ನವದೆಹಲಿ :  ಸುಮಾರು 3,600 ಕೋಟಿ ರುಪಾಯಿ ಮೌಲ್ಯದ ‘ಅಗಸ್ಟಾವೆಸ್ಟ್‌ಲ್ಯಾಂಡ್‌’ ಅತಿಗಣ್ಯರ ಹೆಲಿಕಾಪ್ಟರ್‌ ಖರೀದಿ ಹಗರಣದ ಮಧ್ಯವರ್ತಿ, ಬ್ರಿಟಿಷ್‌ ನಾಗರಿಕ ಕ್ರಿಸ್ಟಿಯನ್‌ ಮಿಶೆಲ್‌ನನ್ನು ಸಂಯುಕ್ತ ಅರಬ್‌ ಸಂಸ್ಥಾನ (ಯುಎಇ) ಸರ್ಕಾರ ಮಂಗಳವಾರ ಸಂಜೆ ಗಡೀಪಾರು ಮಾಡಿದೆ. ರಾತ್ರಿಯೇ ಮಿಶೆಲ್‌ ಭಾರತಕ್ಕೆ ಆಗಮಿಸಿದ್ದು, ಆತನನ್ನು ಸಿಬಿಐ ಬಂಧಿಸಿದೆ.

ಮಿಶೆಲ್‌ ಗಡೀಪಾರಿನಿಂದಾಗಿ ಹಗರಣಕ್ಕೆ ಸಂಬಂಧಿಸಿದ ಮಹತ್ವದ ವಿಷಯಗಳು ತಿಳಿದುಬರುವ ಸಾಧ್ಯತೆ ಇದೆ. ಇದು ಮೋದಿ ಸರ್ಕಾರಕ್ಕೆ ಸಿಕ್ಕ ದೊಡ್ಡ ಯಶಸ್ಸು ಎಂದು ಹೇಳಲಾಗುತ್ತಿದೆ.

ದುಬೈನಲ್ಲಿ ನೆಲೆಸಿದ್ದ ಮಿಶೆಲ್‌ ಗಡೀಪಾರಿಗೆ ಭಾರತ ಸರ್ಕಾರ ಕೋರಿಕೆ ಸಲ್ಲಿಸಿತ್ತು. ಈತನ ವಿರುದ್ಧ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಡಿಸ್‌ ಕೂಡ ಜಾರಿಯಾಗಿತ್ತು. ಇದರ ವಿರುದ್ಧ ಮಿಶೆಲ್‌ ದುಬೈ ಕೋರ್ಟ್‌ ಮೊರೆ ಹೋಗಿದ್ದ. ಆದರೆ ಆತನ ಕೋರಿಕೆಯನ್ನು ಕೋರ್ಟ್‌ ತಿರಸ್ಕರಿಸಿದ ಹಿನ್ನೆಲೆಯಲ್ಲಿ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆತನನ್ನು ಗಡೀಪಾರು ಮಾಡಲಾಯಿತು. ಈತನನ್ನು ಕರೆತರಲು ಸಿಬಿಐನ ಜಂಟಿ ನಿರ್ದೆಶಕ ಸಾಯಿ ಮನೋಹರ ನೇತೃತ್ವದ ತಂಡ ದುಬೈಗೆ ತೆರಳಿತ್ತು.

ಮಿಶೆಲ್‌ ಗಡಿಪಾರು ಬೆನ್ನಲ್ಲೇ ಹೇಳಿಕೆ ಬಿಡುಗಡೆ ಮಾಡಿರುವ ಸಿಬಿಐ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌ ಅವರ ನೇತೃತ್ವದಲ್ಲಿ ಮಾರ್ಗದರ್ಶನದಲ್ಲಿ ಇಡೀ ಗಡಿಪಾರು ಪ್ರಕ್ರಿಯೆಯನ್ನು ನಡೆಸಲಾಗಿತ್ತು ಎಂದು ಹೇಳಿದೆ.

ಆರೋಪವೇನು?:  ಯುಪಿಎ ಸರ್ಕಾರದ ಅವಧಿಯಲ್ಲಿ, ಇಟಲಿ ಮೂಲದ ಫಿನ್‌ಮೆಕ್ಯಾನಿಕಾ ಎಂಬ ಕಂಪನಿ ಉತ್ಪಾದಿಸುತ್ತಿದ್ದ ‘ಅಗಸ್ಟಾವೆಸ್ಟ್‌ಲ್ಯಾಂಡ್‌’ ಹೆಸರಿನ 12 ಹೆಲಿಕಾಪ್ಟರ್‌ಗಳನ್ನು ತರಿಸಿಕೊಳ್ಳಲು ನಿರ್ಧರಿಸಲಾಗಿತ್ತು. ಇವು ರಾಷ್ಟ್ರಪತಿ, ಪ್ರಧಾನಮಂತ್ರಿಗಳಂಥ ಗಣ್ಯರಿಗೆ ಸಂಚರಿಸಲು ಇರುವ ಹೆಲಿಕಾಪ್ಟರ್‌ಗಳು.

ಆದರೆ, ಫಿನ್‌ಮೆಕ್ಯಾನಿಕಾ ಕಂಪನಿಯು ಭಾರತದಲ್ಲಿ ಕರೆಯಲಾಗಿದ್ದ ಟೆಂಡರ್‌ ತನಗೇ ಬರಬೇಕು ಎಂದು ಭಾರತದಲ್ಲಿನ ಅಧಿಕಾರಿಗಳಿಗೆ ಲಂಚ ಸಂದಾಯ ಮಾಡಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಡೀಲ್‌ ಕುದುರಿಸಲು ಮಧ್ಯವರ್ತಿಯಾಗಿ ಮಿಶೆಲ್‌ ಕಾರ್ಯನಿರ್ವಹಿಸಿದ್ದು, ಆತ 225 ಕೋಟಿ ರುಪಾಯಿ ಲಂಚದ ಹಣವನ್ನು ಫಿನ್‌ಮೆಕ್ಯಾನಿಕಾದಿಂದ ಪಡೆದಿದ್ದ ಎಂದು ಜಾರಿ ನಿರ್ದೇಶನಾಲಯದ ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

ಈ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅಗಸ್ಟಾಒಪ್ಪಂದವನ್ನು ನರೇಂದ್ರ ಮೋದಿ ಸರ್ಕಾರ ರದ್ದು ಮಾಡಿತ್ತು ಹಾಗೂ ಲಂಚ ಸ್ವೀಕಾರದ ಆರೋಪದಲ್ಲಿ ಅಂದಿನ ವಾಯುಪಡೆ ಮುಖ್ಯಸ್ಥ ಎಸ್‌.ಪಿ. ತ್ಯಾಗಿ ಅವರನ್ನು ಬಂಧಿಸಲಾಗಿತ್ತು.

ಏನಿದು ಹಗರಣ?

ರಾಷ್ಟ್ರಪತಿ, ಪ್ರಧಾನಿಗಳಂತಹ ಅತಿಗಣ್ಯರ ಓಡಾಟಕ್ಕೆ ಇಟಲಿಯ ಫಿನ್‌ಮೆಕ್ಯಾನಿಕಾ ಎಂಬ ಕಂಪನಿ ಉತ್ಪಾದಿಸುತ್ತಿದ್ದ ‘ಆಗಸ್ಟಾವೆಸ್ಟ್‌ಲ್ಯಾಂಡ್‌’ ಎಂಬ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ನಿರ್ಧರಿಸಿತ್ತು. 3600 ಕೋಟಿ ರು. ವೆಚ್ಚದಲ್ಲಿ 12 ಹೆಲಿಕಾಪ್ಟರ್‌ ಖರೀದಿಸಲು ನಿರ್ಧರಿಸಲಾಗಿತ್ತು. ಆದರೆ, ಈ ಖರೀದಿ ಒಪ್ಪಂದದಲ್ಲಿ ಅಕ್ರಮಗಳಾಗಿವೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಸರ್ಕಾರ ಒಡಂಬಡಿಕೆಯನ್ನು ರದ್ದು ಮಾಡಿತ್ತು.

ಮಿಶೆಲ್‌ ಯಾರು?

ಕ್ರಿಸ್ಟಿಯನ್‌ ಜೇಮ್ಸ್‌ ಮಿಶೆಲ್‌ ಈತನ ಪೂರ್ಣ ಹೆಸರು. ಬ್ರಿಟಿಷ್‌ ಪ್ರಜೆ ಈತ. ಹೆಲಿಕಾಪ್ಟರ್‌ ಡೀಲ್‌ ಮಾಡಿಸಿಕೊಡಲು ಈತ ಫಿನ್‌ಮೆಕ್ಯಾನಿಕಾ ಕಂಪನಿಯಿಂದ 225 ಕೋಟಿ ರು. ಪಡೆದಿದ್ದ ಮತ್ತು ಇದರಲ್ಲಿ ಭಾರತದ ವಾಯುಪಡೆ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರಿಗೆ ಪಾಲು ನೀಡಿದ್ದ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಈತನನ್ನು ಗಡೀಪಾರು ಮಾಡುವಂತೆ ಯುಎಇ ಸರ್ಕಾರವನ್ನು ಭಾರತ ಕೋರಿತ್ತು. ಇದೀಗ ಈತನನ್ನು ಭಾರತಕ್ಕೆ ಕರೆತರಲಾಗಿದ್ದು, ವಿಚಾರಣೆ ವೇಳೆ ದೊಡ್ಡ ದೊಡ್ಡ ಹೆಸರುಗಳನ್ನು ಬಾಯ್ಬಿಡುವ ನಿರೀಕ್ಷೆ ಇದೆ.