತತ್‌ಕ್ಷಣವೇ ಬಿಡುಗಡೆ ಮಾಡದಿದ್ದಲ್ಲಿ, ವಿಮಾನ ಚಾಲನೆ ಕೆಲಸಕ್ಕೆ ನಾವು ಗೈರು ಆಗಬೇಕಾಗುತ್ತದೆ ಎಂಬುದನ್ನು ಈ ಮುಖೇನ ತಿಳಿಸಲು ಇಚ್ಚಿಸುತ್ತೇವೆ,’ ಎಂದು ಭಾರತೀಯ ವಾಣಿಜ್ಯ ಪೈಲಟ್‌ಗಳ ಸಂಘಟನೆ(ಐಸಿಪಿಎ) ಏರ್ ಇಂಡಿಯಾದ ಹಣಕಾಸು ನಿರ್ದೇಶಕರಿಗೆ ಎಚ್ಚರಿಕೆ ನೀಡಿದೆ.
ಪೈಲಟ್‌ಗಳಿಗೆ ಸಾಮಾನ್ಯವಾಗಿ ಎರಡು ತಿಂಗಳಿಗೊಮ್ಮೆ ಫ್ಲೈಯಿಂಗ್ ಭತ್ಯೆ ನೀಡಲಾಗುತ್ತದೆ. ಆದರೆ, ಇದುವರೆಗೂ ಏರ್ ಇಂಡಿಯಾ ಪಾವತಿ ಮಾಡಿಲ್ಲ ಎಂಬುದು ಆರೋಪ.
