ಬೆಂಗಳೂರು [ಆ.15]:  ಮಹಾರಾಷ್ಟ್ರ ಮತ್ತು ಛತ್ತೀಸಗಢದಲ್ಲಿ ವಾಯುಭಾರ ಕುಸಿತದಿಂದ ಮುಂಗಾರು ಮಾರುತಗಳು ಮತ್ತಷ್ಟುಚುರುಕುಗೊಂಡ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದ ಒಟ್ಟು ಆರು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ 205 ಮಿ.ಮೀ.ಗೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿದೆ.

ಜತೆಗೆ ಬೆಳಗಾವಿ, ಮೈಸೂರು ಹಾಗೂ ಹಾಸನದಲ್ಲಿ ಮುಂದಿನ 24 ಗಂಟೆಗಳಲ್ಲಿ 115 ಮಿ.ಮೀ.ನಿಂದ 205 ಮಿ.ಮೀ.ವರೆಗೆ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿರುವುದರಿಂದ ಪ್ರವಾಹ ಪರಿಸ್ಥಿತಿ ತಗ್ಗಿರುವ ಬೆಳಗಾವಿಯ ಜನರಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ.

ಆ.16 ರಿಂದ ಆ.18 ರವರೆಗೆ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದೆ. ಉಳಿದಂತೆ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣದಿಂದ ಕೂಡಿದ ಚದುರಿದಂತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನಿನ್ನೆ ಎಲ್ಲಿ ಅತಿ ಹೆಚ್ಚು ಮಳೆ: ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಉತ್ತರಕನ್ನಡದ ಹೊನ್ನಾವರ ಮತ್ತು ಕುಮಟಾದಲ್ಲಿ ಅತಿ ಹೆಚ್ಚು 10 ಸೆಂ.ಮೀ ಮಳೆಯಾದ ವರದಿಯಾಗಿದೆ. ದಕ್ಷಿಣ ಕನ್ನಡದ ಮೂಡುಬಿದರೆ ಹಾಗೂ ಉಡುಪಿಯ ಕುಂದಾಪುರದಲ್ಲಿ ತಲಾ 9, ದಕ್ಷಿಣ ಕನ್ನಡದ ಮಂಗಳೂರು, ಉಡುಪಿಯ ಕೋಟಾ, ದಕ್ಷಿಣ ಕನ್ನಡದ ಪಣಂಬೂರು, ಉತ್ತರ ಕನ್ನಡದ ಮಂಕಿ ತಲಾ 7, ದಕ್ಷಿಣ ಕನ್ನಡದ ಮಂಗಳೂರು ವಿಮಾನ ನಿಲ್ದಾಣ, ಉತ್ತರ ಕನ್ನಡದ ಶಿರಾಲಿ 6, ದಕ್ಷಿಣ ಕನ್ನಡದ ಸುಬ್ರಹ್ಮಣ್ಯ ಮತ್ತು ಪುತ್ತೂರು, ಉಡುಪಿಯ ಸಿದ್ದಾಪುರದಲ್ಲಿ ತಲಾ 5 ಸೆಂ.ಮೀ ಮಳೆಯಾಗಿದ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.