ಕರ್ನಾಟಕದಲ್ಲಿ ಸಂಪುಟ ವಿಸ್ತರಣೆ ಕಾವೇರಿದ ಸಂದರ್ಭದಲ್ಲಿಯೇ ಇತ್ತ ಬಿಜೆಪಿಯಲ್ಲಿ ಮತ್ತೆ ಆಪರೇಷನ್ ಕಮಲದ ಚರ್ಚೆ ಜೋರಾಗಿದೆ ಎನ್ನಲಾಗುತ್ತಿದೆ.
ಬೆಂಗಳೂರು : ಇಬ್ಬರು ಸಚಿವರಿಗೆ ಕೊಕ್ ನೀಡಿ ಸಂಪುಟ ಪುನರ್ ರಚನೆಗೆ ಮುಂದಾಗಿರುವ ಕಾಂಗ್ರೆಸ್ ಹೈಕಮಾಂಡ್ನ ನಿರ್ಧಾರದಿಂದ ಬಿಜೆಪಿಯಲ್ಲಿ ಆಪರೇಷನ್ ಕಮಲದ ಆಸೆ ಮತ್ತೆ ಚಿಗುರಲು ಅವಕಾಶ ದೊರಕಿದಂತಾಗಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಬಿಜೆಪಿ ಜತೆ ಗುರುತಿಸಿಕೊಂಡ ಬಹುತೇಕರನ್ನು ಈ ಬಾರಿ ಸಂಪುಟದಿಂದ ಹೊರಗಿಡಲಾಗಿದೆ. ಹೊಸಕೋಟೆ ಶಾಸಕ ಎಂ.ಟಿ.ಬಿ. ನಾಗರಾಜ್ ಅವರನ್ನು ಹೊರತುಪಡಿಸಿ ಉಳಿದ ಎಲ್ಲಾ ಅತೃಪ್ತರನ್ನು ಹೊರಗಿಡಲಾಗಿದೆ. ಇದೆಲ್ಲಕ್ಕೂ ಹೆಚ್ಚಾಗಿ ಬಿಜೆಪಿ ಜತೆಗಿನ ಕಾಂಗ್ರೆಸ್ ಶಾಸಕರ ಸಖ್ಯದ ನೇತೃತ್ವ ವಹಿಸಿದ್ದ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ತೆಗೆಯುವ ಮೂಲಕ ಪಕ್ಷದ ವಿರುದ್ಧ ಹೋಗುವವರಿಗೆ ಶಿಕ್ಷೆ ನೀಡುವ ಸಂದೇಶ ನೀಡಿದೆ.
ಇದು ಸಹಜವಾಗಿಯೇ ಬಿಜೆಪಿ ಜತೆ ಸಖ್ಯ ಹೊಂದಿದ್ದ ಕಾಂಗ್ರೆಸ್ ಶಾಸಕರಿಗೆ ಪಕ್ಷದಲ್ಲಿ ಭವಿಷ್ಯವಿಲ್ಲ ಎಂಬ ಭಾವನೆ ಮೂಡಲು ಕಾರಣವಾಗಿದ್ದು, ಇದರ ಲಾಭವನ್ನು ಬಿಜೆಪಿ ಪಡೆಯುವ ಎಲ್ಲಾ ಸಾಧ್ಯತೆಯಿದೆ.
ಲಿಂಗಾಯತ ಸಮುದಾಯದಿಂದ ಸಚಿವ ಸ್ಥಾನಕ್ಕಾಗಿ ಬಿ.ಸಿ. ಪಾಟೀಲ್ ಹಾಗೂ ಬಿ.ಕೆ. ಸಂಗಮೇಶ್ ತೀವ್ರ ಪ್ರಯತ್ನ ನಡೆಸಿದ್ದರು. ಆದರೆ, ಪಕ್ಷನಿಷ್ಠ ಹಾಗೂ ಹೈಕಮಾಂಡ್ನೊಂದಿಗಿನ ಸಾಮೀಪ್ಯದ ಕಾರಣ ಎಂ.ಬಿ. ಪಾಟೀಲ್ ಅವರಿಗೆ ಅವಕಾಶ ದೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರಿಂದ ಅತೃಪ್ತಿ ಹೊಂದಿದರೂ ಸಂಗಮೇಶ್ ಅವರಿಗೆ ನಿಗಮ ಮಂಡಳಿ ಸ್ಥಾನ ನೀಡುವ ಮೂಲಕ ಸಮಾಧಾನಪಡಿಸುವ ಪ್ರಯತ್ನ ನಡೆಸಲಾಗಿದೆ.
ಆದರೆ, ಬಿಜೆಪಿಯಿಂದ ಹಲವು ಬಾರಿ ಆಮಿಷಕ್ಕೆ ಒಳಗಾಗಿಯೂ ಕಾಂಗ್ರೆಸ್ನಲ್ಲೇ ಉಳಿದ ಬಿ.ಸಿ. ಪಾಟೀಲ್ ಅವರ ಅತೃಪ್ತಿ ಶಮನ ಮಾಡುವುದು ಕಷ್ಟ.
ಅದೇ ರೀತಿ ಬಳ್ಳಾರಿಯಿಂದ ಸ್ಥಳೀಯರ ವಿರೋಧದ ನಡುವೆಯೂ ತುಕಾರಾಂ ಅವರಿಗೆ ಅವಕಾಶ ನೀಡಲಾಗಿದೆ. ಇದರಿಂದಾಗಿ ರಮೇಶ್ ಜಾರಕಿಹೊಳಿ ತಂಡದಲ್ಲಿ ಗುರುತಿಸಿಕೊಂಡಿದ್ದ ನಾಗೇಂದ್ರ ಹಾಗೂ ಆನಂದ್ ಸಿಂಗ್ ಅವರ ತುಮುಲ ಹೆಚ್ಚಾಗಬಹುದು.
ಇನ್ನು ಲಂಬಾಣಿ ಸಮುದಾಯದಿಂದ ಬಳ್ಳಾರಿ ಪರಮೇಶ್ವರ್ ನಾಯ್ಕ್ ಅವಕಾಶ ನೀಡಿ ಉಮೇಜ್ ಜಿ. ಜಾಧವ್ ಅವರನ್ನು ಕೈ ಬಿಟ್ಟಿರುವುದು ಅವರು ಬಂಡೇಳಲು ಕಾರಣವಾಗಬಹುದು. ಮಲ್ಲಿಕಾರ್ಜುನ ಖರ್ಗೆ ಅವರು ಪ್ರಯತ್ನ ನಡೆಸಿದರೂ ಜಾಧವ್ಗೆ ಸಚಿವ ಸ್ಥಾನ ದೊರೆಯದ ಕಾರಣ ಜಾಧವ್ ಈಗ ಖರ್ಗೆ ವಿರುದ್ಧವೇ ಬಂಡೇಳುವ ಸಾಧ್ಯತೆಯಿದೆ ಎನ್ನಲಾಗಿದೆ.
ಇನ್ನು ಅತೃಪ್ತರೊಂದಿಗೆ ಗುರುತಿಸಿಕೊಂಡಿದ್ದ ಡಾ. ಸುಧಾಕರ್, ಪ್ರತಾಪ್ಗೌಡ ಪಾಟೀಲ್ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಲಾಗಿಲ್ಲ.
ಅತೃಪ್ತ ಹಿರಿಯರಿಗೂ ಕ್ಯಾರೆ ಎಂದಿಲ್ಲ: ಇದಲ್ಲದೆ, ರಾಜ್ಯ ನಾಯಕತ್ವದ ವಿರುದ್ಧ ಅಸಮಾಧಾನ ಹೊಂದಿದ್ದ ಹಿರಿಯ ಶಾಸಕರಾದ ರಾಮಲಿಂಗಾರೆಡ್ಡಿ, ರೋಷನ್ಬೇಗ್, ಎಚ್.ಕೆ. ಪಾಟೀಲ್, ಎಚ್.ಎಂ. ರೇವಣ್ಣ ಅವರ ಬಗ್ಗೆಯೂ ಹೈಕಮಾಂಡ್ ಕ್ಯಾರೆ ಎಂದಿಲ್ಲ. ಈ ಎಲ್ಲಾ ಇದು ಕಾಂಗ್ರೆಸ್ನಲ್ಲಿ ಆಂತರಿಕ ತುಮುಲ ಹುಟ್ಟುಹಾಕುವ ಸಾಧ್ಯತೆಯಿದ್ದು, ಇದರ ಲಾಭವನ್ನು ಬಿಜೆಪಿ ಪಡೆಯಲು ಯತ್ನಿಸುವ ಎಲ್ಲಾ ಸಾಧ್ಯತೆಗಳಿವೆ.
