ಬೆಂಗಳೂರು, [ಏ.27]: ಇದೆ ಮೇ 19 ರಂದು ಚಿಂಚೋಳಿ ಹಾಗೂ  ಕುಂದಗೋಳ ವಿಧಾನಸಭೆ  ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನ ಘೋಷಿಸಿದೆ.

ಚಿಂಚೋಳಿ ಕ್ಷೇತ್ರದ ಟಿಕೆಟ್  ಸುಭಾಷ್ ರಾಠೋಡ್ ಅವರಿಗೆ ನೀಡಿದರೆ, ಕುಂದಗೋಳ ಟಿಕೆಟ್ ಅನ್ನು ದಿವಂಗತ ಶಿವಳ್ಳಿ ಪತ್ನಿ ಕುಸುಮಾ ಅವರಿಗೆ  ನೀಡಿ ಇಂದು [ಶನಿವಾರ] ಎಐಸಿಸಿ ಆದೇಶ ಹೊರಡಿಸಿದೆ.

ಚಿಂಚೋಳಿ, ಕುಂದಗೋಳ ಉಪಚುನಾವಣೆ ಗೆಲುವಿಗಾಗಿ ‘ಕೈ’ ಉಸ್ತುವಾರಿಗಳ ನೇಮಕ

ಉಮೇಶ್ ರಾಜೀನಾಮೆಯಿಂದ ತೆರವಾದ ಕಲಬುರಗಿ ಜಿಲ್ಲೆ ಚಿಂಚೋಳಿ ಹಾಗೂ ಸಿ.ಎಸ್ .ಶಿವಳ್ಳಿ ನಿಧನದಿಂದ ತೆರವಾಗಿರುವ ಧಾರವಾಡ ಜಿಲ್ಲೆ ಕುಂದಗೋಳ ವಿಧಾನಸಭೆ  ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. 

ಈ ಉಪಚುನಾವಣೆಗೂ ಮೈತ್ರಿ ಮುಂದುವರಿಸಿರುವ ಕಾಂಗ್ರೆಸ್​ ಹಾಗೂ ಜೆಡಿಎಸ್​​ ತಮ್ಮ ಅಭ್ಯರ್ಥಿಯ ಗೆಲುವಿಗಾಗಿ ರಣತಂತ್ರವನ್ನ ರೂಪಿಸಿದ್ದಾರೆ. ಅದರಂತೆ ಇಂದು [ಶನಿವಾರ] ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹಾಗೂ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಚರ್ಚೆ ನಡೆಸಿದರು.

ಇನ್ನು ಬಿಜೆಪಿಯಿಂದ ಚಿಂಚೋಳಿ ಕ್ಷೇತ್ರಕ್ಕೆ ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧವ್ ಅವರನ್ನು ಕಣಕ್ಕಿಳಿಸುವುದು ಪಕ್ಕಾ ಆಗಿದ್ದರೆ, ಕುಂದಗೋಳದಿಂದ ಚಿಕ್ಕನಗೌಡ ಅವರಿಗೆ ಟಿಕೆಟ್ ನೀಡಲು ತೀರ್ಮಾನಿಸಿದೆ. ಆದ್ರೆ ಅಧಿಕೃತ ಪಟ್ಟಿ ಪ್ರಕಟವಾಗಿಲ್ಲ.

 ಚಿಂಚೋಳಿ ಕ್ಷೇತ್ರಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳೆರಡೂ ಒಂದೇ ಸಮುದಾಯಕ್ಕೆ ಸೇರಿದ ನಾಯಕರಿಗೆ ಮಣೆ ಹಾಕಿವೆ. ಇದನ್ನು ಅವಲೋಕಿಸಿದರೆ ಕ್ಷೇತ್ರದಲ್ಲಿ ಜಾತಿ ಎಷ್ಟು ಪರಿಣಾಮ ಬೀರಿದೆ ಎನ್ನುವುದನ್ನು ನಿರೂಪಿಸುತ್ತದೆ. ಇದೇ ಮೇ 19ರಂದು ಉಪಚುನಾವಣೆ ನಡೆಯಲಿದ್ದು, ಮೇ 23ಕ್ಕೆ ಫಲಿತಾಂಶ ಹೊರಬೀಳಲಿದೆ.