ಬೆಂಗಳೂರು [ಜು.27] :  ಸರ್ಕಾರದ ಬಹುಮತ ಸಾಬೀತು ಪ್ರಕ್ರಿಯೆ ಮುಗಿದ ನಂತರ ದೆಹಲಿಗೆ ತೆರಳಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ನೂತನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಿರ್ಧರಿಸಿದ್ದಾರೆ.

ಈ ಮೊದಲು ಯಡಿಯೂರಪ್ಪ ಅವರು ಶನಿವಾರವೇ ದೆಹಲಿಗೆ ತೆರಳಿ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸುವುದರ ಜೊತೆಗೆ ಸಂಪುಟ ವಿಸ್ತರಣೆಯ ಬಗ್ಗೆಯೂ ಚರ್ಚೆ ಮಾಡುವ ಚಿಂತನೆ ನಡೆಸಿದ್ದರು. ಆದರೆ, ವಿಶ್ವಾಸಮತ ಯಾಚನೆಗೆ ಸೋಮವಾರವೇ ದಿನ ನಿಗದಿ ಮಾಡಿರುವುದರಿಂದ ಅದನ್ನು ಮುಗಿಸಿಕೊಂಡು ದೆಹಲಿಗೆ ತೆರಳಿದರೆ ಹೆಚ್ಚು ತೂಕ ಇರುತ್ತದೆ ಎಂಬ ನಿಲುವಿಗೆ ಬಂದರು ಎಂದು ಮೂಲಗಳು ತಿಳಿಸಿವೆ.

ಬಹುಮತ ಸಾಬೀತುಪಡಿಸಿದ ನಂತರ ಸಂಪುಟ ವಿಸ್ತರಣೆಯ ಸವಾಲು ಎದುರಾಗಲಿದೆ. ಹೀಗಾಗಿ, ಅದನ್ನು ಸಮರ್ಥವಾಗಿ ನಿಭಾಯಿಸಬೇಕಿದೆ. ಆ ಬಗ್ಗೆ ವರಿಷ್ಠರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರೆ ಮುಂದಿನ ದಿನಗಳಲ್ಲಿ ಸರ್ಕಾರವೂ ಸುಗಮವಾಗಿ ನಡೆಯುತ್ತದೆ ಎಂಬುದು ಯಡಿಯೂರಪ್ಪ ಅವರ ಅಭಿಪ್ರಾಯ ಎನ್ನಲಾಗಿದೆ.