ಅಮ್ಮ ಗಗನಸಖಿ, ಮಗಳು ವಿಮಾನದ ಪೈಲೆಟ್! ಗಗನಸಖಿಯಾಗಿ ನಿವೃತ್ತಿಗೊಂಡ ಪೂಜಾ ಚಿಂಚನಕರ್! ಏರ್ ಇಂಡಿಯಾದಲ್ಲಿ 38 ವರ್ಷ ಸೇವೆ! ಮುಂಬೈ-ಬೆಂಗಳೂರು-ಮುಂಬೈ ವಿಮಾನ! ಮಗಳು ಅಶ್ರಿತಾ ಅದೇ ವಿಮಾನದ ಪೈಲೆಟ್
ಮುಂಬೈ(ಆ.1): ಏರ್ ಇಂಡಿಯಾದಲ್ಲಿ 38 ವರ್ಷ ಸೇವೆ ಸಲ್ಲಿಸಿದ ಪೂಜಾ ಚಿಂಚನಕರ್ ಎಂಬ ಗಗನಸಖಿ ಕಳೆದ ಮಂಗಳವಾರ ಸೇವೆಯಿಂದ ನಿವೃತ್ತರಾದರು. ಅರೆ! ಗಗನಸಖಿಯೊಬ್ಬರು ನಿವೃತ್ತಿಯಾದರೆ ಅದು ಸುದ್ದಿಯೇ ಅಂತಾ ಹುಬ್ಬೇರಿಸಬೇಡಿ. ಪೂಜಾ ಚಿಂಚಾಕರ್ ನಿಜಕ್ಕೂ ಏರ್ ಇಂಡಿಯಾದ ಅತ್ಯಂತ ಗೌರವಾನ್ವಿತ ಗಗನಸಖಿ ಎಂಬ ಖ್ಯಾತಿ ಗಳಿಸಿದವರು.
ಇನ್ನು ಪೂಜಾ ಗಗನಸಖಿ ಹುದ್ದೆಯಿಂದ ನಿವೃತ್ತಿಯಾದ ದಿನ ಕರ್ತವ್ಯನಿರತರಾಗಿದ್ದ ಮುಂಬೈ-ಬೆಂಗಳೂರು-ಮುಂಬೈ ವಿಮಾನವನ್ನು ಅವರ ಮಗಳು ಅಶ್ರಿತಾ ಚಾಲನೆ ಮಾಡುತ್ತಿದ್ದರು ಎಂಬುದು ಮತ್ತೊಂದು ವಿಶೇಷ. ಅಂದರೆ ಪೂಜಾ ಗಗನಸಖಿಯಾಗಿದ್ದ ವಿಮಾನದ ಪೈಲೆಟ್ ಅವರ ಮಗಳು ಅಶ್ರಿತಾ.
ಈ ಕುರಿತು ಟ್ವೀಟ್ ಮಾಡಿರುವ ಅಶ್ರಿತಾ, ತಾನು ನಿವೃತ್ತಿಯಾಗುವ ದಿನ ತನ್ನ ವಿಮಾನದ ಪೈಲೆಟ್ ತಮ್ಮ ಮಗಳಾಗಿರಬೇಕು ಎಂಬುದು ಅಮ್ಮ ಪೂಜಾ ಅವರ ಕನಸಾಗಿತ್ತು. ಅದರಂತೆ ತಾನು ಅಮ್ಮನ ಕನಸನ್ನು ಈಡೇರಿಸಿದ್ದಾಗಿ ತಿಳಿಸಿದ್ದಾರೆ.
ಪೂಜಾ ಮಂಗಳವಾರ ಮುಂಬೈ-ಬೆಂಗಳೂರು-ಮುಂಬೈ ವಿಮಾನದಲ್ಲಿ ಕೆಲಸ ಮಾಡುತ್ತಿದ್ದರು. ಆ ವಿಮಾನ ಲ್ಯಾಂಡ್ ಆಗುವ 10 ನಿಮಿಷಕ್ಕೂ ಮೊದಲು ಪೂಜಾ ನಿವೃತ್ತರಾಗುತ್ತಿರುವ ವಿಚಾರವನ್ನು ಮೈಕ್ನಲ್ಲಿ ತಿಳಿಸಲಾಯಿತು. ಪ್ರಯಾಣಿಕರೂ ಸಹ ಚಪ್ಪಾಳೆ ತಟ್ಟಿ ಶುಭ ಹಾರೈಸಿದರು.
ಪೂಜಾ ಚಿಂಚನಕರ್ ಏರ್ ಇಂಡಿಯಾದಲ್ಲಿ ವೃತ್ತಿ ಪ್ರಾರಂಭಿಸಿದ್ದು 1980ರಲ್ಲಿ. ಮುಂಬೈ ವಿಮಾನದಲ್ಲಿ 1981ರಿಂದಲೂ ಏರ್ಹೋಸ್ಟೆಸ್ ಆಗಿದ್ದರು. ಅವರ ಮಗಳು ಅಶ್ರಿತಾ 2016ರಲ್ಲಿ ಸೇವೆ ಪ್ರಾರಂಭ ಮಾಡಿದ್ದರು. ಅಶ್ರಿತಾ ಮಾಸ್ ಮೀಡಿಯಾ ವಿದ್ಯಾರ್ಥಿಯಾಗಿದ್ದರು. ಒಮ್ಮೆ ವಿಮಾನಯಾನದಲ್ಲಿ ಆಸಕ್ತಿ ಇದೆಯಾ ಎಂದು ಕೇಳಿದ್ದಕ್ಕೆ ಒಪ್ಪಿಕೊಂಡು ಈ ಕೆಲಸಕ್ಕೆ ಬಂದಿದ್ದಾಳೆ ಎಂದು ಪೂಜಾ ಹೇಳಿದ್ದಾರೆ.
ನನ್ನ ನಿವೃತ್ತಿಯ ದಿನ ನೀನು ಪೈಲಟ್ ಆಗಿದ್ದ ವಿಮಾನದಲ್ಲೇ ನಾನೂ ಕೆಲಸ ಮಾಡಬೇಕು ಎಂದು ಒಮ್ಮೆ ಪೂಜಾ ಮಗಳ ಬಳಿ ಹೇಳಿಕೊಂಡಿದ್ದರು. ಅದರಂತೆ ಮಂಗಳವಾರ ಮುಂಬೈ-ಬೆಂಗಳೂರು-ಮುಂಬೈ ವಿಮಾನದಲ್ಲಿ ಆಶ್ರಿತಾ ಪೈಲಟ್ ಆಗಿದ್ದರು. ಪೂಜಾ ಏರ್ಹೋಸ್ಟೆಸ್ ಆಗಿ ತಮ್ಮ ಕೊನೇ ದಿನವನ್ನು ಮುಗಿಸುವ ಮೂಲಕ ಸ್ಮರಣೀಯವನ್ನಾಗಿಸಿಕೊಂಡರು.
