ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬಳಿಕ ಮತ್ತೋರ್ವ ಮುಖಂಡ ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಉದ್ಯಮಿ ರತನ್ ಟಾಟಾ ಅವರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ ಅವರ ಜತೆ ವೇದಿಕೆ ಹಂಚಿಕೊಳ್ಳಲು ಮುಂದಾಗಿದ್ದಾರೆ.
ಮುಂಬೈ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬಳಿಕ ದೇಶದ ಹೆಸರಾಂತ ಉದ್ಯಮಿ ರತನ್ ಟಾಟಾ ಅವರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ ಅವರ ಜತೆ ವೇದಿಕೆ ಹಂಚಿಕೊಳ್ಳಲು ಮುಂದಾಗಿದ್ದಾರೆ.
ಆ.24ರಂದು ನಾನಾ ಪಾಲ್ಕರ್ ಸ್ಮೃತಿ ಸಮಿತಿಯ ಕಾರ್ಯಕ್ರಮ ಮುಂಬೈನಲ್ಲಿ ನಡೆಯಲಿದೆ. ಅದರಲ್ಲಿ ಟಾಟಾ ಹಾಗೂ ಭಾಗವತ್ ಅವರು ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎಂದು ಆರ್‌ಎಸ್‌ಎಸ್ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬೈನಲ್ಲಿರುವ ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ನಾನಾ ಪಾಲ್ಕರ್ ಸ್ಮೃತಿ ಸಮಿತಿ ತನ್ನ ಕಚೇರಿ ಹೊಂದಿದೆ. ಕ್ಯಾನ್ಸರ್ ರೋಗಿಗಳಿಗೆ ಸೇವೆ ಸಲ್ಲಿಸಿಕೊಂಡು ಬಂದಿದೆ. ನಾನಾ ಪಾಲ್ಕರ್ ಅವರು ಆರೆಸ್ಸೆಸ್‌ನ ಪ್ರಚಾರಕರಾಗಿದ್ದವರು. ರತನ್ ಟಾಟಾ ಅವರು ಪಾಲ್ಕರ್ ಸ್ಮೃತಿ ಸಮಿತಿ ಎನ್‌ಜಿಒದ ಕಾರ್ಯನಿರ್ವಹಣೆಗಳ ಬಗ್ಗೆ ಮಾಹಿತಿ ಹೊಂದಿದ್ದಾರೆ.
ರತನ್ ಹಾಗೂ ಭಾಗವತ್ ಭೇಟಿ ಕುರಿತು ಪ್ರತಿಕ್ರಿಯೆ ನೀಡಲು ಟಾಟಾ ಟ್ರಸ್ಟ್ ವಕ್ತಾರರು ನಿರಾಕರಿಸಿದ್ದಾರೆ. ಈ ಭೇಟಿ ಆಗಿದ್ದೇ ಆದಲ್ಲಿ ಅದು ಖಾಸಗಿಯಾಗಿರಲಿದೆ ಎಂದು ಹೇಳಿದ್ದಾರೆ.
ಆರ್‌ಎಸ್‌ಎಸ್ ಜತೆ ರತನ್ ಟಾಟಾ ಅವರು ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. 2016 ಡಿ.29ರಂದು ತಮ್ಮ 81ನೇ ಜನ್ಮದಿನದಂದು ರತನ್ ಟಾಟಾ ಅವರು ನಾಗಪುರದಲ್ಲಿನ ಆರೆಸ್ಸೆಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದರು. ಕಳೆದ ತಿಂಗಳು ಪ್ರಣಬ್ ಮುಖರ್ಜಿ ಅವರು ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು.
