ಬೆಂಗಳೂರು (ಮೇ. 30): ಬೇಸಿಗೆ ರಜೆ ಮುಗಿದ ಹಿನ್ನೆಲೆಯಲ್ಲಿ ಬುಧವಾರದಿಂದ ರಾಜ್ಯಾದ್ಯಂತ (ಹೈದರಾಬಾದ್‌ ಕರ್ನಾಟಕ ಹೊರತುಪಡಿಸಿ) ಶಾಲೆಗಳು ಪುನಾರಂಭಗೊಂಡಿದ್ದು, ಮಕ್ಕಳು ಹೊಸ ಸಮವಸ್ತ್ರ ತೊಟ್ಟು, ಪಠ್ಯಪುಸ್ತಕದ ಬ್ಯಾಗನ್ನು ಹೆಗಲಿಗೇರಿಸಿಕೊಂಡು ಶಾಲೆಗಳತ್ತ ಹೆಜ್ಜೆ ಹಾಕಿದ್ದಾರೆ.

ಮಕ್ಕಳನ್ನು ಸ್ವಾಗತಿಸಲು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ತಳಿರು- ತೋರಣಗಳಿಂದ ಸಿಂಗಾರಗೊಂಡಿದ್ದವು. ಕೆಲ ಶಾಲಾ ಆವರಣದಲ್ಲಿ ಮಕ್ಕಳೇ ಬಿಡಿಸಿದ್ದ ರಂಗೋಲೆಗಳು ಶಾಲೆಯ ರಂಗು ಹೆಚ್ಚಿಸಿದ್ದವು. ಕೈಯಲ್ಲಿ ಸಿಹಿ ತಿನಿಸು ಹಿಡಿದು ಕಾಯ್ದಿದ್ದ ಶಿಕ್ಷಕರು ಶಾಲೆಗೆ ಮರಳಿದ ವಿದ್ಯಾರ್ಥಿಗಳಿಗೆ ಹಂಚಿ ಬರಮಾಡಿಕೊಂಡರು.

ಪ್ರಸಕ್ತ ಸಾಲಿಗೆ ನೂತನವಾಗಿ ದಾಖಲಾತಿ ಪಡೆದಿರುವ ವಿದ್ಯಾರ್ಥಿಗಳನ್ನು ವಿಶೇಷವಾಗಿ ಶಾಲೆಗೆ ಸ್ವಾಗತಿಸಲಾಯಿತು. ಸ್ಥಳೀಯವಾಗಿ ಸಾಧನೆ ಮಾಡಿದ ಅತಿಥಿಗಳಿಂದ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ವಿಶೇಷ ಉಪನ್ಯಾಸವನ್ನು ಕೆಲವು ಕಡೆ ಆಯೋಜಿಸಲಾಗಿತ್ತು.

ಇನ್ನು ಕೆಲವೊಂದು ಶಾಲೆಗಳಲ್ಲಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯಿಂದ ಮಕ್ಕಳಿಗೆ ಸಿಹಿ ಕೂಡ ಹಂಚಿಕೆ ಮಾಡಿದ್ದರು. ಎಲ್ಲೆಡೆ 2019-20ನೇ ಸಾಲಿನ ಶಾಲಾ ಆರಂಭೋತ್ಸವ ಅದ್ಧೂರಿಯಾಗಿ ನಡೆದಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರದಿಂದ ಶೈಕ್ಷಣಿಕ ತರಗತಿಗಳು ಆರಂಭವಾಗಲಿವೆ. ಈ ವೇಳೆಗೆ ವಿದ್ಯಾರ್ಥಿಗಳಿಗೆ ಶಾಲೆಯಿಂದ ನೀಡಲಿರುವ ಸೌಲಭ್ಯಗಳನ್ನು ವಿತರಣೆ ಮಾಡಲಾಗುತ್ತದೆ. ಅಲ್ಲದೆ, ಬ್ಯಾಗ್‌ ಮತ್ತು ಪಠ್ಯಪುಸ್ತಕದ ಮಾಹಿತಿಯನ್ನು ನೀಡಲಾಗುತ್ತದೆ.

ಶಾಲಾ ಆವರಣ, ತರಗತಿ ಕೊಠಡಿ, ಶೌಚಾಲಯ ಇತ್ಯಾದಿ ಎಲ್ಲವನ್ನು ಸ್ವಚ್ಛ ಮಾಡಲಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಎಲ್ಲ ಶಾಲೆಗಳಲ್ಲೂ ಮಾಡಲಾಗಿದೆ. ಕಲಬುರಗಿ ಮತ್ತು ಯಾದಗಿರಿಯಲ್ಲಿ ಬಿಸಿಲಿನ ತಾಪ ಹೆಚ್ಚಿರುವುದರಿಂದ ತರಗತಿಗಳು ಜೂನ್‌ 14 ರಿಂದ ಆರಂಭವಾಗಲಿದೆ.

ಇನ್ನು, ಮೊದಲ ದಿನ ಶಾಲೆಗೆ ಮರಳಿದ ಮಕ್ಕಳು ಪರಸ್ಪರ ಹಸ್ತಲಾಘವ ಮಾಡಿಕೊಂಡು ಖುಷಿಪಟ್ಟರು. ರಜೆ ದಿನಗಳಲ್ಲಿ ಅಜ್ಜಿಯ ಮನೆ, ಮಾವನ ಮನೆ, ಪ್ರವಾಸ, ಜಾತ್ರೆ ಹೀಗೆ ಎಲ್ಲೆಲ್ಲಿ ಹೋಗಿದ್ದೆವು, ಏನೇನು ಮಾಡಿದೆವು ಎಂಬ ಬಗ್ಗೆ ಪರಸ್ಪರ ವಿಷಯ ಹಂಚಿಕೊಂಡು ಸಂಭ್ರಮಿಸಿದ್ದು ಕಂಡುಬಂತು. ಕೊನೆಗೆ ಶಾಲೆಯಲ್ಲಿ ತಯಾರಿಸಿ ಬಿಸಿಯೂಟ ಸವಿದು ಸಂಜೆ ಮನೆಗೆ ಮರಳಿದರು.

ಮಿಂಚಿನ ಸಂಚಾರ

ತರಗತಿಗಳ ಆರಂಭದ ಬೆನ್ನಲ್ಲೇ, ಆಯಾ ಜಿಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳು ಮಿಂಚಿನ ಸಂಚಾರದ ಮೂಲಕ ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿ ಶೈಕ್ಷಣಿಕ ಚಟುವಟಿಕೆ ಹಾಗೂ ಸೌಲಭ್ಯದ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.

ಈ ಸಂಬಂಧ ಎಲ್ಲಾ ಡಿಡಿಪಿಐಗಳಿಗೆ ಮತ್ತು ಬಿಇಓಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಶಾಲೆಯ ಸ್ವಚ್ಛತೆ ಆಗಿದೆಯಾ? ಶೌಚಾಲಯ, ಕುಡಿಯುವ ನೀರಿನ ವ್ಯವಸ್ಯೆ ಸರಿಯಾಗಿದೆಯಾ? ಬಿಸಿಯೂಟಕ್ಕೆ ಅಗತ್ಯ ಆಹಾರ ಪದಾರ್ಥಗಳು, ಮಕ್ಕಳಿಗೆ ಪ್ರಸಕ್ತ ಸಾಲಿನ ಸಮವಸ್ತ್ರ , ಪಠ್ಯಪುಸ್ತಕಗಳ ಸರಬರಾಜು ಆಗಿದೆಯೇ ಎಂದು ಪರಿಶೀಲಿಸಬೇಕು. ಜೊತೆಗೆ ಮಕ್ಕಳ ಹಾಜರಾತಿ ಮತ್ತಿತರ ಅಂಶಗಳನ್ನು ಅಧಿಕಾರಿಗಳು ಪರಿಶೀಲಿಸಿ, ವರದಿ ಸಲ್ಲಿಸಬೇಕೆಂದು ಸೂಚಿಸಲಾಗಿದೆ.