ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪಕ್ಷದಲ್ಲಿ ಹಲವಾರು ಬದಲಾವಣೆಗಳನ್ನು ತರುತ್ತಿರುವ ರಾಹುಲ್‌ ಗಾಂಧಿ, ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಅಹಮದ್‌ ಪಟೇಲ್‌ ಅವರನ್ನು ಕಾಂಗ್ರೆಸ್ಸಿನ ಖಜಾಂಚಿ ಸ್ಥಾನಕ್ಕೆ ನೇಮಕ ಮಾಡಿದ್ದಾರೆ.

ಈವರೆಗೂ ಖಜಾಂಚಿ ಸ್ಥಾನದಲ್ಲಿದ್ದ ಹಿರಿಯ ನಾಯಕ ಮೋತಿಲಾಲ್‌ ವೋರಾ ಅವರನ್ನು ಆಡಳಿತ ಪ್ರಧಾನ ಕಾರ್ಯದರ್ಶಿ ಎಂಬ ಹೊಸ ಹುದ್ದೆ ಸೃಷ್ಟಿಸಿ ನಿಯುಕ್ತಿಗೊಳಿಸಿದ್ದಾರೆ. ಅಹಮದ್‌ ಪಟೇಲ್‌ ಅವರಿಗೆ 69ನೇ ಹುಟ್ಟುಹಬ್ಬದ ದಿನದಂದೇ ಹೊಸ ಹುದ್ದೆ ಸಿಕ್ಕಿದೆ. 18 ವರ್ಷಗಳ ಬಳಿಕ ಅವರು ಖಜಾಂಚಿ ಸ್ಥಾನಕ್ಕೆ ಮರಳಿದ್ದಾರೆ. 1996ರಿಂದ 2000ನೇ ಇಸ್ವಿವರೆಗೆ ಅವರು ಇದೇ ಹೊಣೆಗಾರಿಕೆ ನಿರ್ವಹಿಸಿದ್ದರು.

ಇದೇ ವೇಳೆ, ಕಾಂಗ್ರೆಸ್ಸಿನ ವಿದೇಶಾಂಗ ವ್ಯವಹಾರಗಳ ವಿಭಾಗದ ಮುಖ್ಯಸ್ಥ ಹುದ್ದೆಯಿಂದ ಕರಣ್‌ ಸಿಂಗ್‌ ಅವರನ್ನು ವಿಮುಕ್ತಿಗೊಳಿಸಿ ಆ ಸ್ಥಾನಕ್ಕೆ ಕೇಂದ್ರದ ಮಾಜಿ ಸಚಿವ ಆನಂದ ಶರ್ಮಾ ಅವರನ್ನು ನೇಮಕ ಮಾಡಲಾಗಿದೆ. ಮತ್ತೊಂದೆಡೆ, ಪಕ್ಷದ ಪರಮೋಚ್ಚ ನೀತಿ ನಿರೂಪಣಾ ಸಂಸ್ಥೆಯಾದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ)ಗೆ ಮಾಜಿ ಸ್ಪೀಕರ್‌ ಮೀರಾ ಕುಮಾರ್‌ ಅವರನ್ನು ಕಾಯಂ ಆಹ್ವಾನಿತರನ್ನಾಗಿ ನೇಮಕ ಮಾಡಲಾಗಿದೆ.

ಕಳೆದ ತಿಂಗಳಷ್ಟೇ ರಾಹುಲ್‌ ಗಾಂಧಿ ಅವರು ಸಿಡಬ್ಲ್ಯುಸಿಯನ್ನು ಪುನಾರಚನೆ ಮಾಡಿದ್ದರು. ದಿಗ್ವಿಜಯ ಸಿಂಗ್‌, ಸುಶೀಲ್‌ ಕುಮಾರ್‌ ಶಿಂಧೆ, ಜನಾರ್ದನ ದ್ವಿವೇದಿ ಹಾಗೂ ಸಿ.ಪಿ. ಜೋಶಿ ಅವರಂತಹ ನಾಯಕರನ್ನು ಕೈಬಿಟ್ಟು, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಹಲವು ಮಂದಿಗೆ ಅವಕಾಶ ಕಲ್ಪಿಸಿದ್ದರು.