ಪಣಜಿ[ನ.4]: ಕರ್ನಾಟಕದ ಮಹದಾಯಿ (ಕಳಸಾ-ಬಂಡೂರಿ) ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಪರಿಸರ ಸಚಿವಾಲಯ ಅನುಮತಿ ನೀಡಿಯೇ ಇಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ಹೇಳಿಕೊಂಡಿದ್ದಾರೆ.

ಸೋಮವಾರ ಈ ಸಂಬಂಧ ದಿಲ್ಲಿಗೆ ಸರ್ವಪಕ್ಷ ನಿಯೋಗವನ್ನು ಕೊಂಡೊಯ್ಯುತ್ತಿರುವ ಸಾವಂತ್‌ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕೇಂದ್ರ ಪರಿಸರ ಸಚಿವಾಲಯವು ಕರ್ನಾಟಕ ಕೈಗೆತ್ತಿಕೊಂಡಿರುವ ಯೋಜನೆಯೊಂದಕ್ಕೆ ಸಂಬಂಧಿಸಿದಂತೆ ಬರೆದ ಪತ್ರ ಅದಾಗಿತ್ತು. ಅದು ಕಳಸಾ ಬಂಡೂರಿ ಯೋಜನೆ ಕುರಿತ ಅನುಮತಿ ಪತ್ರವಲ್ಲ. ಕುಡಿವ ನೀರಿನ ಯೋಜನೆಯಾದರೆ ಅದಕ್ಕೆ ಪರಿಸರ ಪರಿಣಾಮ ಅಧ್ಯಯನ ನಡೆಸುವುದು ಅಗತ್ಯವಿಲ್ಲ ಎಂದು ಪತ್ರದಲ್ಲಿ ಬರೆಯಲಾಗಿದೆ’ ಎಂದರು.

‘ಅಲ್ಲದೆ, ಪತ್ರದಲ್ಲಿ ಪರಿಸರ ಅನುಮತಿ ನೀಡಲಾಗಿದೆ ಎಂದು ಎಲ್ಲೂ ಬರೆದಿಲ್ಲ. ಆದರೂ ಈ ಪತ್ರ ಹಿಂಪಡೆಯಿರಿ ಎಂದು ಆಗ್ರಹಿಸಿದ್ದೇವೆ’ ಎಂದು ತಿಳಿಸಿದರು.

‘ಜಾವಡೇಕರ್‌ ಅವರ ಜತೆ ಈ ಬಗ್ಗೆ ನಾನು 3 ಬಾರಿ ಮಾತಾಡಿದ್ದೇನೆ. ಅವರು ಗೋವಾ ಭಾವನೆಗಳ ಬಗ್ಗೆ ನಾನು ಸಂವೇದನೆ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ’ ಎಂದೂ ಸಾವಂತ್‌ ಹೇಳಿದರು.

ಸಿಎಂ ಮೇಲೆ ವಿಜಯ್‌ ಗರಂ:

ಸಿಎಂ ಹೇಳಿಕೆಗೆ ಗೋವಾ ಫಾರ್ವರ್ಡ್‌ ಪಕ್ಷದ ಅಧ್ಯಕ್ಷ ವಿಜಯ ಸರದೇಸಾಯಿ ಆಕ್ಷೇಪಿಸಿದ್ದಾರೆ. ‘ಹಾಗಿದ್ದರೆ ಜಾವಡೇಕರ್‌ ಅವರು ಕಳಸಾ-ಬಂಡೂರಿಗೆ ಅನುಮತಿ ನೀಡಿದ್ದೇವೆ ಎಂದು ಮಾಡಿದ ಟ್ವೀಟ್‌ ಹಾಗೂ ಅದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ‘ಧನ್ಯವಾದ’ ಎಂದು ಉತ್ತರಿಸಿದ್ದು ಸುಳ್ಳಾ?’ ಎಂದು ಪ್ರಶ್ನಿಸಿದ್ದಾರೆ.