ಅಪರಾಧ ಪ್ರಕರಣದಲ್ಲಿ ಯಾವುದೇ ಆರೋಪಿಯನ್ನು ಪೊಲೀಸ್ ವಶ ಅಥವಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ (ರಿಮ್ಯಾಂಡ್ ಆರ್ಡರ್) ಹೊರಡಿಸಿದ ದಿನದಿಂದ ಆತನ ಬಂಧನದ ಅವಧಿ ಆರಂಭವಾಗುತ್ತದೆಯೇ ಹೊರತು ಪೊಲೀಸರು ಬಂಧಿಸಿದ ದಿನದಿಂದ ಅಲ್ಲ. ಹಾಗಾಗಿ ರಿಮ್ಯಾಂಡ್ ಆರ್ಡರ್ ದಿನದಿಂದ 90 ದಿನಗಳಲ್ಲಿ ಸಂಬಂಧಪಟ್ಟ ಕೋರ್ಟ್‌ಗೆ ತನಿಖಾಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ

ಜಾಮೀನು ಅರ್ಜಿ ಸಂಬಂಧ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಇತ್ತೀಚೆಗೆ ಈ ಆದೇಶ ಹೊರಡಿಸಿ ಘಟನೆ ನಡೆದ ನಂತರ ಪೊಲೀಸರ ಕಣ್ಗಾವಲಿನಲ್ಲೇ ಎರಡು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ಪೊಲೀಸರು ಕಣ್ಗಾವಲು ಇರಿಸಿದ ಕ್ಷಣದಿಂದಲೇ ನನ್ನ ಬಂಧನ ಅವಧಿ ಆರಂಭವಾಗಿದೆ. ಅದಾಗಿ 90 ದಿನ ಕಳೆದರೂ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸದ ಕಾರಣ ನಿಯಮದ ಪ್ರಕಾರ ಜಾಮೀನು ಪಡೆಯಲು ನಾನು ಅರ್ಹನಾಗಿದ್ದೇನೆ ಎಂಬುದು ಆರೋಪಿಯ ವಾದವಾಗಿತ್ತು.

ಈ ವಾದ ತಿರಸ್ಕರಿಸಿದ ನ್ಯಾಯಪೀಠ, ಸಿಆರ್‌ಪಿಸಿ ಸೆಕ್ಷನ್ 57 ಹಾಗೂ 167(2) ಆರೋಪಿಯನ್ನು ಪೊಲೀಸ್ ವಶ ಅಥವಾ ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದ ದಿನದಿಂದ ಆತನ ಬಂಧನ ಅವಧಿ ಆರಂಭವಾಗುತ್ತದೆ. ಆ ದಿನದಿಂದಲೇ ದೋಷಾರೋಪ ಪಟ್ಟಿ ಸಲ್ಲಿಸುವ 90 ದಿನದ ಲೆಕ್ಕ ಹಾಕಬೇಕಾಗುತ್ತದೆ. ಅದು ಬಿಟ್ಟು ಪೊಲೀಸರು ವಶಕ್ಕೆ ಪಡೆದ ದಿನದಿಂದಲ್ಲ.

ಅದರಂತೆ ಅರ್ಜಿದಾರರನ್ನು ಪೊಲೀಸರು ವಶಕ್ಕೆ ಪಡೆದದ್ದು ಹಾಗೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದ್ದು 2019 ರ ಫೆ.13 ರಂದು. ಆ ದಿನದಿಂದ ಲೆಕ್ಕಹಾಕಿದರೆ ದೋಷಾರೋಪ ಪಟ್ಟಿ ಸಲ್ಲಿಸಬೇಕಾದ 90 ದಿನಗಳು ಇನ್ನೂ ಪೂರ್ಣಗೊಂಡಿರಲಿಲ್ಲ. ಆದ್ದರಿಂದ 167(2) ಪ್ರಕಾರ ಅರ್ಜಿದಾರ ಜಾಮೀನು ಪಡೆಯಲು ಅರ್ಹನಾಗಿಲ್ಲ ಎಂದು ಆದೇಶಿಸಿತು

ಆದರೆ, ಆರೋಪಿಯು ಕೊಲೆ ಮಾಡುವ ಉದ್ದೇಶವನ್ನು ಹೊಂದಿರಲಿಲ್ಲ ಎಂಬ ಕಾರಣವನ್ನು ಪರಿಗಣಿಸಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು.

ಚಿಕಿತ್ಸೆಯ ಅವಧಿಯನ್ನೂ ಪರಿಗಣಿಸಿ: ಆಕಾಶ್ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರ 2018 ರ ಡಿ.12 ರಿಂದ 2019 ರ ಫೆ.13 ರವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಫೆ.1 ರಂದು ಆತನನ್ನು ಪೊಲೀಸರು ವಶಕ್ಕೆ ಪಡೆದು ಮ್ಯಾಜಿಸ್ಟ್ರೇಟ್ ಕೋಟ್ ಗೆರ್ ಹಾಜರುಪಡಿಸಿದ್ದರು. ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಸಿಆರ್ ಪಿಸಿ ಸೆಕ್ಷನ್ 167(2)ರ ಪ್ರಕಾರ 60 ರಿಂದ 90 ದಿನದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಬೇಕು.

ಪೊಲೀಸರ ಕಣ್ಗಾವಲಿನಲ್ಲೇ ಆರೋಪಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರಿಂದ ಆ ಕ್ಷಣದಿಂದಲೇ ಆತನ ಬಂಧನದ ಅವಧಿಯೂ ಆರಂಭವಾಗಿದೆ. ಏಕೆಂದರೆ ಆತನ ಸ್ವಾತಂತ್ರ್ಯ ನಿರ್ಬಂಧಿಸಲ್ಪಟ್ಟಿದೆ. ಅದರಂತೆ 90 ದಿನ ಪೂರ್ಣಗೊಂಡರೂ ತನಿಖಾಧಿಕಾರಿ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ. ಹೀಗಾಗಿ ಜಾಮೀನು ಪಡೆಯಲು ಅರ್ಜಿದಾರ ಅರ್ಹನಾಗಿದ್ದಾನೆ ಎಂದು ವಾದಿಸಿದ್ದರು. ಅದನ್ನು ಕೋರ್ಟ್ ಒಪ್ಪಲಿಲ್ಲ.

ಪೂರ್ವೋದ್ದೇಶ ಇರಲಿಲ್ಲ ಎಂದು ಜಾಮೀನು: ಆದರೆ ಮಂಜುನಾಥ್‌ನನ್ನು ಕೊಲ್ಲುವ ಉದ್ದೇಶವನ್ನು ಆಕಾಶ್ ಹೊಂದಿರಲಿಲ್ಲ. ಕೊಲೆಗೆ ಪೂರ್ವ ತಯಾರಿ ನಡೆಸಿರಲಿಲ್ಲ. ನಿಜವಾಗಿಯೂ ಕೊಲ್ಲಬೇಕು ಎಂಬ ಉದ್ದೇಶ ಹೊಂದಿದ್ದರೆ ಮನೆಯಿಂದಲೇ ಚಾಕು ತರುತ್ತಿದ್ದ ಹಾಗೂ ಅಂಗಡಿಗೆ ಬಂದ ಕೂಡಲೇ ದಾಳಿ ನಡೆಸುತ್ತಿದ್ದ. ಅದು ಬಿಟ್ಟು ಹೆಲ್ಮೆಟ್ ಬಗ್ಗೆ ಪ್ರಶ್ನಿಸುತ್ತಿರಲಿಲ್ಲ. ಹೀಗಾಗಿ, ಮಂಜುನಾಥನನ್ನು ಕೊಲೆ ಮಾಡುವ ಉದ್ದೇಶ ಹೊಂದಿರದ ಕಾರಣ ಆಕಾಶ್‌ಗೆ ಜಾಮೀನು ನೀಡಬಹುದು ಎಂದು ತಿಳಿಸಿದ ನ್ಯಾಯಪೀಠ ಆತನಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು.

- ವೆಂಕಟೇಶ್ ಕಲಿಪಿ