ನವದೆಹಲಿ: ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೂ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10ರಷ್ಟು ಮೀಸಲು ನೀಡುವ ಮಸೂದೆಗೆ ಸಂಸತ್ತಿನ ಅನುಮೋದನೆ ಸಿಕ್ಕಿದೆ. ಮಂಗಳವಾರವಷ್ಟೇ ಲೋಕಸಭೆಯ ಅನುಮೋದನೆ ಪಡೆದುಕೊಂಡಿದ್ದ ಮಸೂದೆಯನ್ನು, ಬುಧವಾರ ರಾಜ್ಯಸಭೆಯಲ್ಲಿ ಮಂಡಿಸಿ ಮತಕ್ಕೆ ಹಾಕಿದ ವೇಳೆ, ಮಸೂದೆಯ  ಪರವಾಗಿ 165 ಮತಗಳು ಮತ್ತು ವಿರೋಧವಾಗಿ 7 ಮತಗಳು  ಚಲಾವಣೆಯಾದವು. 

ಸುಮಾರು 10 ತಾಸುಗಳ ಕಾಲ ಮಸೂದೆ ಪರ- ವಿರೋಧ ಚರ್ಚೆ ನಡೆಯಿತು. ಇದರೊಂದಿಗೆ ದೇಶದ ಕನಿಷ್ಠ 19 ಕೋಟಿ ಜನರಿಗೆ ನೇರವಾಗಿ ಲಾಭ ತರಬಹುದು ಎಂದು ಹೇಳಲಾಗಿರುವ ಮಸೂದೆ ಕಾಯ್ದೆ ಸ್ವರೂಪ ಪಡೆದುಕೊಳ್ಳಲು ಇನ್ನು ಒಂದು ಹೆಜ್ಜೆ ಮಾತ್ರ ಬಾಕಿ ಉಳಿದಂತಾಗಿದೆ. ಮಸೂದೆ ಶೀಘ್ರ ರಾಷ್ಟ್ರಪತಿಗಳ ಬಳಿಗೆ ಹೋಗಲಿದೆ. 

ರಾಷ್ಟ್ರಪತಿ ಅವರ ಸಹಿ ಬೀಳುತ್ತಲೇ ಕಾಯ್ದೆ ಸ್ವರೂಪ ಪಡೆದುಕೊಳ್ಳಲಿದೆ. ಸಂವಿಧಾನಕ್ಕೆ 124 ನೇ ತಿದ್ದುಪಡಿ ಈ ಮಸೂದೆಯನ್ನು ಹಣಕಾಸು ಮಸೂದೆ ಸ್ವರೂಪದಲ್ಲಿ ಮಂಡಿಸಿದ್ದ ಕಾರಣ, ಇದಕ್ಕೆ ಒಟ್ಟು ರಾಜ್ಯಗಳ ಪೈಕಿ ಅರ್ಧಕ್ಕಿಂತ ಹೆಚ್ಚಿನ ರಾಜ್ಯಗಳ ಒಪ್ಪಿಗೆಯೂ ಬೇಕಾಗಿಲ್ಲ. 

ಸುದೀರ್ಘ ಚರ್ಚೆ: ಮೀಸಲು ಮಸೂದೆಯನ್ನು ಬುಧವಾರ ಬೆಳಗ್ಗೆಯೇ ಸರ್ಕಾರ ರಾಜ್ಯಸಭೆಯಲ್ಲಿ ಮಂಡಿಸಿತು. ಆದರೆ ರಾಜಕೀಯ ಕಾರಣಕ್ಕಾಗಿ ಸರ್ಕಾರ ಮಸೂದೆ ಮಂಡಿಸುತ್ತಿದೆ ಎಂದು ವಿಪಕ್ಷಗಳು ಆರೋಪಿಸಿ ಭಾರೀ ಗದ್ದಲ ಎಬ್ಬಿಸಿದವು. 

ಒಂದೆಡೆ ಸರ್ಕಾರಿ ಉದ್ಯೋಗಗಳು ಕುಸಿತ ಕಾಣುತ್ತಿರುವಾಗ, ಉದ್ಯೋಗ ರಹಿತ ಆರ್ಥಿಕತೆಗೆ ದೇಶ ಸಾಕ್ಷಿಯಾಗಿರುವ ಮೀಸಲಿನ ಮೂಲಕ ಕೋಟ್ಯಂತರ ಜನರಿಗೆ ಸರ್ಕಾರ ಹೇಗೆ ಉದ್ಯೋಗ ಕಲ್ಪಿಸಲಿದೆ? ಈ ಹಿಂದೆ ಹಲವು ಬಾರಿ ಸುಪ್ರೀಂ ಪರೀಕ್ಷೆಯಲ್ಲಿ ವಿಫಲಗೊಂಡಿರುವ ಮಸೂದೆ ಈ ಬಾರಿ ಹೇಗೆ ನ್ಯಾಯಾಲಯದ ಪರೀಕ್ಷೆ ಪಾಸಾಗಲಿದೆ? ಮಸೂದೆ ಮಂಡನೆಯ ಮುನ್ನ ಸರ್ಕಾರ ಯಾವುದಾದರೂ ಸಮೀಕ್ಷೆ ನಡೆಸಿ ಅಂಕಿ ಅಂಶ ಕಲೆ ಹಾಕಿದೆಯೇ? ಆದಾಯ ತೆರಿಗೆ ವಿನಾಯಿತಿಗೆ 2.5 ಲಕ್ಷ ರು. ಮಿತಿ ಹಾಕಿರುವ ಸರ್ಕಾರ,  ಮೀಸಲು ಪಡೆಯಲು 8 ಲಕ್ಷ ರು. ಆದಾಯ ಮಿತಿ ಹಾಕಿದ್ದರ ಲೆಕ್ಕಾಚಾರ ಏನು? ಎಂದು ಪ್ರಶ್ನಿಸಿದವು. ಜೊತೆಗೆ ಮಸೂದೆಯನ್ನು ಆಯ್ಕೆ ಸಮಿತಿಗೆ  ವಹಿಸಬೇಕು ಎಂದು ಆಗ್ರಹಿಸಿದವು. 

ಭರವಸೆ: ಸರ್ಕಾರದ ಪರವಾಗಿ ಉತ್ತರಿಸಿದ ಸಾಮಾಜಿಕ ನ್ಯಾಯ ಖಾತೆ ಸಚಿವ ಥಾವರ್ ಚಂದ್ ಗೆಹ್ಲೋಟ್ ‘ಇದೊಂದು ಐತಿಹಾಸಿಕ  ಮಸೂದೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ, ಸಮಾಜದ ಕೆಳವರ್ಗದಲ್ಲಿ ಜನಿಸಿದರೂ, ಸಮಾಜದ ಮೇಲ್ವರ್ಗದ ಜನರಿಗೆ ಮೀಸಲು ನೀಡಲು ನಿರ್ಧರಿಸಿದ್ದಾರೆ. ಈ ಹಿಂದಿನ ಕೆಲ ಸರ್ಕಾರಗಳು ಇಂಥ ಮೀಸಲು ನೀಡಲು ಮುಂದಾಗಿದ್ದವಾದರೂ, ಸಂವಿಧಾನಕ್ಕೆ ಸೂಕ್ತ ತಿದ್ದುಪಡಿ ತರದೆಯೇ ಮೀಸಲು ನೀಡಿದ್ದವು. ಹೀಗಾಗಿ ಅವು ನ್ಯಾಯಾಲಯದಲ್ಲಿ ಬಿದ್ದು ಹೋಗಿದ್ದವು. ಆದರೆ ಎನ್‌ಡಿಎ ಸರ್ಕಾರ ಸಂವಿಧಾನದ ಕಾಯ್ದೆಗೆ ಸೂಕ್ತ ತಿದ್ದುಪಡಿ ಮೂಲಕ ಮೀಸಲು ಪ್ರಮಾಣವನ್ನು ಶೇ. 50 ರಿಂದ ಶೇ. 60 ಕ್ಕೆ ಹೆಚ್ಚಿಸುತ್ತಿದೆ. ಇದರಿಂದ ಸಮಾಜದ ಯಾವುದೇ ವರ್ಗಕ್ಕೂ ಅನ್ಯಾಯವಾಗದು’ ಎಂದು ಭರವಸೆ ನೀಡಿದರು. ಜೊತೆಗೆ ಚುನಾವಣೆ ವೇಳೆ ಮಸೂದೆ ಮಂಡನೆಯನ್ನು ಸಮರ್ಥಿಸಿಕೊಂಡ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಕ್ರಿಕೆಟ್‌ನಲ್ಲಿ ಕಡೆಯ ಓವರ್‌ಗಳಲ್ಲಿ ಹೆಚ್ಚೆಚ್ಚು ಸಿಕ್ಸರ್ ಹೊಡೆಯುವಂತೆ ನಾವೂ ಸಿಕ್ಸರ್ ಹೊಡೆಯುತ್ತಿದ್ದೇವೆ. ಮುಂದೆ ಇನ್ನಷ್ಟು ಸಿಕ್ಸರ್ ಕಾದಿವೆ ಎಂದು ಕ್ರಿಕೆಟ್ ಮಾದರಿಯಲ್ಲಿ ಉದಾಹರಣೆ ನೀಡಿದರು.